ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಮ್ಯೂಸಿಯಂ ಮಾಡುತ್ತೇವೆ ಎಂದು ಸರ್ಕಾರ ಘೋಷಿಸಿ ಅದರಂತೆ ನಡೆಯದ ಕಾರಣ ಇದೀಗ ನಿಜಲಿಂಗಪ್ಪ ಅವರ ಕುಟುಂಬ ಅತಂತ್ರ ಸ್ಥಿತಿಗೆ ಸಿಲುಕಿದೆ.
ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ವಿ.ಪಿ. ಬಡವಾಣೆಯಲ್ಲಿರುವ ನಿವಾಸವನ್ನು ವಸ್ತು ಸಂಗ್ರಾಹಾಲಯ ಮಾಡಬೇಕೆಂದು ಚಿತ್ರದುರ್ಗದ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದರು. ನಿವಾಸವನ್ನು ಸಂಗ್ರಹಾಲಯವನ್ನಾಗಿ ಅಭಿವೃದ್ದಿಪಡಿಸಲಾಗುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದರು. ಅದಕ್ಕಾಗಿ, ವಾರಸುದಾರರಿಂದ ಮನೆ ಖರೀದಿಸಲು ಮತ್ತು ಅಭಿವೃದ್ಧಿಪಡಿಸಲು 5 ಕೋಟಿ ರೂ. ಅನುದಾನವನ್ನು 2020-21ರ ಬಜೆಟ್‌ನಲ್ಲಿ ಘೋಷಿಸಿತ್ತು.
ನಿಜಲಿಂಗಪ್ಪ ಅವರೇ ಖುದ್ದಾಗಿ ಮಗನ ಹೆಸರಲ್ಲಿ ಬರೆದಿಟ್ಟ ವಿಲ್‌ನಲ್ಲಿ, ಕಿರಣ್‌ಕುಮಾರ್ ಅವರ ಪುತ್ರ ವಿನಯ್‌ಗೂ ಮನೆ ಸೇರಬೇಕೆಂದು ಉಲ್ಲೇಖಿಸಲಾಗಿದೆ. ಈಗಾಗಲೆ ವಿಲ್ ಅನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಮುಂದುವರಿಯದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಪುತ್ರ ಕಿರಣ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಕಿರಣ್ ಕುಮಾರ್, ಪುತ್ರನ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡುತ್ತೇನೆ. ಪುತ್ರನಿಂದ ಸರ್ಕಾರ ಖರೀದಿ ಮಾಡಬಹುದು ಎಂಬ ಕಾರಣಕ್ಕೆ ಪುತ್ರನನ್ನು ಅಮೆರಿಕದಿಂದ ಕರೆಸಿಕೊಂಡು 20 ದಿನಗಳು ಕಳೆದಿವೆ. ಆದರೆ ಇದಕ್ಕೆ ಜಿಲ್ಲಾಧಿಕಾರಿ ಸ್ಪಂದನೆ ನೀಡುತ್ತಿಲ್ಲ ಎಂದಿದ್ದಾರೆ.
ಇದಕ್ಕಾಗಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಅವರೊಂದಿಗೆ ಸರ್ಕಾರದ ಮುಖ್ಯಕಾರ್ಯದರ್ಶಿಯವರನ್ನೂ ಭೇಟಿಯಾಗಲಾಗಿದೆ. ಜತೆಗೆ ಮುಖ್ಯ ಕಾರ್ಯದರ್ಶೀಯವರ ಸೂಚನೆ ಮೇರೆಗೆ, ಮುಂದಿನ ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೂ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಯಾವುದೇ ಹೆಜ್ಜೆ ಇಡುತ್ತಿಲ್ಲ.
ಮಾರುಕಟ್ಟೆ ದರ ಹೆಚ್ಚೇ ಇದ್ದರೂ ಅದನ್ನು ಖಾಸಗಿಯವರಿಗೆ ಮಾರಾಟ ಮಾಡಲು ನಮಗೆ ಮನಸ್ಸಿಲ್ಲ. ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳಿ ಅಥವಾ ಮಾರುಕಟ್ಟೆಯಲ್ಲಿ ಆಸ್ತಿಯನ್ನು ಮಾರಾಟ ಮಾಡಲು ಅನುಮತಿ ನೀಡಿ ಎಂದು ಕಿರಣ್ ಕುಮಾರ್ ಮನವಿ ಮಾಡಿದ್ದಾರೆ.