ಬೆಂಗಳೂರು: ನೇತಾಜಿ ಸುಭಾಷ್ ಚಂದ್ರ ಬೋಸ್ (Subhas Chandra Bose) ಹಾಗೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ, ನೇತಾಜಿಯವರನ್ನು ಹೈಜಾಕ್ ಮಾಡಲು ಆ ಸಂಘಟನೆ ಯತ್ನಿಸುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮಾಡಿದ್ದಾರೆ. ʼಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ. ಬೋಸ್‌ರವರ ಜಯಂತಿಯನ್ನು RSS ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ. ನೇತಾಜಿಗೂ, RSSಗೂ ಏನು ಸಂಬಂಧ? ನೇತಾಜಿ RSS ಚಿಂತನೆಗೆ ವಿರುದ್ಧವಾಗಿದ್ದವರು. ಅವರೆಂದೂ RSS ಸಿದ್ದಾಂತ ಒಪ್ಪಿರಲಿಲ್ಲ. RSSನ ಸಂಘ-ಶಾಖೆಗಳಲ್ಲಿ ಗುರುತಿಸಿಕೊಂಡಿರಲಿಲ್ಲ. RSSಗೆ ಈಗ ನೇತಾಜಿ ಮೇಲೆ ಪ್ರೇಮ ಉಕ್ಕಲು ಕಾರಣವೇನು?” ಎಂದಿದ್ದಾರೆ.
“RSS ಸಿದ್ದಾಂತವಾದ ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ’ ನಿಲುವನ್ನು ನೇತಾಜಿಯವರು ಎಂದಿಗೂ ಬೆಂಬಲಿಸಿರಲಿಲ್ಲ.” ಎಂದಿರುವ ಗುಂಡೂರಾವ್, “ನೇತಾಜಿಯವರದ್ದು ಎಲ್ಲರನ್ನೂ ಒಳಗೊಳ್ಳುವ ಚಿಂತನೆ. ನೇತಾಜಿ ಎಲ್ಲಾ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಿಲುವಿನವರು. ತನ್ನ ಸಿದ್ದಾಂತಕ್ಕೆ ಭಿನ್ನ ನಿಲುವು ಹೊಂದಿದ್ದ ನೇತಾಜಿಯವರನ್ನು RSS ಈಗ ಹೈಜಾಕ್ ಮಾಡುತ್ತಿರುವುದ್ಯಾಕೆ?” ಎಂದು ಪ್ರಶ್ನಿಸಿದ್ದಾರೆ.
ಭಗತ್ ಸಿಂಗರನ್ನೂ ಹೈಜಾಕ್ ಮಾಡಲು ಆರ್‌ಎಸ್‌ಎಸ್ ಯತ್ನಿಸಿತ್ತು ಎಂದು ಗುಂಡೂರಾವ್ ಆರೋಪಿಸಿದ್ದಾರೆ. “ಸ್ವಾತಂತ್ರ್ಯ ಹೋರಾಟದಲ್ಲಿ ನಯಾಪೈಸೆ ಕೊಡುಗೆ ನೀಡದ RSS, ಕೆಲ ಸ್ವಾತಂತ್ರ್ಯ ವೀರರನ್ನು ತಮ್ಮವರೆಂದು ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದೆ. ಈ ಹಿಂದೆ ಭಗತ್ ಸಿಂಗ್‌ರನ್ನು ಹೈಜಾಕ್ ಮಾಡಲು RSS ಯತ್ನಿಸಿತ್ತು. ಆದರೆ ಭಗತ್ ಸಿಂಗ್,RSS ಸಿದ್ದಾಂತದ ವಿರುದ್ಧವಾಗಿದ್ದರು ಎಂಬ ಸತ್ಯ ಗೊತ್ತಾದ ಬಳಿಕ ಭಗತ್ ಸಿಂಗ್ ತೆರೆಗೆ ಸರಿದರು. ಈಗ ನೇತಾಜಿ ಸರದಿ”
ಇದನ್ನೂ ಓದಿ | Netaji Statue | ನೇತಾಜಿ ಪ್ರತಿಮೆ ಕೆತ್ತಿದ್ದು ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ತಂಡ
“RSS, ನೇತಾಜಿಯವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ನಿರ್ಧಾರಕ್ಕೆ ಬೋಸ್ ಪುತ್ರಿ ಅನಿತಾ ಬೋಸ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ನೇತಾಜಿ ಜನ್ಮದಿನವನ್ನು RSS ಆಚರಿಸುವ ಮೂಲಕ ನೇತಾಜಿಯವರನ್ನು ಹಿಂದುತ್ವವಾದಿ ಎಂದು ಬಿಂಬಿಸುವ ಹುನ್ನಾರ ಹಾಕಿಕೊಂಡಿದೆ. ನೇತಾಜಿ ನಮ್ಮಂತೆಯೇ ಹಿಂದೂ ಆಗಿದ್ದರೆ ಹೊರತು ಯಾವತ್ತೂ ಹಿಂದುತ್ವವಾದಿಯಾಗಿರಲಿಲ್ಲ” ಎಂದು ಹೇಳಿದ್ದಾರೆ.