Site icon Vistara News

Robbery Case | ಕಳ್ಳನ ಹೆಂಡತಿ ಠಾಣೆಗೆ; ಮನದರಸಿಯ ಅರಸಿ ಠಾಣೆಗೇ ಬಂದ!

ಬೆಂಗಳೂರು: ನೇಪಾಳದಿಂದ ಬದುಕು ಕಟ್ಟಿಕೊಳ್ಳಲು ಬಂದ ಆತ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಆದರೆ ದುಡ್ಡು ಮಾಡಿ ಮಡದಿಯನ್ನು ಸುಖವಾಗಿ ಬಾಳಿಸಬೇಕೆಂದು ಕಳ್ಳತನದ (Robbery Case) ಹಾದಿಯನ್ನೂ ಹಿಡಿದಿದ್ದ. ಪ್ರಕರಣವೊಂದರ ಜಾಡುಹಿಡಿದ ಪೊಲೀಸರು ಆತನ ಹೆಂಡತಿಯನ್ನು ಠಾಣೆಗೆ ಕರೆತಂದು ಕೂರಿಸಿಕೊಂಡಿದ್ದರು. ವಿಷಯ ಗೊತ್ತಾಗಿದ್ದೇ ತಡ, ಆ ಕಳ್ಳ ತನ್ನ ಎಲ್ಲ ಕದ್ದ ಮಾಲು ಸಹಿತ ಪೊಲೀಸರಿಗೆ ಸೆರೆಯಾಗಿದ್ದಾನೆ.

ಸೆಕ್ಯುರಿಟಿ ಕೆಲಸವನ್ನು ವೃತ್ತಿಯನ್ನಾಗಿಕೊಂಡು, ಕಳ್ಳತನವನ್ನು ಪ್ರವೃತ್ತಿಯನ್ನಾಗಿಕೊಂಡವನು ಗಣೇಶ್@ಕಡ್ಕ ಹಾಗೂ ನರೇಂದ್ರ @ಗೂರ್ಖಾ. ಕಳೆದ 12 ವರ್ಷದ ಹಿಂದೆ ನೇಪಾಳದಿಂದ ನಗರಕ್ಕೆ ಬಂದಿದ್ದ ಇವರು, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ನಿಯತ್ತಾಗಿ ತಾವು ಆಯಿತು ತಮ್ಮ ಕೆಲಸ ಆಯಿತು ಎಂದು ಇದ್ದವರಿಗೆ ಬರಬರುತ್ತಾ ಹಣದಾಸೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮನೆಗಳ್ಳತನಕ್ಕೆ ಇಳಿದಿದ್ದರು. ‌

Robbery Case

ಕಳ್ಳರ ಸುಳಿವು ನೀಡಿದ ಸ್ಕೂಟಿ

ಕಳೆದ ಒಂದು ತಿಂಗಳ ಹಿಂದಷ್ಟೇ ಗಣೇಶ ಎಂಬಾತನಿಗೆ ಮದುವೆಯಾಗಿತ್ತು. ಇವರು ನಡೆಸುತ್ತಿದ್ದ ಕೃತ್ಯದ ಬಗ್ಗೆ ಗಣೇಶನ ಪತ್ನಿಗೆ ಯಾವುದೇ ಸುಳಿವು ಇರಲಿಲ್ಲ. ಪೊಲೀಸರಿಗೆ ತಲೆನೋವಾಗಿದ್ದ ಇವರಿಬ್ಬರು, ಚಂದ್ರಾಲೇಔಟ್‌ ಸುತ್ತಮುತ್ತ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. ಈ ಬಗ್ಗೆ ಚಂದ್ರಾಲೇಔಟ್ ಪೊಲೀಸ್‌ ಠಾಣೆಯಲ್ಲಿ ಮನೆಗಳ್ಳತನ ಪ್ರಕರಣ ವರದಿಯಾಗಿತ್ತು‌.

ಈ ಬಗ್ಗೆ ತನಿಖೆಗಿಳಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಲ್ಕೈದು ಬಾರಿ ಅನುಮಾನಾಸ್ಪದವಾಗಿ ಸ್ಕೂಟಿವೊಂದರಲ್ಲಿ ಓಡಾಡಿರುವುದು ಕಂಡು ಬಂದಿದೆ. ಈ ಸ್ಕೂಟಿಯ ಮಾಹಿತಿ ತೆಗೆದುಕೊಂಡ ಪೊಲೀಸರಿಗೆ ಅದು ಗಣೇಶ ಎಂಬಾತನದ್ದು ಎಂದು ತಿಳಿದು ಬಂದಿದೆ. ನಂತರ ವಿಚಾರಣೆಗೊಳಪಡಿಸಲು ಆತನ ಮನೆಗೆ ಹೋಗುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು.

ಇದರಿಂದ ಏನು ಮಾಡಬೇಕು ಎಂಬ ಬಗ್ಗೆ ಪೊಲೀಸರಿಗೆ ಗೊಂದಲ ಮೂಡಿದೆ. ಕೊನೆಗೆ ಗಣೇಶನ ಪತ್ನಿಯನ್ನು ಠಾಣೆಗೆ ಕರೆ ತಂದು ಕೂರಿಸಿಕೊಂಡಿದ್ದಾರೆ. ಈ ವಿಚಾರ ತಿಳಿದಿದ್ದೇ ತಡ ಗಣೇಶ ಎದ್ದೆನೋ ಬಿದ್ದೆನೋ ಎಂದು ಕದ್ದಿರುವ ಮಾಲ್ ಸಹಿತ ಪೊಲೀಸರಿಗೆ ಒಪ್ಪಿಸಿ ಸೆರೆಯಾಗಿದ್ದಾನೆ.

ಇದನ್ನೂ ಓದಿ | Kidnapping | ತೂಕ ಮಾಡುವ ನೆಪದಲ್ಲಿ ಶಿಶು ಕಳ್ಳತನ; ಚಿಕ್ಕೋಡಿಯಲ್ಲೀಗ ಭಯದ ವಾತಾವರಣ

Exit mobile version