ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಎನ್ನುವುದು ಮೇಲ್ಜಾತಿಯವರ ಒಂದು ಅಸೋಸಿಯೇಷನ್. ಆರ್‌ಎಸ್‌ಎಸ್, ಎಬಿವಿಪಿ, ಹಿಂದು ಜಾಗರಣ ವೇದಿಕೆ, ಬಜರಂಗದಳ ಇವೆಲ್ಲವೂ ಮೇಲ್ಜಾತಿಯ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅರೋಪಿಸಿದ್ದಾರೆ.
ಭಾರತ ಬಿಟ್ಟು ತೊಲಗಿ ದಿನಾಚರಣೆ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್‌ಎಸ್‌ಎಸ್ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸುದ್ದಿಗೋಷ್ಠಿಯಲ್ಲಿ ಇದ್ದ ವಿ.ಎಸ್. ಉಗ್ರಪ್ಪ ಅವರ ಕಡೆ ತಿರುಗಿ, ಉಗ್ರಪ್ಪ ಆರ್‌ಎಸ್‌ಎಸ್‌ನಲ್ಲೇ ಇದ್ದವರು, ಅವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಅವರು ಆರ್‌ಎಸ್‌ಎಸ್‌ನಲ್ಲಿ ಅಲ್ಲ, ಎಬಿಬಿಪಿಯಲ್ಲಿ ಇದ್ದವರು ಎಂದರು. ಉಗ್ರಪ್ಪ ಪ್ರತಿಕ್ರಿಯಿಸಿ, ನಾನು ಆರ್‌ಎಸ್‌ಎಸ್ ಅಲ್ಲ, ಏಳ್ ಎಸ್‌ಎಸ್ ಎಂದರು.
ಇದನ್ನೂ ಓದಿ | ಆರ್‌ಎಸ್‌ಎಸ್ ಚಡ್ಡಿ ಸುಟ್ಟರೆ ಸಿದ್ದರಾಮಯ್ಯ ಭಸ್ಮ ಆಗ್ತಾರೆ ಎಂದ ರೇಣುಕಾಚಾರ್ಯ
ಮಾತು ಮುಂದುವರಿಸಿದ ಸಿದ್ದರಾಮಯ್ಯ, ಮೊದಲಿನಿಂದಲೂ ನಾವು ಎಬಿವಿಪಿಯನ್ನು ವಿರೋಧ ಮಾಡಿಕೊಂಡು ಬಂದವರು. 1971ರಲ್ಲಿ ಕಾನೂನು ಕಾಲೇಜಿನಲ್ಲಿದ್ದಾಗ ಎಬಿವಿಪಿ ವಿರುದ್ಧ ನಾವು ಚುನಾವಣೆಯಲ್ಲಿ ಗೆದ್ದೆವು. ಒಬ್ಬ ಮಾತ್ರ ನಮ್ಮ ಹಾಗೂ ಎಬಿವಿಪಿ ಬೆಂಬಲ ಪಡೆದು ಅಧ್ಯಕ್ಷ ಆಗಿಬಿಟ್ಟ ಗಿರಾಕಿ. ಆಗಿನಿಂದಲೂ ಎಬಿವಿಪಿಯನ್ನು, ಆರ್‌ಎಸ್‌ಎಸ್ ಅನ್ನು ವಿರೋಧ ಮಾಡಿಕೊಂಡು ಬರುತ್ತಿದ್ದೇವೆ.
ಆರ್‌ಎಸ್‌ಎಸ್ ಮೇಲ್ಜಾತಿಯವರ ಅಸೋಸಿಯೇಷನ್. ಅವರು ಚಾತುರ್ವರ್ಣ್ಯ ವ್ಯವಸ್ಥೆಯಲ್ಲಿ, ಶ್ರೇಣೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಈ ವ್ಯವಸ್ಥೆಯಲ್ಲಿ ಮೇಲ್ವರ್ಗದವರಿಗೆ ಪರಮಾಧಿಕಾರ ಇರಬೇಕು. ಈ ವ್ಯವಸ್ಥೆಯಲ್ಲಿ ಅಸಮಾನತೆ ಮುಂದುವರಿಯುತ್ತದೆ. ಅಸಮಾನತೆ ಮುಂದುವರಿದರೆ ಶೋಷಣೆ ಆಗುತ್ತದೆ, ಗುಲಾಮಗಿರಿ ಮುಂದುವರಿಯುತ್ತದೆ. ಇದರಲ್ಲಿ ಆರ್‌ಎಸ್‌ಎಸ್, ಎಬಿವಿಬಿ ನಂಬಿಕೆ ಇಟ್ಟುಕೊಂಡಿವೆ. ಹಿಂದು ಜಾಗರಣ ವೇದಿಕೆ, ಬಜರಂಗದಳ ಎಲ್ಲ ಒಂದೇ ಗಿರಾಕಿಗಳು ಎಂದರು.
ಮಹಿಳೆಯರಿಗೆ ಶಿಕ್ಷಣ ಇರಲಿಲ್ಲ
ಇವತ್ತು ಸಮಾಜದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಅಸಮಾನತೆ ಇರಲು ಜಾತಿ ವ್ಯವಸ್ಥೆಯೇ ಕಾರಣ. ಸಾವಿರಾರು ವರ್ಷಗಳಿಂದ ಬಹುಸಂಖ್ಯಾತರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಮಹಿಳೆಯರು, ಶೂದ್ರರಿಗೆ ಅಕ್ಷರ ಕಲಿಯಲು ಅವಕಾಶ ಇರಲಿಲ್ಲ. ಬಸವಣ್ಣ ಬಂದ ಮೇಲೆ ಅಕ್ಷರ ಕಲಿಯಲು ಅವಕಾಶ ನೀಡಿದ್ದು.
ಇಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ಆರ್‌ಎಸ್‌ಎಸ್ ನಂಬಿಕೆ ಇಟ್ಟುಕೊಂಡಿದೆ. ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಯನ್ನು ವಿರೋಧ ಮಾಡುವವರಿಗೆ ಹೇಗೆ ದೇಶಭಕ್ತಿ ಬರಲು ಸಾಧ್ಯವಾಗುತ್ತದೆ? ರಾಷ್ಟ್ರಧ್ವಜ ನಮ್ಮ ಹೆಮ್ಮೆಯ ಚಿಹ್ನೆ. ಅದಕ್ಕೊಂದು ಪಾವಿತ್ರ್ಯತೆ ಇದೆ. ಸಾವರ್ಕರ್, ಗೋಳ್ವಲ್ಕರ್, ಆರ್ಗನೈಸರ್ ಇದೆಲ್ಲವನ್ನೂ ವಿರೋಧ ಮಾಡಿದೆ. ಈಗ ಹರ್ ಘರ್ ತಿರಂಗಾ ಎಂದು ನಾಟಕ ಆಡಲು ಶುರು ಮಾಡಿದ್ದಾರೆ. ಇವರ ಬಂಡವಾಳವನ್ನು ನಾವೆಲ್ಲರೂ ಹೊರತೆಗೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಬಿಜೆಪಿಯವರು ಆರ್‌ಎಸ್‌ಎಸ್ ಮುಖ್ಯಸ್ಥರಾಗಿ ಮಹಿಳೆಯನ್ನು ಆಯ್ಕೆ ಮಾಡಲಿ ಎಂದ ಸಿದ್ದರಾಮಯ್ಯ