ಬೆಂಗಳೂರು: ಹಾಲು ಉತ್ಪಾದಕರ ಸಂಘದ (Milk Producers Union) ನಿರ್ದೇಶಕರ ಆಯ್ಕೆಗಾಗಿ (Election of directors) ಬಂದ ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ (Attack on Election officers) ಅವರ ಕೈಯಲ್ಲಿದ್ದ ಬ್ಯಾಲೆಟ್ ಪ್ಯಾಪರ್ (Ballet Paper), ಲ್ಯಾಪ್‌ಟಾಪ್, ಮೊಬೈಲ್ ಮತ್ತು ಇತರ ಸಾಮಗ್ರಿ ದರೋಡೆ ಮಾಡಿದ ಭಯಾನಕ ಘಟನೆಯೊಂದು ರಾಮನಗರ ಜಿಲ್ಲೆಯ (Ramanagara News) ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ.
ಇಲ್ಲಿನ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯುವುದಿತ್ತು. ಚುನಾವಣಾಧಿಕಾರಿ ಉಮೇಶ್ ಮತ್ತು ಉಷಾ ಅವರು ಹಾಲು ಉತ್ಪಾದಕರ ಸಂಘದತ್ತ ಹೋಗುವಾಗ ಅವರ ಮೇಲೆ ದಾಳಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಸಹಚರರು ಈ ಕೃತ್ಯ ಮಾಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾಗಡಿ-ಕುಣಿಗಲ್ ರಸ್ತೆಯಲ್ಲಿ ಈ ದಾಳಿ ನಡೆದಿದೆ.
ಹಾಡುಹಗಲೇ ಭಯಾನಕ ಕೃತ್ಯ
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ಎಲ್ಲವೂ ಸಿದ್ಧತೆ ನಡೆದಿತ್ತು. ಆದರೆ, ಪಂಚಾಯಿತಿ ಅಧ್ಯಕ್ಷ ಬಲರಾಮ್ ಮತ್ತು ಇತರ ಚುನಾವಣೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದರು. ಆದರೆ, ದಿನಾಂಕ ನಿಗದಿಯಾಗಿ ಎಲ್ಲ ವ್ಯವಸ್ಥೆಗಳೂ ನಡೆದಿದ್ದವು.
ಉಮೇಶ್ ಮತ್ತು ಉಷಾ ಎಂಬ ಇಬ್ಬರು ಚುನಾವಣಾ ಅಧಿಕಾರಿಗಳಾಗಿ ನಿಯುಕ್ತರಾಗಿದ್ದರು. ಬುಧವಾರ ಅವರು ಕಾರಿನಲ್ಲಿ ಹಾಲು ಉತ್ಪಾದಕರ ಸಂಘದತ್ತ ಸಾಗುತ್ತಿದ್ದಂತೆಯೇ ಪುಂಡರ ತಂಡವೊಂದು ಅವರ ಕಾರನ್ನು ಅಡ್ಡಗಟ್ಟಿತ್ತು. ಮಾರಕಾಸ್ತ್ರಗಳನ್ನು ತೋರಿಸಿ ಕಾರಿನಿಂದ ಇಳಿಸಿತು.
ಚುನಾವಣಾಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಅವರನ್ನು ಕೆಳಗೆ ಇಳಿಸಿದ ದುಷ್ಟರು ಕಾರಿನಲ್ಲಿದ್ದ ಬ್ಯಾಲೆಟ್ ಪೇಪರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಿತ್ತುಕೊಂಡಿತು. ಉಮೇಶ್ ಅವರು ತಮ್ಮ ಕೈಯಿಂದ ಕಿತ್ತುಕೊಂಡ ಪೇಪರ್‌ಗಳನ್ನು ಕಸಿದುಕೊಳ್ಳಲು ಅವರನ್ನು ಬೆನ್ನಟ್ಟಿದರು. ಆದರೆ ದುಷ್ಕರ್ಮಿಗಳು ತಾವು ಬಂದಿದ್ದ ಸ್ಯಾಂಟ್ರೋ ಕಾರಿನಲ್ಲಿ ಕುಳಿತು ಪರಾರಿಯಾದರು. ಈ ಹಂತದಲ್ಲಿ ಕೆಲವರು ಕಾರನ್ನು ನಿಲ್ಲಿಸಲು ಯತ್ನಿಸಿದರು. ಆದರೆ, ದುಷ್ಕರ್ಮಿಗಳು ಅವರನ್ನು ತಳ್ಳಿ ಮುಂದಕ್ಕೆ ಸಾಗಿದರು. ಈ ಹಂತದಲ್ಲಿ ಕಾರಿನ ಮುಂಭಾಗದಲ್ಲಿದ್ದ ಉಷಾ ಅವರ ಮೇಲೆಯೇ ಕಾರು ನುಗ್ಗಿತ್ತು. ಕಾರು ಡಿಕ್ಕಿಯಾಗಿ ಮುಗ್ಗರಿಸಿ ಬಿದ್ದ ಅವರು ರಸ್ತೆಗೆ ಉರುಳಿದರು.
ಮಾಜಿ ಅಧ್ಯಕ್ಷ ಬಲರಾಮ್ ಮತ್ತು ಟೀಮ್, ಕಾರಿಗಾಗಿ ಶೋಧ
ಇದು ಮಾಜಿ ಅಧ್ಯಕ್ಷ ಬಲರಾಂ ಮತ್ತು ಅವನ ಸಹಚರರ ಕೃತ್ಯ ಎಂದು ಪೊಲೀಸರಿಗೆ ತಿಳಿದುಬಂದಿದೆ. ಸ್ಥಳೀಯರು ಕೂಡಾ ಇದನ್ನು ದೃಢೀಕರಿಸಿದ್ದಾರೆ.
ಹುಲ್ಲೇನಹಳ್ಳಿ ನಾಲ್ಕು ವ್ಯಕ್ತಿಗಳಿಂದ ಕೃತ್ಯ ನಡೆಸಿದೆ. ಗ್ರಾಪಂ ಮಾಜಿ ಅಧ್ಯಕ್ಷ ಬಲರಾಮ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೇಮಂತ್, ಸೀನು, ದಾಸೇಗೌಡ, ಮತ್ತೊಬ್ಬನಿಂದ ಈ ಕೃತ್ಯ ನಡೆದಿದೆ ಎಂದು ಎಸ್‌ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಆರೋಪಿಗಳು ಮತ್ತು ಸ್ಯಾಂಟ್ರೋ ಕಾರು ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಮಂಜು ಕುಮ್ಮಕ್ಕು ಆರೋಪ
ಈ ನಡುವೆ, ದರೋಡೆಗೆ ಜೆಡಿಎಸ್ ಮಾಜಿ ಶಾಸಕ ಎ ಮಂಜು ಕುಮ್ಮಕ್ಕು ನೀಡಿದ್ದಾರೆ. ಮಾಜಿ ಅಧ್ಯಕ್ಷ ಬಲರಾಮ್ ತನ್ನ ಸಹಚರರ ಮೂಲಕ ಈ ಕೃತ್ಯ ನಡೆಸಿದ್ದಾನೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಪ್ರವೀಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
23 ವರ್ಷದ ಬಳಿಕ ಚುನಾವಣೆ ನಡೆಯುತ್ತಿತ್ತು!
ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಾಕಾರ ಸಂಘದ ನಿರ್ದೇಶಕರ ಚುನಾವಣೆ 23 ವರ್ಷಗಳ ಬಳಿಕ ನಡೆಯುತ್ತಿದೆ. ಇಲ್ಲಿ ಚುನಾವಣೆ ನಡೆಯಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಹುಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಬೆಂಬಲಿಗರ ತಂಡವು ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಕೃತ್ಯವನ್ನು ಎಸಗಿದೆ ಎಂದು ಹೇಳಲಾಗುತ್ತಿದೆ.