ದಾವಣಗೆರೆ: ದಾವಣಗೆರೆ ರೈಲು ನಿಲ್ದಾಣದಲ್ಲಿ ಇನ್ನೇನು ಟ್ರೈನ್ ಬರುವುದಿತ್ತು. ಎಲ್ಲರೂ ರೈಲಿಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆಗೆ ವೃದ್ಧರೊಬ್ಬರು ಆರಾಮವಾಗಿ ರೈಲ್ವೆ ಪ್ಲಾಟ್‌ಫಾರಂನಿಂದ ಕೆಳಗೆ ಹಳಿಗೆ ಇಳಿದಿದ್ದಾರೆ. ಅಲ್ಲಿಂದ ಮುಂದೆ ಹೋಗಲು ಅನುವಾಗಿದ್ದಾರೆ. ಆದರೆ, ಅಷ್ಟರಲ್ಲಿ ದೊಡ್ಡದಾಗಿ ಹಾರ್ನ್ ಮಾಡುತ್ತಾ ಟ್ರೈನ್ ಬಂದೇ ಬಿಟ್ಟಿದೆ. ಇನ್ನೇನು ಆತ ರೈಲಿಗೆ ಸಿಕ್ಕಿಬಿಡುತ್ತಾನೆ ಅನ್ನುವಷ್ಟರಲ್ಲಿ ಪ್ಲಾಟ್‌ಫಾರಂನಲ್ಲಿ ನಿಂತಿದ್ದ ಆರ್‌ಪಿಎಫ್ ಕಾನ್‌ಸ್ಟೇಬಲ್ ಚಂಗನೆ ಕೆಳಗೆ ಜಿಗಿದು ವೃದ್ಧನನ್ನು ಹಳಿಯಿಂದ ಎಳೆದೊಯ್ದಿದ್ದಾರೆ. ಈ ವಿಡಿಯೊ ಈಗ ವೈರಲ್ (Video Viral) ಆಗಿದೆ.
ವಾಸ್ಕೋ ಟ್ರೈನ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ರೈಲ್ವೆ ಹಳಿ ದಾಟಲು ಹೋದ ವೃದ್ಧ ರಂಗಪ್ಪ ಆರ್‌ಪಿಎಫ್ ಕಾನ್‌ಸ್ಟೇಬಲ್‌ವೊಬ್ಬರ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ. ರೈಲು ಬರುವುದನ್ನು ಗಮನಿಸದೇ ವೃದ್ಧರೊಬ್ಬರು ಹಳಿ ದಾಟಲು ಮುಂದಾಗಿದ್ದಾರೆ.
ಇದನ್ನೂ ಓದಿ: Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ ಪಂಚಭೂತಗಳಲ್ಲಿ ಲೀನ
ಆರ್‌ಪಿಎಫ್ ಕಾನ್‌ಸ್ಟೇಬಲ್ ಕಾರ್ಯಕ್ಕೆ ಮೆಚ್ಚುಗೆ
ಹಳಿ ದಾಟುತ್ತಿದ್ದ ವೃದ್ಧನನ್ನು ಗಮನಿಸಿದ ಗಸ್ತಿನಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೇಬಲ್ ಶಿವಾನಂದ ಅವರು ಸೀದಾ ಹೋಗಿ ಕಾಪಾಡಿದ್ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಸಮಯಪ್ರಜ್ಞೆಯಿಂದ ವೃದ್ಧ ಉಳಿಯುವಂತಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಶಿವಾನಂದ ಅವರನ್ನು ಆರ್‌ಪಿಎಫ್ ಹಾಗೂ ರೈಲ್ವೆ ಪೊಲೀಸರು ಅಭಿನಂದಿಸಿದ್ದಾರೆ.
ಇರಲಿ ಗಮನ
ವೃದ್ಧ ಹೀಗೆ ಏಕಾಏಕಿ ಹಳಿಗೆ ಇಳಿದಿದ್ದರ ಬಗ್ಗೆ ಸಹ ಸಾಕಷ್ಟು ಚರ್ಚೆಗಳು ಆಗಿವೆ. ಏನೇ ಆದರೂ ವೃದ್ಧ ಗಮನಿಸದೆ ಇಳಿಯಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ, ಹಾಗೇ ರೈಲ್ವೆ ಹಳಿ ಮೇಲೆ ಇಳಿಯುವುದೇ ತಪ್ಪು. ಅದಕ್ಕಾಗಿ ಸ್ಕೈವಾಕ್ ವ್ಯವಸ್ಥೆ ಇರುತ್ತದೆ. ಅದನ್ನು ಬಳಸಬೇಕು ಎಂದು ಮಗದೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ಆರ್‌ಪಿಎಫ್ ಕಾನ್‌ಸ್ಟೇಬಲ್ ಸಮಯಪ್ರಜ್ಞೆಯನ್ನು ಹಾಡಿಹೊಗಳಿದ್ದಾರೆ. ಒಂದು ವೇಳೆ ಅವರು ನೋಡದೆ ಇದ್ದಿದ್ದರೆ ಏನಾಗುತ್ತಿತ್ತು? ರೈಲು ನಿಧಾನವಾಗಿ ಬರುತ್ತಿತ್ತಾದರೂ ಆ ವೃದ್ಧ ನಿಂತಿದ್ದ ಜಾಗಕ್ಕಿಂತ ಮುಂದೆ ಹೋಗಿ ನಿಂತಿದೆ. ಅಲ್ಲಿಯೇ ಇದ್ದಿದ್ದರೆ ಜೀವ ಹೋಗುತ್ತಿತ್ತು ಎಂದೆಲ್ಲ ಕಮೆಂಟ್ ಮಾಡಿದ್ದಾರೆ.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ವೃದ್ಧನ ರಕ್ಷಣೆ; ವಿಡಿಯೊ ಇಲ್ಲಿದೆ
ಇದನ್ನೂ ಓದಿ: Hasirumakki launch : ಪ್ರವಾಸಿಗರ ಗಮನಕ್ಕೆ; ನಾಳೆಯಿಂದ ಹಸಿರುಮಕ್ಕಿ ಲಾಂಚ್ ಪುನಾರಂಭ
ಈ ಎಲ್ಲ ದೃಶ್ಯಾವಳಿಗಳು ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಈ ವಿಡಿಯೊದಲ್ಲಿ 2 ದಿನಾಂಕಗಳು ಕಂಡಿದ್ದು, ಅದೂ ಸಹ ಅನುಮಾನಕ್ಕೆ ಕಾರಣವಾಗಿದೆ. ಇದು ಹೊಸ ವಿಡಿಯೊ ಆಗಿದೆಯೇ? ಇಲ್ಲವೇ 2021ರ ವಿಡಿಯೊ ಇರಬಹುದೇ ಎಂಬುದು ತಿಳಿಯುತ್ತಿಲ್ಲ. ಕಾರಣ, ವಿಡಿಯೊದ ಬಲಭಾಗದ ಮೇಲುಗಡೆ 2021-07-01 ಎಂಬುದಾಗಿ ನಮೂದಾಗಿದೆ. ಆದರೆ, ಕೆಳಗಡೆ A24 DVG_CAM24 2023-07-07 ಎಂದು ನಮೂದಾಗಿದೆ. ಹೀಗಾಗಿ ಈ ಘಟನೆ ಜುಲೈ 7ರಂದು ನಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ.