ಬೆಂಗಳೂರು: ಸಚಿವ ಸ್ಥಾನವೇ ಬೇಕೆಂದು ಪಟ್ಟು ಹಿಡಿದು ಸಿಎಂ ಸಿದ್ದರಾಮಯ್ಯ ಸಂಪುಟ ಸಹೋದ್ಯೋಗಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರು ವಿಧಾನಸಭೆಯ (Assembly Session) ಉಪಸಭಾಧ್ಯಕ್ಷರಾಗಿ (ಡೆಪ್ಯುಟಿ ಸ್ಪೀಕರ್) ಆಗು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‌ನಿಂದ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿತ್ತು. ಸಂಖ್ಯೆ ಕಡಿಮೆ ಇದ್ದದ್ದರಿಂದ ಹಾಗೂ ಬಿಜೆಪಿಯಲ್ಲಿ ಇನ್ನೂ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಗೊಂದಲದಲ್ಲೇ ಇರುವುದರಿಂದ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಸರ್ಕಾರದ ಮುಖ್ಯಸಚೇತಕ ಅಶೋಕ್ ಪಟ್ಟಣ್ ಅವರು ರುದ್ರಪ್ಪ ಲಮಾಣಿ ಅವರ ಹೆಸರನ್ನು ಪ್ರಸ್ತಾವನೆ ಮಾಡಿದರು. ಇದನ್ನು ಸ್ಪೀಕರ್ ಧ್ವನಿಮತಕ್ಕೆ ಹಾಕುವ ಮೂಲಕ ಸರ್ವಾನುಮತದಿಂದ ಅಂಗೀಕಾರ ಮಾಡಲಾಯಿತು.
ಲಂಬಾಣಿ ಸಮುದಾಯದಿಂದ ಕಾಂಗ್ರೆಸ್‌ನಲ್ಲಿ ಜಯಗಳಿಸಿರುವ ಏಕೈಕ ಶಾಸಕನಾದ್ಧರಿಂದ ಸಚಿವ ಸ್ಥಾನ ನೀಡಲೇಬೇಕು ಎಂದು ಲಮಾಣಿ ಪಟ್ಟುಹಿಡಿದಿದ್ದರು. ಲಂಬಾಣಿ(ಬಂಜಾರ) ಸಮುದಾಯ ಬಿಜೆಪಿ ಜತೆಗೆ ಇತ್ತು. ಚುನಾವಣೆ ಹತ್ತಿರದಲ್ಲಿರುವಾಗ ಎಸ್‌ಸಿ ಒಳಮೀಸಲಾತಿಯನ್ನು ಜಾರಿ ಮಾಡಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಒಳ ಮೀಸಲಾತಿ ಜಾರಿಯಿಂದ ತಮಗೆ ಅನ್ಯಾಯವಾಗುತ್ತದೆ ಎಂದು ರಾಜ್ಯಾದ್ಯಂತ ಬಂಜಾರ ಸಮುದಾಯ ಪ್ರತಿಭಟನೆ ನಡೆಸಿತ್ತು. ಬಿಜೆಪಿ ಹಠಾವೊ ತಾಂಡಾ ಬಚಾವೊ ಎಂಬ ಘೋಷಣೆಗಳ ಮೂಲಕ ಕಾಂಗ್ರೆಸ್ ಎಲ್ಲ ಕಡೆ ಅಭಿಯಾನಕ್ಕೆ ಬೆಂಬಲ ನೀಡಿತ್ತು. ಇದರಿಂದಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸಿದ್ದು, ಸಚಿವ ಸ್ಥಾನ ನೀಡಲೇಬೇಕು ಎಂದಿದ್ದರು. ಜತೆಗೆ ಹಾವೇರಿ ಜಿಲ್ಲೆಯಿಂದ ಯಾರಿಗೂ ಸಚಿವ ಸ್ಥಾನ ನೀಡಲಾಗಿಲ್ಲ ಎಂದು ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ್, ಪ್ರಕಾಶ್ ಕೋಳಿವಾಡ, ಯುಬಿ ಬಣಕಾರ್, ಶ್ರೀನಿವಾಸ ಮಾನೆ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದ್ದರು.
ಇದನ್ನೂ ಓದಿ: SC ST Reservation: ಎಸ್‌ಸಿ ಪಟ್ಟಿಯಿಂದ ಬಂಜಾರ, ಭೋವಿ, ಕೊರಮ, ಕೊರಚ ಸಮಾಜವನ್ನು ಕೈಬಿಡಲ್ಲ: ಯಡಿಯೂರಪ್ಪ
ನಂತರ ಲಮಾಣಿ ಅವರನ್ನು ಕರೆದು ಮಾತನಾಡಿದ ಸಿದ್ದರಾಮಯ್ಯ, ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಮನವೊಲಿಸಿದರು. ಬುಧವಾರ ನಾಮಪತ್ರ ಸಲ್ಲಿಸಿದ್ದ ಲಮಾಣಿ ಇದೀಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲಮಾಣಿ ಅವರನ್ನು ವಿಧಾನಸಭೆ ಸದಸ್ಯರು ಅಭಿನಂದಿಸಿದರು.