ಬೆಂಗಳೂರು: ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಬಿಜೆಪಿಯಲ್ಲಿ ಅಧಿಕೃತ ಸದಸ್ಯತ್ವ ದೊರೆತಿದೆ ಎಂಬ ಸುದ್ದಿ ಕೇಳಿಬಂದ ಬೆನ್ನಲ್ಲೇ ಸದಸ್ಯತ್ವವನ್ನು (Karnataka Election 2023) ಬಿಜೆಪಿ ಬೆಂಗಳೂರು ಕೇಂದ್ರ ಘಟಕ ರದ್ದು ಪಡಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಬೆಂಗಳೂರು ಕೇಂದ್ರ ಘಟಕದ ಅಧ್ಯಕ್ಷ ಜಿ.ಮಂಜುನಾಥ್, ಚಾಮರಾಜಪೇಟೆ ಕ್ಷೇತ್ರದಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಅಥವಾ ಮಿಸ್ಡ್ ಕಾಲ್ ಮೂಲಕ ಸೈಲೆಂಟ್ ಸುನಿಲ್ ಬಿಜೆಪಿ ಸದಸ್ಯತ್ವ ಪಡೆದಿರಬಹುದು. ರಾಜ್ಯ ಬಿಜೆಪಿ ಅಧ್ಯಕ್ಷರು ಈ ಹಿಂದೆಯೇ ರೌಡಿ ಹಿನ್ನೆಲೆಯವರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಸೈಲೆಂಟ್ ಸುನಿಲ್ ಎಂಬುವವರ ಸದಸ್ಯತ್ವ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ರೌಡಿಶೀಟರ್ ಸೈಲೆಂಟ್ ಸುನಿಲ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಈ ಹಿಂದೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಜತೆ ಕಾಣಿಸಿಕೊಂಡಿದ್ದ. ಈ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಧರಿಸಿ ಸಂಸದರು ಹಾಗೂ ಶಾಸಕರ ಜತೆ ಸೈಲೆಂಟ್ ಸುನಿಲ್ ವೇದಿಕೆ ಹಂಚಿಕೊಂಡಿದ್ದ. ಇದಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ
ಸೈಲೆಂಟ್ ಸುನಿಲ್ ಬಿಜೆಪಿ ಸದಸ್ಯತ್ವ ನೋಂದಣಿ ಬಗ್ಗೆ ಚಾಮರಾಜಪೇಟೆ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಶಶಾಂಕ್ ಪ್ರತಿಕ್ರಿಯಿಸಿ, ಚಾಮರಾಜಪೇಟೆಯಲ್ಲಿ ಶುಕ್ರವಾರ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿತ್ತು. ಈ ವೇಳೆ ಸುನೀಲ್ ಕೂಡ ಅಭಿಯಾನ ಜಾಗಕ್ಕೆ ಬಂದಿದ್ದರು. ಈ ವೇಳೆ ಅವರು ಕೂಡ ಮಿಸ್ಡ್ ಕಾಲ್ ಕೊಟ್ಟು ಸದಸ್ಯತ್ವ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಯಾರು ಬೇಕಾದರೂ ಮಿಸ್ಡ್ ಕಾಲ್ ಕೊಟ್ಟು ಪಕ್ಷದ ಸದಸ್ಯತ್ವ ಪಡೆಯಬಹುದು. ಸದಸ್ಯತ್ವ ಪಡೆದ ತಕ್ಷಣ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಎಂದಲ್ಲ. ಬೇರೆ ಬೇರೆ ಪಕ್ಷದವರು ರೌಡಿಗಳ ಜತೆ ಓಡಾಡುತ್ತಿಲ್ಲವೇ? ಸುನಿಲ್ ಕೂಡ ಎಲ್ಲಿಯೂ ಪಕ್ಷಕ್ಕೆ ಸೇರಿದ್ದೀನಿ ಎಂದು ಹೇಳಿಲ್ಲ, ಅಭಿಯಾನ ಮಾಡಿದ್ದವರೂ ಹೇಳಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Vijay Sankalp Yatre: ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಸಂಪೂರ್ಣ ನೆಲಸಮ ಮಾಡುವುದೇ ನನ್ನ ಗುರಿ: ಯಡಿಯೂರಪ್ಪ
ಅಧಿಕೃತ ಮೆಂಬರ್‌ಶಿಪ್ ಫೋಟೊ ಪ್ರದರ್ಶಿಸಿದ ಸುನಿಲ್
ಬಿಜೆಪಿ ಸದಸ್ಯತ್ವ ಪಡೆದಿರುವ ಫೋಟೊ ಜತೆಗೆ ಸೈಲೆಂಟ್ ಸುನಿಲ್ ಬಿಜೆಪಿ ಪಕ್ಷದ ಶಾಲು ಹೊದ್ದಿರುವ ಫೋಟೊಗಳು ಶನಿವಾರ ಬೆಳಗ್ಗೆ ವೈರಲ್ ಆಗಿದ್ದವು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಕಾಂಗ್ರೆಸ್ ಟೀಕಿಸಿತ್ತು. ಕುಖ್ಯಾತ ಪಾತಕಿ ಸೈಲೆಂಟ್ ಸುನಿಲ್‌ನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ರೌಡಿ ಮೋರ್ಚಾಗೆ ಬಹಿರಂಗವಾಗಿ ಚಾಲನೆ ದೊರೆತಿದೆ. ಯಾವುದೇ ಕಾರಣಕ್ಕೂ ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಸಿಎಂ ಬೊಮ್ಮಾಯಿ ಅವರೇ, ನಿಮ್ಮ ನಾಲಿಗೆಯನ್ನು ಈಗ ಯಾವುದರಲ್ಲಿ ತೊಳೆದುಕೊಳ್ಳುವಿರಿ? ಗೋಮೂತ್ರವೋ, ಗೋಮಯದಿಂದಲೋ? ಎಂದು ಕಾಂಗ್ರೆಸ್ ಕಿಡಿಕಾರಿತ್ತು.
ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಸೈಲೆಂಟ್ ಸುನೀಲ್, ಬಿಜೆಪಿ ಸದಸ್ಯತ್ವ ಪಡೆದಿದ್ದರೆ ಅದನ್ನು ರದ್ದು ಮಾಡಲಾಗುವುದು. ಅವರು ಪಾರ್ಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದ್ದರು. ಇದೀಗ ಸೈಲೆಂಟ್ ಸುನೀಲ್ ಸದಸ್ಯತ್ವವನ್ನು ಬಿಜೆಪಿ ಬೆಂಗಳೂರು ಕೇಂದ್ರ ಘಟಕ ರದ್ದು ಪಡಿಸಿದೆ.
ನೈತಿಕತೆ ಭಾಷಣ ಮಾಡ್ತಾರೆ, ತದ್ವಿರುದ್ಧವಾಗಿ ನಡೆದುಕೊಳ್ತಾರೆ ಎಂದ ಎಚ್‌ಡಿಕೆ
ಸೈಲೆಂಟ್ ಸುನಿಲ್ ಬಿಜೆಪಿ ಸದಸ್ಯತ್ವ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸೈಲೆಂಟ್ ಸುನಿಲ್, ಸ್ಯಾಂಟ್ರೋ ರವಿಯಂತಹವರೇ ಬಿಜೆಪಿಗೆ ಸೇರಿಕೊಳ್ಳುತ್ತಾರೆ. ಇಂಥದ್ದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದು. ಬಿಜೆಪಿ ನಾಯಕರು ವೇದಿಕೆ ಮೇಲೆ ನೈತಿಕತೆ ಭಾಷಣ ಮಾಡುತ್ತಾರೆ, ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ | Group Clash: ಫ್ಲೆಕ್ಸ್ ಗಲಾಟೆಯಲ್ಲಿ ಕೈ-ಕಮಲ ಕಾರ್ಯಕರ್ತರ ಮಾರಾಮಾರಿ; 3 ಪ್ರತ್ಯೇಕ ಎಫ್ಐಆರ್ ದಾಖಲು
ರೌಡಿಶೀಟರ್ ಬೆತ್ತನಗೆರೆ ಮಂಜ ಪೊಲೀಸರ ವಶಕ್ಕೆ
ನೆಲಮಂಗಲ: ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೌಡಿಶೀಟರ್ ಬೆತ್ತನಗೆರೆ ಮಂಜನನ್ನು ಮಾದನಾಯನಹಳ್ಳಿ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೌಡಿಶೀಟರ್ ಮಂಜ ರಾಜಕೀಯದಲ್ಲಿ ಆ್ಯಕ್ಟೀವ್ ಆದ ಹಿನ್ನೆಲೆಯಲ್ಲಿ ವಶಕ್ಕೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿಂದೆ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕಾರ್ಯಕ್ರಮದಲ್ಲಿ ರೌಡಿಶೀಟರ್ ಬೆತ್ತನಗೆರೆ ಮಂಜ, ಹುಸ್ಕೂರು ಶಿವ ಭಾಗಿಯಾಗಿದ್ದರು. ಬೆತ್ತನಗೆರೆ ಮಂಜ ಬೆಮೆಲ್ ಕೃಷ್ಣಪ್ಪ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಹುಸ್ಕೂರು ಶಿವ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ. ರೌಡಿಶೀಟರ್‌ಗಳು ಬಿಜೆಪಿ ಶಾಸಕರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡದ್ದು ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ರಾಜಕೀಯದಲ್ಲಿ ಬೆತ್ತನಗೆರೆ ಮಂಜ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.