ಬೆಂಗಳೂರು: ಪಠ್ಯಪುಸ್ತಕ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವವರು ಈ ವಿವಿಧ ಜಾತಿ, ಸಮುದಾಯಗಳನ್ನು ಟಾರ್ಗೆಟ್ ಮಾಡಿಕೊಂಡು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಆರೋಪಿಸಿದ್ದಾರೆ. ಬ್ರಾಹ್ಮಣರ ವಿರುದ್ಧ ಅತ್ಯಂತ ಕೇವಲ ಹಾಗೂ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ರೋಹಿತ್ ಚಕ್ರತೀರ್ಥ, ಪಠ್ಯಪುಸ್ತಕ ಕುರಿತಂತೆ ವಿರೋಧಿಗಳು ಒಂದೊಂದೆ ಸಮುದಾಯವನ್ನು ಕೆರಳಿಸುತ್ತಿದ್ದಾರೆ. ಈ ಹಿಂದೆ ಲಿಂಗಾಯತ, ಬಿಲ್ಲವ, ಒಕ್ಕಲಿಗ, ಮುಸ್ಲಿಂ ಸಮುದಾಯಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಈಗ ದಲಿತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನೂರಾರು ಪೋಸ್ಟರ್‌ಗಳನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ಸಮಿತಿ ಹೆಸರಿನಲ್ಲೆ ಬರೆಯುತ್ತಿದ್ದಾರೆ, ಇದೆಲ್ಲವೂ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಪಕ್ಷದ ನಾಯಕರ ಟ್ವೀಟ್, ಪೋಸ್ಟರ್‌ಗಳು ನಮಗೆ ಹಾಗೂ ವೈಯಕ್ತಿಕವಾಗಿ ನನಗೆ ಸಂಬಂಧಪಟ್ಟದ್ದಲ್ಲ ಎಂದರು.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಸಮಿತಿ ಮೇಲಿನ ಆರೋಪಕ್ಕೆ ಸಚಿವ ನಾಗೇಶ್‌ರವರ ಸಂಪೂರ್ಣ ವರದಿ ಇಲ್ಲಿದೆ
ಪ್ರತಿಭಟನೆ ಮಾಡುವವರು ವಿವೇಚನೆ ಮಾಡುತ್ತಿಲ್ಲ
ತಮ್ಮ ತೇಜೋವಧೆ ಮಾಡುವ ಹಾಗೂ ಹಣಿಯುವ ಕೆಲಸ ಮಾಡಲಾಗುತ್ತಿದೆ ಎಂದು ಶನಿವಾರ ಬೆಳಗ್ಗೆಯಷ್ಟೆ ಆರೋಪಿಸಿದ್ದ ಚಕ್ರತೀರ್ಥ ಇದೀಗ ಮತ್ತಷ್ಟು ವಿವರ ನೀಡಿದ್ದಾರೆ. ಪಠ್ಯಪುಸ್ತಕದಲ್ಲಿ ತಪ್ಪುಗಳಾಗಿವೆ, ಅವಮಾನಿಸಲಾಗಿದೆ ಎಂದು ಆರೋಪ ಮಾಡುತ್ತಿರುವವರು ಸತ್ಯಾಸತ್ಯತೆಯನ್ನು ವಿವೇಚನೆ ಮಾಡುತ್ತಿಲ್ಲ ಎಂದು ರೋಹಿತ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ಮಾಡುವವರು ಸತ್ಯಾಸತ್ಯತೆ ವಿವೇಚನೆ ಮಾಡುತ್ತಿಲ್ಲ. ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ನಮ್ಮ ಪಠ್ಯ ಇಟ್ಟುಕೊಂಡು ನೋಡಿದ್ದರೂ ಅವರಿಗೆ ವಿಷಯ ಸ್ಪಷ್ಟವಾಗುತ್ತಿತ್ತು. ಆದರೆ ಇವರು ಅದನ್ನು ನೋಡಲು ತಯಾರಿಲ್ಲ. ಕುವೆಂಪು ಅವರ ಪಠ್ಯದಲ್ಲೂ ಹೀಗೆಯೇ ಆಗಿದೆ. ಆದರೆ ಇವೆಲ್ಲವನ್ನೂ ನೋಡದೆ ವಿವಾದ ಮಾಡುತ್ತಿದ್ದಾರೆ. ಯಾರೂ ನಿಜವಾದ ವಿಷಯವನ್ನೇ ನೋಡುತ್ತಿಲ್ಲ ಎಂದರು.
ಸರ್ಕಾರ ಗಂಭೀರವಾಗಬೇಕಿತ್ತು
ಪಠ್ಯಪುಸ್ತಕ ಕುರಿತಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಿತ್ತು ಎಂದು ರೋಹಿತ್ ಚಕ್ರತೀರ್ಥ ಹೇಳಿದರು. ಕುವೆಂಪು ಅವರ ಕುರಿತು ತಪ್ಪಿ ಮಾಹಿತಿ ಹರಿಬಿಡುತ್ತಿದ್ದಾಗ, ಇದನ್ನು ಯಾರು ಮಾಡುತ್ತಿದ್ದಾರೆ ಎನ್ನುವುದನ್ನು ಗಂಭೀರವಾಗಿ ತನಿಖೆ ಮಾಡಬೇಕಿತ್ತು. ಈ ರೀತಿ ಸರ್ಕಾರ ಗಂಭೀರವಾಗಿ ತನಿಖೆ ಮಾಡಿದೆಯೋ ಇಲ್ಲವೋ ಗೊತ್ತಿಲ್ಲ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ರೋಹಿತ್ ಚಕ್ರತೀರ್ಥ, ಸಿದ್ದರಾಮಯ್ಯನವರಿಗೆ ಕುವೆಂಪು ಅವರ ಬಗ್ಗೆ ಅಭಿಮಾನ ಇದ್ದಿದ್ದರೆ ಈ ಹಿಂದೆಯೇ ತನಿಖೆಗೆ ನೀಡಬೇಕಿತ್ತು. ನನ್ನನ್ನು ಬಲಿಪಶು ಮಾಡಿ ದಾಳಿ ಮಾಡುತ್ತಿದ್ದಾರೆ. ನಾನು ಬಲಿಪಶುವಾಗಿದ್ದೇನೆ. ಇವರೆಲ್ಲರೂ ಒಂದು ಜಾತಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಸಮಿತಿಯ ಮೂಲಕ ಬ್ರಾಹ್ಮಣ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಮುದಾಯವನ್ನು ಕೇವಲವಾಗಿ, ಅವಹೇಳನಕಾರಿಯಾಗಿ ಚಿತ್ರಿಸುತ್ತಿದ್ದಾರೆ. ನಾನು ಎಂದಿಗೂ ಬ್ರಾಹ್ಮಣ ಪರ ಅಥವಾ ವಿರೋಧ ಮಾತನಾಡಿದವನಲ್ಲ. ಬ್ರಾಹ್ಮಣ ಎನ್ನುವ ಸಿಂಪಥಿಯೂ ನನಗೆ ಬೇಕಾಗಿಲ್ಲ. ಆದರೆ ಈ ವಿಚಾರ ಹೇಳಲೇಬೇಕಿದೆ ಎಂದರು.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಸಮಿತಿ ಒಳ್ಳೆಯ ಕೆಲಸ ಮಾಡಿದೆ, ಸಮಿತಿಯನ್ನು ವಿಸರ್ಜಿಸಲಾಗಿದೆ !: CM ಆದೇಶ