ಬೆಂಗಳೂರು: ಐಷಾರಾಮಿ ಬಿಎಂಡಬ್ಲ್ಯು ಕಾರಿನ ಗಾಜು ಒಡೆದು 13.75 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ನಗರದ ಹೊರವಲಯದ ಸರ್ಜಾಪುರದ ಸೋಂಪುರ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ನಡೆದಿದೆ. ಇಬ್ಬರು ಕಳ್ಳರು ಹಾಡಹಗಲೇ ಕಾರಿನಲ್ಲಿ ಕಳ್ಳತನ ಮಾಡಿರುವ ದೃಶ್ಯ (Theft Case) ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆನೇಕಲ್‌ನ ಮೋಹನ್‌ಬಾಬು ಎಂಬುವರ ಕಾರಿನಲ್ಲಿ ಹಣ ಕಳ್ಳತನವಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಕಳ್ಳತನ ಮಾಡಿದ್ದಾರೆ. ಅವರಲ್ಲಿ ಒಬ್ಬ ಕಾರಿನ ಗಾಜನ್ನು ಒಡೆದು, ನಂತರ ಒಳಗಿದ್ದ ಹಣದ ಬ್ಯಾಗ್ ಎತ್ತಿಕೊಂಡು ಕಳ್ಳರು ಸಹಚರನ ಜತೆ ಪರಾರಿಯಾಗಿದ್ದಾನೆ.
BMW Window broken by 2 men to rob Rs 13.75 lakh cash near sub-registrar's office in Sompura, Sarjapur. pic.twitter.com/zY8oXrXfSO
— Harsh (@Edsh4rsh) October 22, 2023
ಇದನ್ನೂ ಓದಿ | ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ ಹೆಸರು ಬಳಸಿಯೇ ವ್ಯಾಪಾರಿಯ ಕಿಡ್ನ್ಯಾಪ್; ಮುಂದಾಗಿದ್ದು ರೋಚಕ!
ನಂತರ ಸ್ಥಳಕ್ಕೆ ಮಾಲೀಕ ಮೋಹನ್‌ಬಾಬು ಬಂದು ನೋಡಿದಾಗ, ಕಾರಿನ ಗಾಜು ಒಡೆದು, ಹಣ ಕಳ್ಳತನ ಮಾಡಿರುವುದು ಕಂಡು ಗಾಬರಿಯಾಗಿದ್ದಾರೆ. ಮೋಹನ್‌ಬಾಬು ಅವರು 13.75 ಲಕ್ಷ ಹಣದಲ್ಲಿ 5 ಲಕ್ಷ ರೂ.ಗಳನ್ನು ಸೈಟ್ ನೋಂದಣಿ ಮಾಡಿಸಲು ಸ್ನೇಹಿತನಿಂದ ಪಡೆದಿದ್ದರು. ಬಳಿಕ ಅವರು ಸರ್ಜಾಪುರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಬ್ಬರನ್ನು ಅಪಹರಿಸಿ ಮನಬಂದಂತೆ ಥಳಿಸಿದ ಅಕ್ರಮ ಮರಳು ದಂಧೆಕೋರರು!
ಯಾದಗಿರಿ: ಅಕ್ರಮ ಮರಳು ದಂಧೆಕೋರರು ವ್ಯಕ್ತಿಗಳಿಬ್ಬರನ್ನು ಕಿಡ್ನ್ಯಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ (Assault Case) ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ರಾಜು ನಡಿಹಾಳ್, ಶರಣಗೌಡ ಹಯ್ಯಾಳ ಎಂಬುವವರನ್ನು ರೌಡಿಶೀಟರ್ ವಿಜಯ ರಾಠೋಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಳ್ಳಿ ಬಳಿ ಕಿಡ್ನ್ಯಾಪ್ ಮಾಡಿ ಕಾರಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ರೌಡಿಶೀಟರ್ ವಿಜಯ ರಾಠೋಡ್ ಶಹಾಪುರ ತಾಲೂಕಿನ ಚಾಮನಾಳ ಗ್ರಾಮ ಪಂಚಾಯಿತಿಯ ಸದಸ್ಯನೂ ಆಗಿದ್ದಾನೆ. ರಾಜು ಹಾಗೂ ಶರಣಗೌಡರನ್ನು ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿದ್ದಾರೆ.
ಕಾರಿನ ಡಿಕ್ಕಿಯೊಳಗೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಿಡ್ನ್ಯಾಪ್ ಮಾಡಿ ಬಳಿಕ ಜೀವಂತವಾಗಿ ಕೃಷ್ಣಾ ನದಿಗೆ ಎಸೆಯಲು ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಆದರೆ ಹಲ್ಲೆ ಮಾಡುವಾಗ ಸ್ಥಳೀಯರು ಗಮನಿಸಿದ ಕಾರಣಕ್ಕೆ ಇಬ್ಬರನ್ನೂ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ: Murder Case : ಕುಡಿದು ಟೈಟಾಗಿದ್ದ ರೌಡಿಶೀಟರ್‌ಗೆ ಮಚ್ಚು ಬೀಸಿದ ಎದುರಾಳಿಗಳು
ಮಾರಣಾಂತಿಕ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ರಾಜು, ಶರಣಗೌಡರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 18ರಂದು ಈ ಘಟನೆ ನಡೆದಿದ್ದು, ತಡವಾಗಿ ದೂರು ದಾಖಲಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ವಿಜಯರಾಠೋಡ್ ಸೇರಿ ಹಲವರ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.
ಪ್ರತಿಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ
ನನ್ನ ಮಗನ ಮೇಲೆ ಹಲ್ಲೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹಲ್ಲೆಗೊಳಗಾದ ಶರಣಗೌಡ ತಂದೆ ವೀರಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಾರೋ ನನ್ನ ಮಗನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಜ್ಞೆಕಳೆದುಕೊಂಡಿದ್ದಾನೆ. ನಮ್ಮ ಮಗನಿಗೆ ಪ್ರಜ್ಞೆ ಬಂದ ನಂತರ ಘಟನೆ ಸಂಬಂಧ ಎಲ್ಲವೂ ತಿಳಿಯಲಿದೆ. ನಮ್ಮ ಮಗನನ್ನು ಈ ಸ್ಥಿತಿಗೆ ತಂದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ