ಆನೇಕಲ್: ನೀವೂ ಎಲ್ಐಸಿ ಏಜೆಂಟ್ ಆಗಿದ್ದು, ಮನೆಯ ಮುಂದೆ ಬೋರ್ಡ್ ಹಾಕಿಕೊಂಡಿದ್ದರೆ, ಸ್ವಲ್ಪ ಎಚ್ಚರದಿಂದಿರಿ. ಯಾಕೆಂದರೆ ಎಲ್‌ಐಸಿ ಪಾಲಿಸಿ ಮಾಡಿಸುವ ನೆಪದಲ್ಲಿ ಮನೆಗೆ ಬರುವವರು (Robbery Case) ದರೋಡೆಕೋರರಾಗಿರಬಹುದು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಭುವನೇಶ್ವರಿ ನಗರದಲ್ಲಿ ಸೋಮವಾರ ಮಧ್ಯಾಹ್ನ ಇಂಥದ್ದೊಂದು ಘಟನೆ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಧ್ಯಾಹ್ನ 1:30ರ ಹೊತ್ತಿಗೆ ಡಿಸ್ಕವರಿ ಬೈಕ್‌ನಲ್ಲಿ ಬಂದ ಐವರು ಎಲ್‌ಐಸಿ ಪಾಲಿಸಿ ಮಾಡಿಸುವ ನೆಪದಲ್ಲಿ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಜ್ವರದಿಂದ ಬಳಲುತ್ತಿದ್ದ ಮನೆ ಮಾಲೀಕ ಎಲ್ಐಸಿ ಏಜೆಂಟ್ ದೇವರಾಜಗೌಡ ಅವರ ಕೈಕಾಲು ಕಟ್ಟಿ ಹಾಕಿ ಬಾಯಿಗೆ ಸೆಲ್ಲೋ ಟೇಪ್ ಸುತ್ತಿ ರೂಮಿನಲ್ಲಿ ಕೂಡಿಹಾಕಿದ್ದಾರೆ.
ಮನೆಯಲ್ಲಿ ಶಬ್ಧ ಆಗುತ್ತಿರುವುದನ್ನು ನೋಡಿ ಅಂಗಡಿಯಲ್ಲಿ ಕುಳಿತಿದ್ದ ಪತ್ನಿ ಮಂಜುಳಾ ಮನೆಯ ಒಳಗೆ ಓಡಿ ಬಂದಿದ್ದಾರೆ. ಈ ವೇಳೆ ಖದೀಮರ ಗ್ಯಾಂಗ್ ಮಾರಕಾಸ್ತ್ರಗಳನ್ನು ತೋರಿಸಿ ಅವರನ್ನು ರೂಮಿನಲ್ಲಿ ಕೂಡಿಹಾಕಿದ್ದಾರೆ. ಬಳಿಕ ಬೀರುವಿನಲ್ಲಿದ್ದ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ.
ದೇವರಾಜಗೌಡ ಸುಮಾರು ಮೂವತ್ತು ವರ್ಷಗಳಿಂದ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅತ್ತಿಬೆಲೆ ಸೇರಿದಂತೆ ಸುತ್ತಮುತ್ತಲಿನ ಕಡೆಗಳಲ್ಲಿ ಬಹು ಚಿರಪರಿಚಿತರಾಗಿದ್ದ ಏಜೆಂಟ್ ದೇವರಾಜಗೌಡ ಮನೆಯ ಮುಂಭಾಗ ಎಲ್ಐಸಿ ಏಜೆಂಟ್ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ.
ಮನೆಯ ಮುಂದೆ ಹಾಕಿರುವ ಬೋರ್ಡ್ ನೋಡಿ ಹೊಂಚು ಹಾಕಿದ್ದ ಖದೀಮರು, 20 ದಿನಗಳ ಹಿಂದೆಯೇ ಇಬ್ಬರು ಆಸಾಮಿಗಳು ಸರ್ಜಾಪುರದಿಂದ ಬಂದಿದ್ದೇವೆ ಎಂದು ಹೇಳಿ ಪಾಲಿಸಿ ಬಗ್ಗೆ ವಿಚಾರಿಸಿಕೊಂಡು ಹೋಗಿ ಬಳಿಕ ಪತ್ನಿಯನ್ನು ಕರೆತರುವುದಾಗಿ ಹೇಳಿ ಹೋಗಿದ್ದಾರೆ. ನಂತರ ಕಳೆದ ನಾಲ್ಕೈದು ದಿನಗಳ ಹಿಂದೆ ಬಂದ ಐವರ ತಂಡ ಮತ್ತೆ ಮನೆಯ ವಾತಾವರಣ ಹಾಗೂ ಮನೆಯಲ್ಲಿ ಯಾರ್ಯಾರು ಇದ್ದಾರೆ ಎನ್ನುವ ಬಗ್ಗೆ ನೋಡಿಕೊಂಡು ಹೋಗಿದ್ದರಂತೆ.
ಅದರಂತೆಯೇ ಸೋಮವಾರ ಮಧ್ಯಾಹ್ನ 1.30ರ ಸಮಯಕ್ಕೆ ಮಾರಕಾಸ್ತ್ರಗಳನ್ನು ಹಿಡಿದು ಬಂದ ಗ್ಯಾಂಗ್ ಏಕಾಏಕಿ ಮನೆಯ ಒಳನುಗ್ಗಿ ಎಲ್ಐಸಿ ಏಜೆಂಟ್ ದೇವರಾಜಗೌಡ ಕೈಕಾಲು ಹಾಗೂ ಬಾಯಿಗೆ ಸೆಲ್ಲೋ ಟೇಪ್ ಸುತ್ತಿದ್ದಾರೆ. ಅಷ್ಟರಲ್ಲಿ ಮನೆಯಲ್ಲಿ ಏನೋ ಶಬ್ಧವಾಗುತ್ತಿದೆ ಎಂದು ಅಂಗಡಿಯಲ್ಲಿದ್ದ ಪತ್ನಿ ಮಂಜುಳಾ ಮನೆಯೊಳಗೆ ಬರುತ್ತಿದ್ದಂತೆ ಆಕೆಯನ್ನು ಸಹ ಸೆಲ್ಲೋ ಟೇಪ್‌ನಿಂದ ಕಟ್ಟಿ ಹಾಕಿದ್ದಾರೆ. ರೂಮ್ ಬೀರುವಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ದೋಚಿ ಮನೆಯಿಂದ ಪರಾರಿಯಾಗಿದ್ದಾರೆ.
ಮನೆಗೆ ಅಪರಿಚಿತರು ಯಾರಾದರೂ ಬಂದರೆ ಅವರು ಯಾಕೆ ಬರುತ್ತಾರೆ. ಅವರ ಉದ್ದೇಶ ಏನು ಎನ್ನುವುದನ್ನು ಪರಿಶೀಲನೆ ಮಾಡಿ ಒಳಗೆ ಬಿಟ್ಟು ಕೊಳ್ಳಬೇಕು, ಇಲ್ಲವಾದರೆ ಇಂತಹ ಖದೀಮರು ಹೊಂಚು ಹಾಕಿ ಮನೆಯಲ್ಲೇ ದೋಚುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರದಿಂದ ಇರಿ ಎಂದು ಪೊಲೀಸರು ಜಾಗೃತಿ ಮೂಡಿಸಿದ್ದಾರೆ.
ಇದನ್ನೂ ಓದಿ | Suspicious Death | ಅನುಮಾನಾಸ್ಪದ ರೀತಿಯಲ್ಲಿ ಪೊಲೀಸ್ ಪೇದೆ ಪತ್ನಿ ಸಾವು; ಕೊಲೆ ಎಂದು ಪೋಷಕರ ಆರೋಪ