ಬೆಂಗಳೂರು: ಐಪಿಎಸ್ ಅಧಿಕಾರಿಯಾಗಿರುವ ಡಿ. ರೂಪಾ ಅವರು ಮಾಡಿರುವ ಸಾಲು ಸಾಲು ಆರೋಪಗಳಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಿರುಗೇಟು (Sindhuri Vs Roopa) ನೀಡಿದ್ದು, ರೂಪಾ ಅವರಿಗೆ ಮಾನಸಿಕ ಕಾಯಿಲೆ ಎಂದಿದ್ದಾರೆ.
ʻʻಮಾನಸಿಕ ಕಾಯಿಲೆ ಬಹುದೊಡ್ಡ ಪ್ರಾಬ್ಲಮ್. ಇದಕ್ಕೆ ಔಷಧ ಹಾಗು ಕೌನ್ಸೆಲಿಂಗ್ ಅವಶ್ಯಕತೆಯಿದೆ. ಜವಾಬ್ದಾರಿ ಸ್ಥಾನದಲ್ಲಿರೋರಿಗೆ ಈ ತರಹದ ಪ್ರಾಬ್ಲಮ್ ಬಂದರೆ ಡೇಂಜರ್ ಅದು. ಐಪಿಎಸ್ ಅಧಿಕಾರಿ ರೂಪಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆʼʼ ಎಂದು ರೋಹಿಣಿ ಸಿಂಧೂರಿ ಅವರು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ʻʻನನ್ನ ಮೇಲೆ ಹಬ್ಬಿಸುತ್ತಿರುವ ಸುಳ್ಳು ಆಪಾದನೆಗಳೆಲ್ಲ ವ್ಯವಸ್ಥಿತ ಪಿತೂರಿ. ಈಕೆ ಎಲ್ಲಾ ಕಡೆಯೂ ಹೀಗೆ ಸುಳ್ಳು ಆಪಾದನೆಗಳನ್ನು ಹಬ್ಬಿಸಿರುತ್ತಾರೆ. ಸದ್ಯ ಈಗ ಕೆಲಸ ಮಾಡುತ್ತಿರುವ ನಾನ್ ಕೇಡರ್ ಪೋಸ್ಟ್ ನಲ್ಲೂ ಕೂಡಾ ಅವರು ಇಂಥಹುದೇ ಕಿರಿಕ್ ಮಾಡಿಕೊಂಡಿದ್ದಾರೆʼʼ ಎಂದು ಹೇಳಿದ್ದಾರೆ.
ರೂಪಾ ಅವರು ಮಾಡಿರುವ ಆರೋಪ, ಮಾನಹಾನಿ ಸಂಗತಿಗಳಿಗೆ ಐಪಿಸಿ ಸೆಕ್ಷನ್ ಅಡಿ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ʻʻರೂಪಾ ಅವರು ಹಾಕಿದ ಫೋಟೊಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆದುಕೊಳ್ಳಲಾಗಿದೆʼʼ ಎಂದಿರುವ ಅವರು, ʻʻಆಕೆ ನಾನು ಯಾರಿಗೆ ಫೋಟೊ ಕಳಿಸಿದ್ದೆ ಅಂತ ಹೆಸರು ಹೇಳಲಿʼʼ ಎಂದು ಸವಾಲು ಹಾಕಿದ್ದಾರೆ.
ರೋಹಿಣಿ ಸಿಂಧೂರಿ ಅವರ ಹೇಳಿಕೆಯ ಪೂರ್ಣ ಪಾಠ ಇಂತಿದೆ
ಜವಾಬ್ದಾರಿಯುತ ಸ್ಥಾನದಲ್ಲಿರುವವರು ವೈಯಕ್ತಿಕ ಹಗೆಯನ್ನು ಸಾಧಿಸಲು ಹೊರಡುವುದು ಸಮಾಜಕ್ಕೆ ಬಹಳಷ್ಟು ಅಪಾಯಕಾರಿ. ರೂಪಾ ಐಪಿಎಸ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನು ಸಾಧಿಸಲು ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿರುವವರ ರೀತಿಯಲ್ಲಿ ಆಡುತ್ತಿದ್ದಾರೆ.
ಐಪಿಎಸ್ ರೂಪಾ ಅವರದ್ದು, ಇದೊಂದು ಅಭ್ಯಾಸವಾಗಿ ಬಿಟ್ಟಿದೆ. ಅವರು ಇತ್ತೀಚಿನ ವರ್ಷಗಳಲ್ಲಿದ್ದ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆರೋಪ ರಹಿತ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯುವ ಹಾಗೂ ತಾವು ದ್ವೇ಼ಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕವಾಗಿ ಹಗೆತನ ಸಾಧಿಸಲು ಪ್ರಯತ್ನಿಸುತ್ತಾರೆ. ಅವರು ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವುದನ್ನ ಬಯಸುತ್ತಾರೆ ಹಾಗೂ ಅದಕ್ಕೆ ಬೇಕಾದಂತಹ ಪೋಸ್ಟ್‌ಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಪುಟಗಳಲ್ಲಿ ಹಾಕುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗುತ್ತಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದು ಒಳ್ಳೆಯ ಕೆಲಸಗಳ ಕಡೆ ಗಮನ ಹರಿಸುವುದನ್ನ ಬಿಟ್ಟು ಒಬ್ಬ ವ್ಯಕ್ತಿ ಅಥವಾ ಇನ್ನೊಬ್ಬರನ್ನ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವುದೇ ಅವರ ಪ್ರಾಥಮಿಕ ಕೆಲಸ ಎಂದು ತೋರಿಸುತ್ತದೆ. ಅದರಲ್ಲೂ ನನ್ನ ವಿರುದ್ದ ಯಾವುದೋ ವೈಯಕ್ತಿಕ ಹಗೆಯನ್ನಿಟ್ಟುಕೊಂಡು ಸುಳ್ಳು, ವೈಯಕ್ತಿಕ ನಿಂದನೆಯ ಅಭಿಯಾನವನ್ನು ನಡೆಸುತ್ತಿದ್ದಾರೆ.
ನನ್ನ ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸ್ ಆಪ್ ಸ್ಟೇಟಸ್‌ಗಳಿಂದ ಸ್ಕ್ರೀನ್ ಶಾಟ್‌ಗಳ ಮೂಲಕ ಸಂಗ್ರಹಿಸಿರುವ ಫೋಟೋಗಳನ್ನ ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಅವರು ಬಳಸಿದ್ದಾರೆ. ಈ ಫೋಟೋಗಳನ್ನು ನಾನು ಕಳುಹಿಸಿದ್ದೇನೆ ಎನ್ನುವ ಅಧಿಕಾರಿಗಳ ಹೆಸರನ್ನ ಬಹಿರಂಗಪಡಿಸಬೇಕು ಹಾಗೂ ಅವುಗಳ ಬಗ್ಗೆ ತನಿಖೆ ನಡೆಯಬೇಕು ಎನ್ನುವುದನ್ನ ನಾನು ಆಗ್ರಹಿಸುತ್ತೇನೆ
ನನ್ನ ವಿರುದ್ದ ರೂಪಾ ಐಪಿಎಸ್ ಅವರು ನಡೆಸುತ್ತಿರುವ ವೈಯಕ್ತಿಕ ನಿಂದನೆ ಹಾಗೂ ತೇಜೋವಧೆಯ ವಿರುದ್ದ ನಾನು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರೂಪಾ ಐಪಿಎಸ್ ಅವರ ಮೇಲೆ ಕಾನೂನಿನ ಎಲ್ಲಾ ಕ್ರಮಗಳನ್ನ ಕೈಗೊಳ್ಳುತ್ತೇನೆ. ಸಕ್ಷಮ ಪ್ರಾಧಿಕಾರದ ಮುಂದೆಯೂ ದೂರನ್ನ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ ರೋಹಿಣಿ ಸಿಂಧೂರಿ.
ಇದನ್ನೂ ಓದಿ : Sindhuri Vs Roopa : IAS ಅಧಿಕಾರಿಗಳಿಗೆ ಅಸಭ್ಯ ಫೋಟೊ ಕಳುಹಿಸುತ್ತಿದ್ದ ರೋಹಿಣಿ ಸಿಂಧೂರಿ; ಫೋಟೊ ಬಿಡುಗಡೆ ಮಾಡಿದ ರೂಪಾ IPS