ಚಿಕ್ಕಬಳ್ಳಾಪುರ: ಇಲ್ಲಿನ ಚಿಂತಾಮಣಿ ತಾಲೂಕಿನ ಚಾಂಡ್ರಹಳ್ಳಿ ಗ್ರಾಮದಲ್ಲಿ ದರೋಡೆಕೋರರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳತನ (Robbery Case) ಮಾಡಲು ಇವರು ಮನೆಯ ಬಾಗಿಲು ಮುರಿಯಲಿಲ್ಲ, ಬದಲಿಗೆ ಇವರು ಬಳಿಸಿದ ಅಸ್ತ್ರ ಲಗ್ನ ಪತ್ರಿಕೆ. ರಾತ್ರಿ 10 ಗಂಟೆಯ ನಂತರವೇ ದೋಚಲು ಬರುವ ಇವರು, ಲಗ್ನ ಪತ್ರಿಕೆ ಕೊಡುವ ಸೋಗಿನಲ್ಲಿ ಬಂದು, ಮನೆ ಮಾಲೀಕರು ಬಾಗಿಲು ತೆರಯುತ್ತಿದ್ದಂತೆ ಒಳಗೆ ನುಗ್ಗಿ ಮನೆಯವರ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿ ಪರಾರಿಯಾಗುತ್ತಿದ್ದಾರೆ. ಈಗ ಪೊಲೀಸರು ಇಂಥದ್ದೊಂದು ಗುಂಪಿನ ಹಿಂದೆ ಬಿದ್ದಿದ್ದಾರೆ.
ಇದೇ ರೀತಿ ಗ್ರಾಮದ ಸರಸ್ವತಮ್ಮ ಹಾಗೂ ನಾರಾಯಣಸ್ವಾಮಿ ದಂಪತಿಯ ಮನೆಗೆ ಬಂದ ಕಳ್ಳರು ಮದುವೆಯ ಲಗ್ನ ಪತ್ರಿಕೆ ಕೊಡಲು ಬಂದಿರುವುದಾಗಿ ಹೇಳಿದ್ದಾರೆ. ಬಾಗಿಲು ತೆರದ ಸರಸ್ವತಮ್ಮ ಯಾವ ಊರು? ಯಾವ ಸಂಬಂಧಿಕರು ಎಂದು ವಿಚಾರಿಸಿದ್ದಾರೆ. ಹಾಗೇ ಒಳಗೆ ಬಂದ ಕಳ್ಳರು ಕುಡಿಯಲು ನೀರು ಕೇಳಿದ್ದಾರೆ. ಅದನ್ನು ಅವರು ತರುತ್ತಿದ್ದಂತೆ ಹಗ್ಗವನ್ನು ಸಿದ್ಧಪಡಿಸಿಟ್ಟುಕೊಂಡಿದ್ದ ದುಷ್ಕರ್ಮಿಗಳು ಸರಸ್ವತಮ್ಮ ಅವರ ಎರಡೂ ಕೈ-ಕಾಲುಗಳನ್ನು ಸೋಫಾಗೆ ಕಟ್ಟಿಹಾಕಿದ್ದಾರೆ. ಬಳಿಕ ರೂಮಿನಲ್ಲಿ ಮಲಗಿದ್ದ ನಾರಾಯಣಸ್ವಾಮಿ ಅವರನ್ನೂ ಕಟ್ಟಿಹಾಕಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ.
ಆ ಬಳಿಕ ಮನೆಯಲ್ಲಿದ್ದ 150 ಗ್ರಾಂ ಚಿನ್ನ, ಕಾಲು ಕೆಜಿ ಬೆಳ್ಳಿ ಹಾಗೂ ಹನ್ನೊಂದು ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. ರಾತ್ರಿ ಸುಮಾರು 10.30ರ ಸಮಯದಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ಕಳ್ಳರು, ಮನೆಗೆ ಕನ್ನ ಹಾಕಿದ್ದಾರೆ. ವಿಷಯ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಐದು ಜನರ ಗುಂಪು ದರೋಡೆ ಮಾಡಿದ್ದು, ಸ್ಥಳಕ್ಕೆ ಚಿಂತಾಮಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಮೊಬೈಲ್ ಟ್ರ್ಯಾಕಿಂಗ್ ಮೂಲಕ ಇಬ್ಬರನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವಯಸ್ಸಾದ ದಂಪತಿ ಟಾರ್ಗೆಟ್
ಇಳಿ ವಯಸ್ಸಿನ ದಂಪತಿ ಸರಸ್ವತಮ್ಮ ಹಾಗೂ ನಾರಾಯಣಸ್ವಾಮಿ ಊರಿನ ಆಚೆ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಕೋಲಾರ ಜಿಲ್ಲೆಯ ಶ್ರೀನಿವಾಪುರ ತಾಲೂಕಿನ ಕಂದಾಯ ಇಲಾಖೆಯಲ್ಲಿ ನಾರಾಯಣಸ್ವಾಮಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ನಿವೃತ್ತಿಯಾಗಿದ್ದರು. ಸರ್ಕಾರದಿಂದ ಬರುವ ಪೆನ್ಷನ್ ಹಣದಲ್ಲಿ ಜೀವನ ಸಾಗಿಸುತ್ತಿದ್ದರು.
ನಾರಾಯಣಸ್ವಾಮಿಗೆ 62 ವರ್ಷ ವಯಸ್ಸಾಗಿದ್ದು, ಮೊದಲು ಅವರ ಹೆಂಡತಿ ಕೈಗೆ ಮತ್ತು ಬಾಯಿಗೆ ಪ್ಲಾಸ್ಟರ್ ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರಾಯಣಸ್ವಾಮಿ, “ನನಗೂ ಚಾಕು ತೋರಿಸಿ ಬಾಯಿ ಮುಚ್ಚಿಸಿದರು. ನಮ್ಮ ಬಳಿ ಇದ್ದ ಹನ್ನೊಂದು ವರ್ಷದ ಮಗುವಿಗೂ ಚಾಕು ತೋರಿಸಿ ಬೆದರಿಸಿದ್ದಾರೆ. ಕಷ್ಟ ಪಟ್ಟು ದುಡಿದು ಸಂಪಾದನೆ ಮಾಡಿದ್ದ ಅಲ್ಪ-ಸ್ವಲ್ಪ ಚಿನ್ನ, ಬೆಳ್ಳಿಯನ್ನು ದೋಚಿ ಹೋಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇಂತಹ ಇಳಿ ವಯಸ್ಸಿನ ದಂಪತಿಯನ್ನೆ ದುಷ್ಕರ್ಮಿಗಳು ಟಾರ್ಗೆಟ್ ಮಾಡುತ್ತಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | ಗೋಲ್ಡ್ ರಿಕವರಿಗೆ ಬಂದಿದ್ದ ತಮಿಳುನಾಡು ಪೊಲೀಸರಿಗೆ ದಿಗ್ಬಂಧನ ಹಾಕಿದ ಚಿಕ್ಕಬಳ್ಳಾಪುರ ಜ್ಯುವೆಲರಿ ಮಾಲೀಕರು
ಇದನ್ನೂ ಓದಿ | ಗೋಲ್ಡ್ ರಿಕವರಿಗೆ ಬಂದಿದ್ದ ತಮಿಳುನಾಡು ಪೊಲೀಸರಿಗೆ ದಿಗ್ಬಂಧನ ಹಾಕಿದ ಚಿಕ್ಕಬಳ್ಳಾಪುರ ಜ್ಯುವೆಲರಿ ಮಾಲೀಕರು