ವಿಧಾನ ಪರಿಷತ್: ರಾಜ್ಯಪಾಲರ ಭಾಷಣದ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ಸದಸ್ಯ ಭೋಜೆಗೌಡ, ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದು ಹಾಗೂ ಆರ್‌ಎಸ್‌ಎಸ್ ಕುರಿತು ಗಮನ ಸೆಳೆದರು. ತನ್ನ ಸ್ವಯಂಸೇವಕರಿಗೆ ಆರ್‌ಎಸ್‌ಎಸ್ ಶಿಸ್ತು ಕಲಿಸಿದೆಯೇ ವಿನಃ ಹಣ ಮಾಡಲು ಹೇಳಿಲ್ಲ ಎಂದರು.
ಯಡಿಯೂರಪ್ಪ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಯಿತು ಎಂದು ಜೆಡಿಎಸ್‌ನ ಟಿ.ಎ. ಶರವಣ ಮಾತನಾಡಿದರು. ಈ ಮಾತಿಗೆ ಭೋಜೇಗೌಡ ದನಿಗೂಡಿಸಿದರು. ಅಂದಿನ ಆರ್‌ಎಸ್‌ಎಸ್ ಇಂದು ಉಳಿದಿಲ್ಲ. 1925ರ ಹೆಡೆಗೆವಾರ್, ಗುರೂಜಿ ಸ್ಥಾಪಿಸಿದ್ದ ಸಂಘ ಪರಿವಾರ ಇಂದು ಇಲ್ಲ. ರೋಲ್ಸ್ ರಾಯ್ಸ್ ಕಾರು, ಕೋಟ್ಯಂತರ ರೂಪಾಯಿ ಕಾರ್‌ನಲ್ಲಿ ಓಡಾಡುವರು ಇಂದು ಆರ್‌ಎಸ್‌ಎಸ್ ನಡೆಸುತ್ತಿದ್ದಾರೆ. ಆರ್‌ಎಸ್‌ಎಸ್ ಶಿಸ್ತು ಕಲಿಸುತ್ತದೆ. ಆದ್ರೆ ಕೋಟಿ ಕೋಟಿ ಮಾಡಿ ಅಂತ ಹೇಳಿಕೊಟ್ಟಿಲ್ಲ ಎಂದರು.
ಅಂತಹ ಎಸ್‌ಎಸ್‌ನಿಂದ ಬಂದ ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿದ್ರು. ಊಟ ಮಾಡದೇ ಯಡಿಯೂರಪ್ಪ ರಾಜಿನಾಮೆ ನೀಡಿದ್ರು. ಯಡಿಯೂರಪ್ಪರನ್ನು ಜೈಲಿಗೆ ಕಳ್ಸಿದ್ದು ಯಾರು ಅಂತ ಯೋಚಿಸಬೇಕಿದೆ. Without yadiyurappa, BJP is big zero. ಯಡಿಯೂರಪ್ಪ ಇಲ್ಲದೇ ರಾಜ್ಯದಲ್ಲಿ ಪಕ್ಷ ಕಟ್ಟೋಕೆ ಆಗಲ್ಲ. ಯಡಿಯೂರಪ್ಪರನ್ನು ಪಕ್ಷದಿಂದ ಕೆಳಗಿಳಿಸಿದ್ರು. ಇಂದು ಯಡಿಯೂರಪ್ಪ ಬಾಲ ಹಿಡಿದು ಹೋಗ್ತಿದ್ದೀರ. ಯಡಿಯೂರಪ್ಪನವರಿಗೆ ಇಡಿ, ಐಟಿ ಬಾಲ ಕಟ್ಟಿದ್ದೀರ ಎಂದರು.
ಈ ನಡುವೆ ಮಧ್ಯಪ್ರವೇಶಿಸಿದ ಬಿಜೆಪಿಯ ಡಿ.ಎಸ್. ಅರುಣ್, ಭೋಜೇಗೌಡರು ಬಿಜೆಪಿಗೆ ಸೇರುವುದು ಉತ್ತಮ ಎನ್ನಿಸುತ್ತದೆ. ಯಡಿಯೂರಪ್ಪನವರನವರ ಬಗ್ಗೆ ಅಷ್ಟೊಂದು ಒಳ್ಳೆಯ ಮಾತನಾಡಿದ್ದೀರ. ಬಿಜೆಪಿಗೆ ಬನ್ನಿ ಎಂದು ಕರೆದರು.
ಬಿಜೆಪಿಯ ಭಾರತಿ ಶೆಟ್ಟಿ ಮಾತನಾಡಿ, ಕುಮಾರಸ್ವಾಮಿ ಹಾಗೂ ಜೆಡಿಎಸ್‌ದು ಏನಿದ್ರೂ 25 ಶಾಸಕ ಸ್ಥಾನಕ್ಕೆ ಸೀಮಿತ. 25 ಕ್ಕಿಂತ ಹೆಚ್ಚು ಸೀಟು ಗೆಲ್ಲಲ್ಲ. ಇನ್ನೂ ಸರ್ಕಾರ ಅಂದ್ರೆ ಕುಮಾರಸ್ವಾಮಿ ಅಂತ ಹೇಗೆ ಹೇಳ್ತೀರಿ? ಜೆಡಿಎಸ್‌ನಲ್ಲಿ ಗೆಜ್ಜೆಯೂ ಇಲ್ಲ, ನೃತ್ಯವೂ ಇಲ ಎಂದು ಲೇವಡಿ ಮಾಡಿದರು.
ಬಿಜೆಪಿಯ ಆಯನೂರು ಮಂಜುನಾಥ್ ಸಹ ಮಾಥನಾಡಿ, ಜೆಡಿಎಸ್‌ನವರು ದೇವ್ರು ಹತ್ರ ಬೇಡಿಕೊಳ್ಳೋಕೆ ಹೋದ್ರೆ ಕಾಂಗ್ರೆಸ್‌ಗೆ ಬಿಜೆಪಿಗೆ 100 ಸೀಟು ಬರದೆ ಇರಲಿ ಸಾಕು ಅಂತ ಕೇಳಿಕೊಳ್ತಾರೆ. ಮುಂದೆ ನಿಮ್ಮ ಪಕ್ಷ ಅಧಿಕಾರಕ್ಕೆ ಬರಲ್ಲ. ನಿಮಗೆ ಪಕ್ಷದಲ್ಲಿ ಅವಕಾಶ ಸಿಗಲ್ಲ, ಮತ್ತೊಮ್ಮೆ ಗೆಲ್ಲೋಕೆ ಆಗಲ್ಲ. ಬಿಜೆಪಿಗೆ ಬಂದುಬಿಡಿ ಎಂದು ಆಹ್ವಾನಿಸಿದರು.