ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜ್ಯದ ಹಲವು ಕಡೆ ಹಣದ ಹರಿವುಗಳು ಹೆಚ್ಚತೊಡಗಿವೆ. ಅಲ್ಲದೆ, ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟ, ಒಡವೆ-ವಸ್ತುಗಳ ಸಾಗಾಟ ಹೆಚ್ಚುವ ಸಂಭವ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವೂ ಹದ್ದಿನ ಕಣ್ಣು ಇಡಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಕಳೆದ ಹಲವು ದಿನಗಳಿಂದ ರಾಜ್ಯದ ಹಲವು ಕಡೆ ದಾಖಲೆ ಇಲ್ಲದ ಹಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಈಗ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆಯೂ ದಾಖಲೆ ಇಲ್ಲದ ಒಟ್ಟು 13.16 ಕೋಟಿ ರೂಪಾಯಿ ಮತ್ತು 3 ಕೋಟಿ ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 22.97 ಲಕ್ಷ ರೂ. ವಶ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹಲವು ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದ ಒಟ್ಟು 22.97 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಹುಕ್ಕೇರಿ ತಾಲೂಕಿನ ಬುಗುಟೆ ಆಲೂರು ಚೆಕ್‌ಪೋಸ್ಟ್‌ನಲ್ಲಿ 1.90 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ರಾಯಭಾಗ ತಾಲೂಕಿನ ಹಾರೂಗೇರಿ ಚೆಕ್‌ಪೋಸ್ಟ್‌ನಲ್ಲಿ 4 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಲಾಗಿದ್ದರೆ, ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ 3.45 ಲಕ್ಷ ರೂಪಾಯಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಐಗಳಿ, ಸಂಕೇಶ್ವರ ಹಾಗೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಇನ್ನು ಕೊಲ್ಹಾಪುರದಿಂದ ಬೆಳಗಾವಿಗೆ ಬರುತ್ತಿದ್ದ ಕ್ರೆಟಾ ಕಾರಿನಲ್ಲಿದ್ದ 10 ಲಕ್ಷ ರೂಪಾಯಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾಂಗ್ಲಿಯಿಂದ ಬರುತ್ತಿದ್ದ ಕಾರಿನಲ್ಲಿ 1.50 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಇಂಚಲಕರಂಜಿಯಿಂದ ಕರ್ನಾಟಕ ಪ್ರವೇಶ ಮಾಡುತ್ತಿದ್ದ ಮತ್ತೊಂದು ಕಾರಿನಿಂದ 1.50 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಚಿನ್ನ ವಶಕ್ಕೆ
ಚಿಕ್ಕಮಗಳೂರು: ತರೀಕೆರೆ ಪಟ್ಟಣದ ಚೆಕ್‌ಪೋಸ್ಟ್‌ನಲ್ಲಿ 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಿನಿ ಕಂಟೇನರ್‌ನಲ್ಲಿ ಚಿನ್ನ ಸಾಗಾಟ ಮಾಡಲಾಗುತ್ತಿತ್ತು.
ಈ ಮಿನಿ ಕಂಟೇನರ್ ತರೀಕೆರೆಯಿಂದ ಚಿಕ್ಕಮಗಳೂರಿಗೆ ತೆರಳುತ್ತಿತ್ತು ಎನ್ನಲಾಗಿದೆ. ಚಿನ್ನದ ಬಿಸ್ಕೆಟ್ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿನ್ನಕ್ಕೆ ಸೂಕ್ತ ದಾಖಲೆ ಸಲ್ಲಿಸುವಂತೆ ಪೊಲೀಸರು ಸೂಚಿಸಿದ್ದು, ಅವರ ಬಳಿ ದಾಖಲೆ ಇಲ್ಲ ಎನ್ನಲಾಗಿದೆ.
ರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, 9 ಕೆಜಿ 300 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ಬಾಕ್ಸ್‌ನಲ್ಲಿ ಚಿನ್ನವನ್ನು ತರಲಾಗುತ್ತಿತ್ತು. ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಚುನಾವಣೆ ನಿಮಿತ್ತ ಜಿಲ್ಲಾದ್ಯಂತ ಗಡಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಕಲಬುರಗಿಯಲ್ಲಿ 1.90 ಕೋಟಿ ರೂ. ವಶ
ಕಲಬುರಗಿ: ಜಿಲ್ಲೆಯ ಕಿಣ್ಣಿಸಡಕ್ ಹಾಗೂ ಜೇವರ್ಗಿ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದ 1.90 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಕಿಣ್ಣಿಸಡಕ್ ಚೆಕ್‌ಪೋಸ್ಟ್ ಬಳಿ 1.40 ಕೋಟಿ ರೂಪಾಯಿ ಹಾಗೂ ಜೇವರ್ಗಿ ಚೆಕ್‌ಪೋಸ್ಟ್‌ನಲ್ಲಿ 50 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Karnataka Elections : ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ವಿರುದ್ಧ ಕಣಕ್ಕಿಳಿಯುತ್ತಾರಾ ಸಿ.ಎಂ ಇಬ್ರಾಹಿಂ?
ಗದಗದಲ್ಲಿ ದಾಖಲೆ ಇಲ್ಲದ 1.43 ಲಕ್ಷ ರೂಪಾಯಿ ವಶ
ಗದಗ ನಗರದ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನ ಬಳಿಯ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 1.43 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಕಾರಿನಲ್ಲಿ ಈ ಹಣವನ್ನು ತರಲಾಗುತ್ತಿತ್ತು. ಗಜೇಂದ್ರಗಡ ಪಟ್ಟಣದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕಾರು ಇದಾಗಿತ್ತು. ಇನ್ನು ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬರುತ್ತಿದ್ದ ಕಾರನ್ನು ದುಂದೂರ ಚೆಕ್‌ಪೋಸ್ಟ್‌ನಲ್ಲಿ ತಡೆಯಲಾಗಿದ್ದು, ಅದರೊಳಗಿದ್ದ 750MLನ 25 ಬಾಟಲ್ ಬ್ಲೆಂಡರ್ ಸ್ಪ್ರೈಡ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಬೆಟಗೇರಿ ಹಾಗೂ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.