ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ (Fraud Case) ಬೆಳಕಿಗೆ ಬಂದಿದೆ. ಫ್ರಾಂಚೈಸಿ ಮತ್ತು ಬ್ಯುಸಿನೆಸ್ (Franchise and Business) ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದು ಮತ್ತೊಂದು ಐಎಂಐ ಪ್ರಕರಣ (IMA Case) ಎಂದೇ ಹೇಳಲಾಗುತ್ತಿದ್ದು, ಚೈನ್‌ಲಿಂಕ್ (Chain Link Business) ಮೂಲಕ ಸುಮಾರು 800 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ. ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಈ ಮಹಾ ಮೋಸ ನಡೆದಿದೆ.
ಭಾರತ ಸರ್ಕಾರದ ಅನುಮತಿ ಪಡೆದಿರುವುದಾಗಿ ನಂಬಿಸಿ ಮೋಸ ಮಾಡಲಾಗಿದ್ದು, ಆಯುರ್ವೇದಿಕ್ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಅವಕಾಶ ನಿಮಗಿದೆ. ಇದಕ್ಕಾಗಿ ನೀವು ಪ್ರಾಂಚೈಸಿ ಮತ್ತು ಬ್ಯುಸಿನೆಸ್ ಮಾಡಿ ಎಂದು ನಂಬಿಸಿ ಸಾವಿರಾರು ಜನರಿಗೆ ವಂಚನೆ ಮಾಡಲಾಗಿದೆ.
“ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್”, “ಕಾರ್ಪ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ” ಹಾಗೂ “ಇ ಸ್ಟೋರ್ ಇಂಡಿಯಾ ಸೂಪರ್ ಮಾರ್ಕೆಟ್ ಸ್ಟೋರ್ ಫ್ರಾಂಚೈಸಿ” ಹೆಸರಿನಲ್ಲಿ ಈ ಮಹಾ ವಂಚನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕಂಪನಿ ಇದಾಗಿದ್ದು, ಆಯರ್ವೇದಿಕ್ ಉತ್ಪನ್ನ (Ayurvedic Product), ಉದ್ಯಮದ ಹೆಸರಿನಲ್ಲಿ ಜನರನ್ನು ನಂಬಿಸಿ ವಂಚನೆ ಮಾಡಲಾಗಿದೆ.
ಇದನ್ನೂ ಓದಿ: Free Bus Service : ಶಕ್ತಿ ಯೋಜನೆಯಿಂದ ದೇವರೂ ಶ್ರೀಮಂತರಾದರು; ಪುಣ್ಯಕ್ಷೇತ್ರಗಳಲ್ಲಿ ಹೆಚ್ಚಿದ ಆದಾಯ
ದುಪ್ಪಟ್ಟು ಲಾಭದ ಆಮಿಷ
ಸಾಮಾನ್ಯವಾಗಿ ಚೈನ್‌ಲಿಂಕ್ ಬ್ಯುಸಿನೆಸ್ ರೀತಿ ವಂಚನೆ ಮಾಡುವ ಖದೀಮರು, ಇದು ಚೈನ್ ಲಿಂಕ್ ರೀತಿಯಲ್ಲ, ಇದೊಂದು ಬ್ಯುಸಿನೆಸ್ ಆಗಿದೆ. ನೀವು ಫ್ರಾಂಚೈಸಿಯನ್ನು ಪಡೆದುಕೊಂಡರೆ ನಿಮಗೆ ಇದರಲ್ಲಿ ಅಧಿಕ ಲಾಭಾಂಶ ಇದೆ ಎಂದು ನಂಬಿಸುತ್ತಾರೆ. ಅಲ್ಲದೆ, ಹೂಡಿಕೆ ಮಾಡಿದ್ದಕ್ಕೆ ದುಪ್ಪಟ್ಟು ಲಾಭವೂ ಸಿಗಲಿದೆ. ಇನ್ನು ವ್ಯವಹಾರದಲ್ಲಿಯೂ ಲಾಭಾಂಶವನ್ನು ನೀಡಲಾಗುವುದು ಎಂದು ಆಮಿಷವೊಡ್ಡುತ್ತಾರೆ. ಇದಕ್ಕೆ ಪ್ರಾರಂಭದಲ್ಲಿ ಎಲ್ಲರಿಗೂ ಲಾಭಾಂಶದ ಹಣವನ್ನು ಕೊಡುತ್ತಾರೆ. ಒಂದೆರಡು ತಿಂಗಳು ಹಣ ಪಡೆದವರಿಗೆ ನಂಬಿಕೆ ದುಪ್ಪಟ್ಟಾದ ಮೇಲೆ ಅವರು ಇನ್ನೊಬ್ಬರನ್ನು ಈ ಬ್ಯಸಿನೆಸ್‌ಗೆ ಪರಿಚಯಿಸುತ್ತಾರೆ. ಇಲ್ಲಾಗಿದ್ದೂ ಇದೇ ಕಥೆ. ಜನರು ತಾವು ನಂಬಿ ಮೋಸ ಹೋಗಿದ್ದಲ್ಲದೆ, ಪರಿಚಯದವರನ್ನೂ ಹಣ ಹೂಡುವಂತೆ ಮಾಡಿ ಈಗ ತೊಂದರೆಗೆ ಸಿಲುಕಿದ್ದಾರೆ. ಈಗ ಸರಿಸುಮಾರು 49 ಜನ ರಾಜ್ಯದ ವಿವಿಧ ಕಡೆ ಈ ಕಂಪನಿ ವಿರುದ್ಧ ದೂರನ್ನು ನೀಡಿದ್ದಾರೆ. ಉಳಿದವರಿಗೂ ದೂರು ನೀಡುವಂತೆ ಕೋರಿದ್ದಾರೆ.
5 ಲಕ್ಷ ಹೂಡಿಕೆ ಮಾಡಿ ಮಾಸಿಕ 50 ಸಾವಿರ ಪಡೆಯಿರಿ!
ಯಾರಿಗೆ ಉಂಟು ಯಾರಿಗೆ ಇಲ್ಲ! ಯಾವ ಬ್ಯಾಂಕ್‌ನಲ್ಲಿಯೂ ಈ ರೀತಿಯ ಸೌಲಭ್ಯ ಸಿಗಲಾರದು. ಯಾವ ಮ್ಯೂಚುವಲ್ ಫಂಡ್, ಲಿಕ್ವಿಡಿಟಿ ಫಂಡ್, ಗೋಲ್ಡ್ ಫಂಡ್‌ನಿಂದಲೂ ಹೀಗೆ ಮಾಸಿಕ ಲಾಭ ದೊರೆಯುವುದಿಲ್ಲ. ಇಲ್ಲಿ ನೀವು ಕೇವಲ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಸಾಕು ಮಾಸಿಕವಾಗಿ 50 ಸಾವಿರ ರೂಪಾಯಿಯನ್ನು ಕೊಡುತ್ತಾ ಹೋಗಲಾಗುವುದು. ಹೀಗೆ ನಿಮಗೆ ಒಟ್ಟು 36 ತಿಂಗಳ ಕಾಲ ನೀಡಲಾಗುವುದು. ಇದರ ಒಟ್ಟು ಮೊತ್ತ 18 ಲಕ್ಷ ರೂಪಾಯಿ ಆಗಲಿದೆ. ಆದರೆ, ನೀವು ಹೂಡಿಕೆ ಮಾಡುವುದು ಕೇವಲ 5 ಲಕ್ಷ ರೂಪಾಯಿ ಮಾತ್ರವೇ ಆಗಿರುತ್ತದೆ ಎಂದು ನಂಬಿಸಿ ವಂಚನೆ ಮಾಡಲಾಗಿದೆ.
25 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ?
ಒಂದು ವೇಳೆ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 1 ಲಕ್ಷ ರೂಪಾಯಿಯಂತೆ 35 ಲಕ್ಷ ವಾಪಸ್ ನೀಡುವುದಾಗಿ ವಂಚನೆ ಮಾಡಲಾಗಿದೆ. ಜತೆಗೆ ಈ ಸ್ಟೋರ್ ಇಂಡಿಯಾ ವ್ಯವಹಾರದ ಲಾಭಾಂಶದಲ್ಲಿ ಶೇಕಡಾ 5ರಷ್ಟು ನೀಡುವುದಾಗಿ ಹೇಳಲಾಗಿತ್ತು. ಈ ರೀತಿಯಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರಪತ್ರವನ್ನು ಹಂಚಿಕೆ ಮಾಡಿ ಅಮಾಯಕರಿಗೆ ವಂಚನೆ ಮಾಡಲಾಗಿದೆ.
ಈ ವಂಚನೆ ಸಂಬಂಧ 2018ರಿಂದಲೇ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಸೇರದಂತೆ ಹಲವು ಕಡೆ ದೂರು ದಾಖಲು ಮಾಡಲಾಗಿದೆ. ಇದುವರೆಗೆ 18 ದೂರುಗಳು ದಾಖಲಾಗಿದ್ದು 7 ಪ್ರಕರಣದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ವಂಚನೆ ಮಾಡಿರುವ ಕಂಪನಿಯ ವಿರುದ್ಧ ಸರಣಿ ಎಫ್‌ಐಆರ್ ದಾಖಲಾಗುತ್ತಿವೆ. ಆದರೆ, ಹಣ ಹೂಡಿಕೆ ಮಾಡಿಸಿಕೊಂಡಿರುವ ವಂಚಕರು ಮಾತ್ರ ಎಸ್ಕೇಪ್ ಆಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಆರಂಭದಲ್ಲಿ ಹಣ ಹೂಡಿಕೆ ಮಾಡಿದವರಿಗೆ ಒಂದೆರಡು ತಿಂಗಳು ಮಾತ್ರ ಸ್ವಲ್ಪ ಮೊತ್ತದ ಹಣ ವಾಪಸ್ ಮಾಡಲಾಗಿದೆ. ಇದೀಗ ಒಪ್ಪಂದದಂತೆ ಹಣ ನೀಡದೆ ಸಬೂಬು ಹೇಳಿ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ಯಾರು ಯಾರು?
ಮಹಮ್ಮದ್ ಫೈಜಾನ್ ಪ್ರಮುಖ ಆರೋಪಿಯಾಗಿದ್ದು, ಈತ ಆರ್ಯವೇದಿಕ್ ಕಂಪನಿಯ ಸಿಎಂಡಿ ಎಂದು ಹೇಳಿಕೊಂಡಿದ್ದಾನೆ. ಉಳಿದಂತೆ ಉಮೇಶ್ ಕುಮಾರ್ ತ್ಯಾಗಿ, ಉರೋಜ್ ಅಲಿ ಖಾನ್, ಶಂಶಾದ್ ಅಹ್ಮದ್, ನಾಜಿಮಾ ಖಾನ್, ಅನಿಲ್ ಜಾದವ್ ಮೇಲೆ ಈಗ ಎಫ್‌ಐಆರ್ ದಾಖಲಾಗಿದೆ. ಇವರೆಲ್ಲರೂ ಕಂಪನಿಯ ನಿರ್ದೇಶಕರಾಗಿದ್ದಾರೆ.
ಕಂಪನಿ ವಿಳಾಸ
ಸಿ-3, ಸಿ-4, ಸೆಕ್ಟರ್ 6, ನೋಯ್ಡಾ, ಗೌತಮ ಬುದ್ಧ ನಗರ, ಉತ್ತರ ಪ್ರದೇಶ -201301 ವಿಳಾಸದಲ್ಲಿ ಕಂಪನಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಇಮೆಲ್ ವಿಳಾಸ – www.vedicayurcure.com ಹಾಗೂ www.estoreindia.in ಎಂದು ನೀಡಲಾಗಿತ್ತು. ಈ ವೆಬ್‌ಸೈಟ್ ವಿಳಾಸದಲ್ಲಿಯೂ ಸಾಕಷ್ಟು ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾರಿಗೂ ಅನುಮಾನ ಮೂಡಿಲ್ಲ.
ಇದನ್ನೂ ಓದಿ: BY Vijayendra : ಅಮಿತ್ ಶಾ- ವಿಜಯೇಂದ್ರ ಭೇಟಿ ವೇಳೆ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ?
ಅಗ್ರಿಮೆಂಟ್ ಕಾಪಿಯೂ ಪಕ್ಕಾ
ಹೀಗೆ ಹಣ ಹೂಡಿಕೆಯನ್ನು ಸುಮ್ಮನೆ ಮಾಡಿಸಿಕೊಳ್ಳುವುದಿಲ್ಲ. ಅವರಿಂದ ಪಡೆದ ಹಣ ಹಾಗೂ ಇವರು ಮಾಸಿಕವಾಗಿ ಎಷ್ಟು ತಿಂಗಳವರೆಗೆ? ಎಷ್ಟು ಹಣವನ್ನು ನೀಡಲಾಗುವುದು ಎಂಬುದನ್ನು ಸಹ ಕರಾರು ಪತ್ರದಲ್ಲಿ ಬರೆದುಕೊಡಲಾಗುವುದು. ಇದರಿಂದ ಹೂಡಿಕೆ ಮಾಡುವವರಿಗೆ ಮತ್ತಷ್ಟು ನಂಬಿಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಲಕ್ಷ ಲಕ್ಷ ಹಣವನ್ನು ಹೂಡಿಕೆ ಮಾಡಿ ಈಗ ಕೈಸುಟ್ಟುಕೊಳ್ಳುವಂತೆ ಆಗಿದೆ.