Site icon Vistara News

Karnataka Election 2023: ಚಿಂತಾಮಣಿಯಲ್ಲಿ ಸಿಕ್ತು 12 ಲಕ್ಷ ರೂ.; ಹುಬ್ಬಳ್ಳಿ ಕಾಂಗ್ರೆಸ್‌ ನಾಯಕಿ ಮನೇಲಿ ಏನೂ ಸಿಗಲಿಲ್ಲ!

Rs 12 lakh seized in Chintamani Nothing was found at the Hubli Congress leader house Karnataka Election 2023 updates

ಬೆಂಗಳೂರು/ಚಿಕ್ಕಬಳ್ಳಾಪುರ/ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಒಂದೇ ದಿನ ಬಾಕಿ ಇದೆ. ಎಲ್ಲರೂ ಮತದಾನ ಮಾಡಲು ಸಜ್ಜಾಗಿದ್ದಾರೆ. ಇನ್ನು ರಾಜಕೀಯ ಪಕ್ಷಗಳೂ ಸಹ ಅಧಿಕಾರ ಹಿಡಿಯಲು ಕಾತರರಾಗಿದ್ದಾರೆ. ಎಲೆಕ್ಷೆನ್‌ ಕೊನೆಯ ದಿನ ಝಣ ಝಣ ಕಾಂಚಾಣ ಎಲ್ಲೆಡೆ ಹರಿದಾಡುತ್ತದೆ ಎಂಬ ಆರೋಪ ಪ್ರತಿ ಚುನಾವಣೆ ವೇಳೆಯೂ ಕೇಳಿಬರುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಕೆಲವು ಐಟಿ ದಾಳಿ, ಚುನಾವಣೆ ಅಧಿಕಾರಿಗಳಿಂದ ಜಪ್ತಿಯಂತಹ ಕ್ರಮಗಳು ಜರುಗುತ್ತಲೇ ಇರುತ್ತವೆ. ಸೋಮವಾರ ರಾತ್ರಿ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಪರ ಮತದಾರರಿಗೆ ಹಂಚುತಿದ್ದ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಿ.ಎನ್. ವೇಣುಗೋಪಾಲ್ ಪರ ಹಂಚಿಕೆ ಆಗುತಿದ್ದ ಹಣ ಎಂದು ಹೇಳಲಾಗಿದೆ. ಒಟ್ಟು 12 ಲಕ್ಷ 88 ಸಾವಿರ ರೂಪಾಯಿಯನ್ನು ಎಲೆಕ್ಷನ್ ಸೆಕ್ಟರ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚಿಂತಾಮಣಿ ತಾಲೂಕಿನ ಉಲಪನಹಳ್ಳಿ ಗ್ರಾಮದಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಕಾಂಗ್ರೆಸ್‌ ನಾಯಕಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ದೇವಕಿ ಯೋಗಾನಂದ

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಮನೆ ಮೇಲೆ ದಾಳಿ

ಹುಬ್ಬಳ್ಳಿಯ ಕಾಂಗ್ರೆಸ್‌ ನಾಯಕಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ದೇವಕಿ ಯೋಗಾನಂದ ಅವರ ಗಾಮನಗಟ್ಟಿಯಲ್ಲಿರುವ ಮನೆ ಮೇಲೆ ಸೋಮವಾರ (ಮೇ 8) ತಡರಾತ್ರಿ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. 12 ಜನ ಅಧಿಕಾರಗಳ ತಂಡ ದಾಳಿ ನಡೆಸಿದ್ದು, ಒಟ್ಟು ಮೂರು ಗಂಟೆಗಳ ಕಾಲ ತಪಾಸಣೆ ನಡೆಸಿದ್ದಾರೆ. ಆದರೆ, ಬರಿಗೈಯಲ್ಲಿ ವಾಪಸಾಗಿದ್ದಾರೆ. ಇವರು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಕೈ ಅಭ್ಯರ್ಥಿ ದೀಪಕ್ ಚಿಂಚೋರೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Karnataka Election : ಮತದಾನದ ಮುನ್ನಾದಿನವೂ ಹನುಮಾನ್‌ ಚಾಲೀಸ್‌ ಪಠಣ; ಕಾಂಗ್ರೆಸ್‌ ವಿರುದ್ಧ ಬಜರಂಗ ಅಸ್ತ್ರ

ಮರದ ಬುಡದಲ್ಲೂ ಸಿಕ್ಕಿತು ಹಣ; ಐಟಿ ರೈಡ್‌ನಲ್ಲಿ ಕೋಟಿಗಟ್ಟಲೆ ವಶ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಚಿಕ್ಕಲ್ಲಸಂದ್ರದಲ್ಲಿ ಮರದ ಬುಡದಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಆರ್.ಕೆ. ರಮೇಶ್ ಅವರ ಕಾರ್ಯಕರ್ತರು ಮನೆಮನೆಗೆ ತೆರಳಿ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಬೆಂಬಲಿಗರು ಆರೋಪಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕೈ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಘಟನೆಯಿಂದ ಉಂಟಾದ ಬಿಗುವಿನ ಸ್ಥಿತಿ ತಿಳಿಗೊಳಿಸಲು ಸ್ಥಳಕ್ಕೆ ಬಂದ ಸುಬ್ರಹ್ಮಣ್ಯಪುರ ಪೊಲೀಸರು ಕಾಂಗ್ರೆಸ್ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ನಿಂದ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಪಕ್ಕದಲ್ಲೆಲ್ಲ ತಡಕಾಡಿದ ಪೊಲೀಸರಿಗೆ ಈ ವೇಳೆ ಮರದ ಬುಡದಲ್ಲಿ ಗರಿ ಗರಿ ನೋಟುಗಳಿಂದ ತುಂಬಿದ ಬ್ಯಾಗ್ ಸಿಕ್ಕಿತು. ಅದರಲ್ಲಿ ಮೂರು ಲಕ್ಷದಷ್ಟು ಹಣವಿತ್ತು. ಹಣ ಸೀಜ್‌ ಮಾಡಿರುವ ಪೊಲೀಸರು, ಕೆಲ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಟಿ ಅಧಿಕಾರಿಗಳಿಂದ 11 ಕಡೆ ದಾಳಿ, ಕೋಟಿಗಟ್ಟಲೆ ಹಣ ವಶ

ಬೆಂಗಳೂರು ನಗರದ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಾನಾ ಕಡೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದು, ಸುಮಾರು 15.53 ಕೋಟಿ ರೂ. ನಗದು ಸೀಜ್ ಮಾಡಿದ್ದಾರೆ. 7 ಕೋಟಿ ಮೌಲ್ಯದ 10.14 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಶಿವಾಜಿನಗರ ವ್ಯಾಪ್ತಿಯಲ್ಲಿ 4.77 ಕೋಟಿ, ಆರ್‌ಆರ್ ನಗರ ವ್ಯಾಪ್ತಿಯಲ್ಲಿ 3.44 ಕೋಟಿ, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 3.35 ಕೋಟಿ, ಪುಲಿಕೇಶಿನಗರ ವ್ಯಾಪ್ತಿಯಲ್ಲಿ 2.30 ಕೋಟಿ, ಶಾಂತಿನಗರ ವ್ಯಾಪ್ತಿಯಲ್ಲಿ 62.83 ಲಕ್ಷ, ಗಾಂಧಿನಗರ ವ್ಯಾಪ್ತಿಯಲ್ಲಿ 55 ಲಕ್ಷ, ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಜಯನಗರದಲ್ಲಿ 23.50 ಲಕ್ಷ ನಗದು ಸೀಜ್ ಮಾಡಲಾಗಿದೆ. ರಾಯಚೂರು ವ್ಯಾಪ್ತಿಯಲ್ಲಿ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Karnataka Election 2023: ಕಡಲಾಳದಲ್ಲಿ ಸ್ಕ್ಯೂಬಾ ಡೈವಿಂಗ್‌; ಮದುವೆ ಮಂಟಪದಲ್ಲಿ ಮತದಾನ ಜಾಗೃತಿ

ನಗರದ ಮೂರು ಕ್ಷೇತ್ರಗಳಲ್ಲಿ ಐದು ಕೋಟಿ ಮೌಲ್ಯದ ಸುಮಾರು 6.59 ಕೆಜಿ ಚಿನ್ನ, ರಾಯಚೂರು ಕ್ಷೇತ್ರದಲ್ಲಿ 2.8 ಕೋಟಿ ಮೌಲ್ಯದ 3.55 ಕೆಜಿ ಚಿನ್ನ ಸೀಜ್ ಮಾಡಲಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಐಟಿ ಇಲಾಖೆ ಆಪರೇಷನ್ ಹೆಚ್ಚು ಮಾಡಿದೆ. ಮತದಾನಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಇದ್ದು, ಕ್ಷೇತ್ರಗಳಲ್ಲಿ ಹಣ, ಉಡುಗೊರೆಗಳ ಹಂಚಿಕೆ ಮಾಡಲಾಗುತ್ತಿರುವ ಗುಮಾನಿಯಲ್ಲಿ ಐಟಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.

Exit mobile version