ಬೆಂಗಳೂರು: ಬೈಯಪ್ಪನಹಳ್ಳಿ ಬಳಿಯ ಕಲ್ಲಪಲ್ಲಿ ಸ್ಮಶಾನದ ರಸ್ತೆಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದಲ್ಲಿ ಒಬ್ಬ ರೌಡಿಶೀಟರ್ ಸೇರಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿ ಮಾಡುತ್ತಿದ್ದವರ ಮೇಲೆ ದರೋಡೆಕೋರರ ತಂಡ ದಾಳಿ ಮಾಡಿ 49 ರೂ.ಗಳನ್ನು ದೋಚಿತ್ತು.
ರೌಡಿಶೀಟರ್ ರಾಜದೊರೈ ಸೇರಿ ಆರು ಮಂದಿ ಬಂಧಿತರಾಗಿದ್ದಾರೆ. ಬೈಯಪ್ಪನಹಳ್ಳಿ ಬಳಿ ಮೊದಲಿಗೆ ಮೂವರು ಬಂದು ಹಣ ನೀಡುವಂತೆ ಕೇಳಿದ್ದಾರೆ. ಕೆಲಸ ಮಾಡುತ್ತಿದ್ದವರು ಯಾವಾಗ ಹಣ ಕೊಡಲಿಲ್ಲವೋ ಆಗ ಅಲ್ಲಿಗೆ ಮತ್ತಿಬ್ಬರು ಬಂದಿದ್ದರು. ಈ ವೇಳೆ ಲಾಂಗ್‌ನಿಂದ ಕಾರ್ಮಿಕರನ್ನು ಬೆದರಿಸಿ ಫೋನ್ ಪೇ ಮೂಲಕ 49 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು, ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದರು.
ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ರೌಡಿಶೀಟರ್ ರಾಜದೊರೈ ಆಗಿದ್ದು, ಆತನ ಪ್ಲಾನ್‌ನಂತೆ ಸ್ಥಳಕ್ಕೆ ಅರುಣ್, ದಿನೇಶ್, ಯಾಸಿನ್, ಜೋಸೆಫ್ ಸೇರಿ ಐವರು ಬಂದು ದಾಳಿ ಮಾಡಿ ಹಣ ದೋಚಿದ್ದರು. ಪ್ರಮುಖ ಆರೋಪಿ ರಾಜದೊರೈ ಕೆಲ ದಿನಗಳ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ ಎನ್ನಲಾಗಿದೆ. ಸದ್ಯ ಆರು ಅರೋಪಿಗಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.
ಧಾರವಾಡದಲ್ಲಿ ಅಪರಿಚಿತ ಶವ ಪತ್ತೆ
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಕ್ಯಾಂಪಸ್ ಒಳಗಿನ ಗಾಂಧಿ ಭವನ ಹಿಂದಿನ ಹಳೆ ಕಟ್ಟಡದಲ್ಲಿ ಅಂದಾಜು 40 ವರ್ಷದ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆಯೇ ಈ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಉಡುಪಿ: ಬಡಗುಬೆಟ್ಟು ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹಾವೇರಿಯ ಆಂಜನೇಯ (23) ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಮಣಿಪಾಲ ಠಾಣೆಯ ಪೋಲಿಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಸೋಲ್ಲಾಪುರ-ಗದಗ ಡೆಮೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ
ವಿಜಯಪುರ: ತಾಲೂಕಿನ ಮಿಂಚನಾಳ-ಅಲಿಯಾಬಾದ್ ನಡುವೆ ಚಲಿಸುತ್ತಿದ್ದ ರೈಲ್ವೆ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡು ಪ್ರಯಾಣಿಕರು ಆತಂಕಕಕ್ಕೊಳಗಾದ ಘಟನೆ ನಡೆದಿದೆ. ಸೋಲ್ಲಾಪುರ-ಗದಗ ಡೆಮೋ ಎಕ್ಸ್‌ಪ್ರೆಸ್ ರೈಲಿನ ಚಕ್ರದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ರೈಲ್ವೆ ಸಿಬ್ಬಂದಿ ತಪಾಸಣೆ ನಡೆಸಿ, ಯಾವುದೇ ಆತಂಕವಿಲ್ಲ ಎಂದು ತಿಳಿಸಿದ ಬಳಿಕ ರೈಲು ಮುಂದೆ ಸಾಗಿತು.
ಇದನ್ನೂ ಓದಿ | Viral Video: ಗೋವಾ ರೆಸಾರ್ಟ್‌ಗೆ ಬಂದಿದ್ದ ಕುಟುಂಬದ ಮೇಲೆ ಸ್ಥಳೀಯರ ಭೀಕರ ಹಲ್ಲೆ; ವೈರಲ್ ಆಯ್ತು ವಿಡಿಯೊ