ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಸಾಮಾನ್ಯವಾಗಿ ಯಾವುದೇ ರಾಜಕೀಯ ನಾಯಕರನ್ನು ಖುದ್ದಾಗಿ ತೆರಳಿ ಭೇಟಿ ಮಾಡದ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಆರ್.ಟಿ. ನಗರದ ಸಿಎಂ ಬೊಮ್ಮಾಯಿ ಅವರ ಮನೆಗೆ ತೆರಳಿ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ತುಮಕೂರಿಗೆ ತೆರಳುವ ಮುನ್ನ ಬುಧವಾರ ಬೆಳಗ್ಗೆ ಹೊಸಬಾಳೆ ಅವರು ಭೇಟಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಎರಡು ದಿನದ ಹಿಂದಷ್ಟೇ ರಾಷ್ಟ್ರೋತ್ಥಾನ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಜತೆಗೆ ಉಪಸ್ಥಿತರಿದ್ದ ಹೊಸಬಾಳೆ ಅವರು ದಿಢೀರನೆ ತಾವೇ ಆಗಮಿಸಿ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಹೀಗೆ ಭೇಟಿ ಮಾಡಿರುವುದು ನಿಜಕ್ಕೂ ಆಶ್ಚರ್ಯಕರ ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅಂತಿಮ ಕ್ಷಣದಲ್ಲಿ ತುಮಕೂರು ಪ್ರವಾಸವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ರದ್ದುಪಡಿಸಿ ಮನೆಯಲ್ಲೇ ಉಳಿದಿದ್ದಾರೆ. ಇಲ್ಲಿವರೆಗೆ ನಡೆದ ಎಲ್ಲ ಜನಸಂಕಲ್ಪ ಯಾತ್ರೆಯಲ್ಲೂ ಸಿಎಂ ಹಾಗೂ ಬಿಎಸ್‌ವೈ ಒಟ್ಟಿಗೆ ಭಾಗವಹಿಸಿದ್ದರು.
ಇದನ್ನೂ ಓದಿ | ದೆಹಲಿಯತ್ತ ಹೊರಟ ಬಸವರಾಜ ಬೊಮ್ಮಾಯಿ: ಸಂಭಾವ್ಯ ಹೊಸ ಸಚಿವರ ಪಟ್ಟಿ ಸಿದ್ಧ; ಹಾಲಿ ಸಚಿವರಲ್ಲಿ ಆತಂಕ