Site icon Vistara News

Robbery case | ನ್ಯೂ ಇಯರ್ ಪಾರ್ಟಿ ಮುಗಿಸಿ ಬಂದವನಿಂದ 4.30 ಲಕ್ಷ ರೂಪಾಯಿ ದೋಚಿದ ಮಂಗಳಮುಖಿಯರು!

Robbery case

ಬೆಂಗಳೂರು: ನ್ಯೂ ಇಯರ್ ಪಾರ್ಟಿ ಮುಗಿಸಿ ಬಂದ ವ್ಯಕ್ತಿಯೊಬ್ಬರಿಂದ ಮಂಗಳಮುಖಿಯರು, ಬರೋಬ್ಬರಿ 4.30 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಾಲ್ವರು ಮಂಗಳಮುಖಿಯರು ಕೃತ್ಯ ಎಸಗಿದ್ದು(Robbery case), ಹಣ ಕಳೆದುಕೊಂಡ ವ್ಯಕ್ತಿ, ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಆಂಧ್ರ ಮೂಲದ ಶೇಕ್ ಶ್ರೀನಿವಾಸ್ ಹಣ ಕಳೆದುಕೊಂಡವರು. ಅವರು ಹೊಸ ವರ್ಷಾಚರಣೆಗೆಂದು ನಗರದ ರೆಸಿಡೆನ್ಸಿ ರಸ್ತೆಯ ಮೆಹೆಂದಿ ಪಬ್‌ಗೆ ಡಿ.೩೧ರಂದು ತಡರಾತ್ರಿ ಬಂದಿದ್ದರು. ಮದ್ಯ ಸೇವಿಸಿ ಅಲ್ಲಿನ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಬಳಿಕ ವಾಪಸ್‌ ತೆರಳುತ್ತಿದ್ದಾಗ, ನಾಲ್ವರು ಮಂಗಳಮುಖಿಯರು ಆಟೋದಲ್ಲಿ ಕರೆದೊಯ್ದಿದ್ದಾರೆ.

ಮದ್ಯದ ಅಮಲಿನಲ್ಲಿದ್ದವರನ್ನು ಖಾಸಗಿ ಹೊಟೇಲ್‌ಗೆ ಕರೆದೊಯ್ದಿದ್ದ ಮಂಗಳಮುಖಿಯರು, ಬಲವಂತವಾಗಿ ಬಟ್ಟೆ ಬಿಚ್ಚಿಸಿ ಚಿನ್ನಾಭರಣ ತೆಗೆದಿಟ್ಟುಕೊಂಡು, ನಂತರ ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಂಡಿದ್ದಾರೆ. ನಂತರ ವ್ಯಕ್ತಿಯ ನಗ್ನ ವಿಡಿಯೊ ಮಾಡಿ ಬೆದರಿಸಿ, ೪.೩೦ ಲಕ್ಷ ರೂ.ಗಳನ್ನು ದೋಚಿದ್ದಾರೆ.

ಇದನ್ನೂ ಓದಿ | Shimoga News | ಮನೆಗಳ್ಳನ ಬಂಧಿಸಿ 7.77 ಲಕ್ಷ ರೂ. ಮೌಲ್ಯದ ವಸ್ತು ವಶ

ಹಣ ಕಳೆದುಕೊಂಡ ಬಳಿಕ ಶೇಕ್ ಶ್ರೀನಿವಾಸ್, ಅಶೋಕನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಹೋಟೆಲ್ ಬುಕ್ ಮಾಡಿರುವುದಾಗಿ ತಿಳಿಸಿ ಇಬ್ಬರು ಮಂಗಳಮುಖಿಯರು ನನ್ನನ್ನು ಕರೆದುಕೊಂಡು ಹೋಗಿ, ಮೊದಲಿಗೆ ಬಟ್ಟೆ ಬಿಚ್ಚಿಸಿ, ವಾಚ್‌, ಚೈನ್, ಉಂಗುರ ಕಸಿದುಕೊಂಡಿದ್ದಾರೆ. ಜತೆಗೆ ನನ್ನ ಎರಡು ಬ್ಯಾಂಕ್‌ ಎಟಿಎಂ ಕಾರ್ಡ್‌ ಹಾಗೂ 40,000 ರೂ.ಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿದ್ದಾರೆ.

ನಂತರ ಎಟಿಎಂ ಕಾರ್ಡ್‌ಗಳನ್ನು ಇನ್ನಿಬ್ಬರು ಮಂಗಳಮುಖಿಯರಿಗೆ ಕೊಟ್ಟು ಕಳುಹಿಸಿ ನನ್ನ ಬ್ಯಾಂಕ್‌ ಖಾತೆಯಿಂದ 2 ಲಕ್ಷ ರೂಪಾಯಿ ವಿತ್‌ ಡ್ರಾ ಮಾಡಿ, 1 ಲಕ್ಷ ರೂ.ಗಳನ್ನು ಗೂಗಲ್‌ ಪೇ ಮೂಲಕ ಅವರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಬಳಿಕ ನನ್ನ ಹೆಂಡತಿ ಬ್ಯಾಂಕ್‌ ಖಾತೆಯ ಎಟಿಎಂ ಕಾರ್ಡ್‌ನಿಂದ 90 ಸಾವಿರ ರೂ.ಗಳನ್ನು ಡ್ರಾ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದಾದ ಬಳಿಕ ಹೋಟೆಲ್‌ಗೆ ಬಂದು ನನ್ನ ಎಟಿಎಂ ಕಾರ್ಡ್‌, ವಾಚ್‌, ಉಂಗುರ ಹಾಗೂ ಚೈನ್‌ ವಾಪಸ್‌ ಕೊಟ್ಟು ಹೋಗಿದ್ದಾರೆ. ಆದರೆ, ಬ್ಯಾಂಕ್‌ ಖಾತೆಯಲ್ಲಿ ಬ್ಯಾಲೆನ್ಸ್‌ ಚೆಕ್‌ ಮಾಡಿದಾಗ ೩.೯೦ ಲಕ್ಷ ರೂಪಾಯಿ ವಿತ್‌ ಡ್ರಾ ಮಾಡಿರುವುದು ತಿಳಿದುಬಂದಿದೆ ಎಂದ ಹೇಳಿದ್ದಾರೆ.

ಇದನ್ನೂ ಓದಿ | Lokayukta Raid | 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಅಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆ

Exit mobile version