Site icon Vistara News

Robbery Case | ಪಟಾಕಿ ಮಾಲೀಕನನ್ನು ಅಡ್ಡಗಟ್ಟಿ ರಾಬರಿ; 20 ಲಕ್ಷ ರೂಪಾಯಿ ಎಗರಿಸಿ ಪರಾರಿ

ಆನೇಕಲ್: ದೀಪಾವಳಿ ಹಬ್ಬದ ಭರ್ಜರಿ ವ್ಯಾಪಾರದೊಂದಿಗೆ ಮನೆಗೆ ತೆರಳುತ್ತಿದ್ದ ಪಟಾಕಿ ಅಂಗಡಿ ಮಾಲೀಕನನ್ನು ಅಡ್ಡಗಟ್ಟಿ ರಾಬರಿ (Robbery Case) ಮಾಡಿರುವ ಘಟನೆ ಅತ್ತಿಬೆಲೆ ಚೆಕ್‌ ಪೋಸ್ಟ್‌ ಬಳಿ ನಡೆದಿದೆ. ತಮಿಳುನಾಡಿನ ಚಿನ್ನ ಯಳಸಗೆರೆ ವಾಸಿ ಚಂದ್ರಶೇಖರ್ ರೆಡ್ಡಿ ಅವರಿಗೆ ಇಬ್ಬರು ದುಷ್ಕರ್ಮಿಗಳು ಲಾಂಗ್‌ನಿಂದ ಹಲ್ಲೆ ನಡೆಸಿ ರಾಬರಿ ಮಾಡಿದ್ದಾರೆ.

ಹಲ್ಲೆಗೊಳಗಾದ ಚಂದ್ರಶೇಖರ್ ರೆಡ್ಡಿ

ಕಾರು ಅಡ್ಡಗಟ್ಟಿದ ಖದೀಮರು, ಮೊದಲಿಗೆ ಕಾರಿನ ಗಾಜು ಹೊಡೆದು ಲಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ. ಚಂದ್ರಶೇಖರ್‌ ಬಳಿಯಿದ್ದ, ಇಪ್ಪತ್ತು ಲಕ್ಷ ರೂ. ಹಣ ಎಗರಿಸಿ ಪರಾರಿಯಾಗಿದ್ದಾರೆ. ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಬಾರ್ಡರ್ ಕಳೆದ 22ರ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ.

ಕಾದು ಕುಳಿತಿದ್ದ ದುರ್ಷಕರ್ಮಿಗಳು
ಚಂದ್ರಶೇಖರ್ ರೆಡ್ಡಿ ಅವರು ಹೆಬ್ಬಗೋಡಿಯಲ್ಲಿ ಪಟಾಕಿ ಅಂಗಡಿ ಹಾಕಿಕೊಂಡಿದ್ದರು. ಅವರ ವ್ಯಾಪಾರ-ವಹಿವಾಟಿನ ಬಗ್ಗೆ ಮಾಹಿತಿ ಕಲೆಹಾಕಿದ್ದ ದುರ್ಷಕರ್ಮಿಗಳು, ಚಂದ್ರಶೇಖರ್‌ ಪಟಾಕಿ ವ್ಯಾಪಾರ ಮುಗಿಸಿ ಮನೆಗೆ ಹೋಗುವುದನ್ನೇ ಹೊಂಚು ಹಾಕಿ ಕಾದುಕುಳಿತಿದ್ದರು. ಇದೇ ಸಂದರ್ಭದಲ್ಲಿ ಚಂದ್ರಶೇಖರ್‌ ಅವರು ತಮ್ಮ ಮಹೇಂದ್ರ ಥಾರ್‌ ಕಾರಿನಲ್ಲಿ ಬಂದಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಬೈಕ್‌ ಏರಿದ ಇಬ್ಬರು ಫಾಲೋ ಮಾಡಿ ಕಾರನ್ನು ಅಡ್ಡಗಟ್ಟಿದ್ದಾರೆ. ಆಗ ಒಮ್ಮೆ ಚಂದ್ರಶೇಖರ್‌ಗೆ ಗಾಬರಿಯಾಗಿದೆ. ನೋಡ ನೋಡುತ್ತಿದ್ದಂತೆ ದುರ್ಷಕರ್ಮಿಗಳು ಕಾರಿನ ಗಾಜು ಒಡೆದಿದ್ದಾರೆ. ಈ ವೇಳೆ ಪ್ರತಿರೋಧ ಒಡ್ಡಿದ ಚಂದ್ರಶೇಖರ್‌ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಬಳಿಯಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಸಿಲಿಕಾನ್‌ ಸಿಟಿಯಲ್ಲಿ ಹಾಡಹಗಲೇ ರಾಬರಿ, ಜನಸಾಮಾನ್ಯರ ಗಾಬರಿ

Exit mobile version