Site icon Vistara News

S. Jaishankar: ಉಚಿತ ಕೊಡುಗೆಗಳು ಬೇಜವಾಬ್ದಾರಿ ಪ್ರಚಾರ ತಂತ್ರ: ಆಮ್‌ ಆದ್ಮಿ, ಕಾಂಗ್ರೆಸ್‌ ವಿರುದ್ಧ ಎಸ್‌. ಜೈಶಂಕರ್‌ ವಾಗ್ದಾಳಿ

s jaishankar says freebies are irresponsible way to get quick popularity

#image_title

ಬೆಂಗಳೂರು: ಉಚಿತ ಕೊಡುಗೆಗಣನ್ನು ನೀಡುವುದು ಜವಾಬ್ದಾರಿಯಿಲ್ಲದ ಹಾಗೂ ಬೇಗನೆ ಪ್ರಚಾರ ಪಡೆಯುವ ತಂತ್ರವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಯುವ ಮತದಾರರು, ವಾಯು ವಿಹಾರಿಗಳೊಂದಿಗೆ ಆಯೋಜನೆಗೊಂಡಿದ್ದ, Meet and Greet ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ಈಗಾಗಲೆ ಕರ್ನಾಟಕದಲ್ಲಿ ಕಾಂಗ್ರೆಸ್‌ ವತಿಯಿಂದ ಮೂರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್‌, ಪ್ರತಿಯೊಬ್ಬರಿಗೆ 10 ಕೆ.ಜಿ. ಉಚಿತ ಅಕ್ಕಿ ಹಾಗೂ ಯುವಕರಿಗೆ ಮಾಸಿಕ 2 ಸಾವಿರ ರೂ, 1,500 ರೂ. ನೀಡುವುದಾಗಿ ಘೋಷಣೆ ಮಾಡಿದೆ.

ಇತ್ತೀಚೆಗೆ ಉಚಿತ ಕೊಡುಗೆಗಳು ಹೆಚ್ಚಾಗುತ್ತಿವೆಯಲ್ಲ ಎಂಬ ಪ್ರಶನೆಯೊಂದಕ್ಕೆ ಉತ್ತರಿಸಿದ ಜೈಶಂಕರ್‌, ಇತ್ತೀಚೆಗೆ ಉಚಿತ ಕೊಡುಗೆಗಳನ್ನು ನೀಡುವ ಪರಿಪಾಠ ದೆಹಲಿಯಿಂದ ಶುರುವಾಗಿ ದೇಶದ ಇತರ ಭಾಗಗಳಿಗೂ ಹಬ್ಬುತ್ತಿರುವ ಕ್ರಮ ಆತಂಕಕಾರಿ. ಅಂತಹ ಸರ್ಕಾರಗಳಿಗೆ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸಮಸ್ಯೆ ಆಗಿರುವುದರಿಂದ ಹಾಗೂ ತಾತ್ಕಾಲಿಕ ರಾಜಕೀಯ ಲಾಭದ ಸಲುವಾಗಿ ಮಾಡುವ ಇಂತಹ ಯೋಜನೆಗಳಿಗೆ ಯಾರೋ ಒಬ್ಬರು ಬೆಲೆ ತೆರಲೆಬೇಕು. ಒಂದೆಡೆ ಉಚಿತ ನೀಡುವಾಗ, ಇನ್ನೆಲ್ಲೋ ಒಂದೆಡೆಯಿಂದ ಕ್ರೋಢೀಕರಣ ಮಾಡಲೇಬೇಕು. ಜವಾಬ್ದಾರಿ ರಹಿತ ಇಂತಹ ಉಚಿತ ಕೊಡುಗೆಗಳ ಕಾರ್ಯಕ್ರಮಗಳಿಂದ ದೇಶದ ಬೊಕ್ಕಸಕ್ಕೆ ಉಂಟಾಗುವ ಹಾನಿ ಅಪಾರ ಎಂದು ತಿಳಿಸಿದರು.

ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಅನರ್ಹಗೊಂಡ ಪ್ರಕ್ರಿಯೆಗೆ ಅಮೆರಿಕ ಹಾಗೂ ಜರ್ಮನಿ ದೇಶಗಳು ನೀಡಿರುವ ಪ್ರತಿಕ್ರಿಯೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್‌, ಪಾಶ್ಚಿಮಾತ್ಯ ರಾಷ್ಟ್ರಗಳು ಹಿಂದಿನಿಂದಲೂ ಬೇರೆ ದೇಶಗಳ ಸಾರ್ವಭೌಮತ್ವ, ಸಾಂವಿಧಾನಿಕ ಅಧಿಕಾರಗಳ ಕುರಿತಾದ ಆಂತರಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯವೇ ಶ್ರೇಷ್ಠ ಎಂಬ ಮನಸ್ಥಿತಿಯಿಂದ ಹೊರಬಂದಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಬೇರೆ ರಾಷ್ಟ್ರಗಳೂ ಕೂಡ ಪಶ್ಚಿಮದ ದೇಶಗಳ ಕುರಿತಾಗಿ ಸಮನಾದ ದೃಷ್ಟಿಕೋನದಿಂದ ಪ್ರತಿಕ್ರಿಯೆ ನೀಡಲು ಆರಂಭಿಸಿರುವುದು ಸಾಮಾನ್ಯ. ಹಿಂದೆಂದಿಗಿಂತಲೂ ಪ್ರಸ್ತುತ ಸಂದರ್ಭದಲ್ಲಿ ಇಂತಹ ಮನಸ್ಥಿತಿಯನ್ನು ವಿಶ್ವದಾದ್ಯಂತ ನಾವು ಕಾಣಬಹುದು.

ಇನ್ನೊಂದು ಆಯಾಮದ ಮೂಲಕ ಗಮನಿಸಿದರೆ, ನಮ್ಮಲ್ಲಿಯೇ ಇರುವ ಕೆಲವರು ಪಶ್ಚಿಮದ ರಾಷ್ಟ್ರಗಳಿಗೆ ತೆರಳಿ ಭಾರತದ ಕುರಿತಾಗಿ ಅವಮಾನಕರ ಅಭಿಪ್ರಾಯಗಳನ್ನು ವಿವರಿಸಿ, ಆಹ್ವಾನ ನೀಡಿರುವುದರ ಪರಿಣಾಮದಿಂದ ಮಾತ್ರ ಇಂತಹ ಹೇಳಿಕೆಗಳು ಹೊರಬರಲು ಸಾಧ್ಯ. ಈ ರೀತಿಯ ಮನಸ್ಥಿತಿಯ ದೇಶದ ಒಳಗಿನ ಹಾಗೂ ಹೊರಗಿನ ಇಬ್ಬರಲ್ಲೂ ಇರುವ ಮೂಲ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ನಡೆಯಲೇಬೇಕಿದೆ ಎಂದು ವಿವರಿಸಿದರು.

ಪ್ರಸ್ತುತ G20 ಆತಿಥೇಯ ರಾಷ್ಟ್ರವಾಗಿರುವ ಭಾರತವು, ಇದುವರೆಗೆ G20 ಸದಸ್ಯ ರಾಷ್ಟ್ರವಲ್ಲದ ದೇಶಗಳನ್ನು ಸಂಪರ್ಕಿಸಿ, ಅವುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಮುಂಚೆ ಇಂತಹ ಅತೀ ದೊಡ್ಡ ಸಮಾವೇಶಗಳನ್ನು ಆಯ್ದ ಕೇವಲ 2-3 ನಗರಗಳಲ್ಲಿ ಮಾತ್ರ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಬಾರಿ ದೇಶದ 60 ಇತರ ನಗರಗಳಲ್ಲಿ ಸಮಾವೇಶ ಆಯೋಜಿಸಿ ಇತರ ರಾಜ್ಯಗಳಿಗೂ ಅವಕಾಶ ಕಲ್ಪಿಸಿರುವುದು ಗಮನಾರ್ಹ ಎಂದು ತಿಳಿಸಿದರು.

ಭಾರತದ ಅಭಿವೃದ್ಧಿಗೆ ಪ್ರತೀ ರಾಜ್ಯ, ನಗರ ಗಳು ಕೂಡ ಗಣನೀಯ ಕೊಡುಗೆ ನೀಡುತ್ತಿದ್ದು, ಜಾಗತಿಕ ವಿದ್ಯಮಾನ ಗಳನ್ನು ಇತರ ನಗರಗಳಿಗೂ ಪ್ರಚುರಪಡಿಸುವ ಉದ್ದೇಶದಿಂದ ಈ ರೀತಿ ಎಲ್ಲೆಡೆ G 20 ಸಮಾವೇಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

G 20 ಸಮಾವೇಶಕ್ಕೆ ಆಗಮಿಸುವ ಜಗತ್ತಿನ ಖ್ಯಾತ 200ಕ್ಕಿಂತಲೂ ಅಧಿಕ ಅಗ್ರಗಣ್ಯ ವ್ಯಕ್ತಿಗಳಿಗೆ ಈ ದೇಶದ ವೈವಿಧ್ಯಮಯ ಸಂಸ್ಕೃತಿ, ಆಚಾರ, ವಿಚಾರ, ಅಡುಗೆ, ತಿನಿಸುಗಳನ್ನು ಕುರಿತಾಗಿ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶ. G20 ಆಯೋಜನೆಯ ಹಿಂದಿನ ಉದ್ದೇಶ, ಭಾರತ ವಿಶ್ವಕ್ಕೆ ತೆರೆದುಕೊಳ್ಳುವುದು ಹಾಗೂ ವಿಶ್ವವು ಭಾರತವನ್ನು ಅರ್ಥೈಸಿಕೊಳ್ಳುವುದೇ ಆಗಿದೆ ಎಂದರು.

ಇದನ್ನೂ ಓದಿ: Raisina Dialogue 2023: ಆರ್‌ಆರ್‌ಆರ್ ಸಿನಿಮಾ ಉಲ್ಲೇಖಿಸಿ ಬ್ರಿಟನ್ನರಿಗೆ ತಿವಿದ ವಿದೇಶಾಂಗ ಸಚಿವ ಜೈಶಂಕರ್

Exit mobile version