Site icon Vistara News

ಚಿಕ್ಕಮಗಳೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿ: ಸಿದ್ದರಾಮಯ್ಯಗೆ ಕಿಸಾನ್‌ ಕಾಂಗ್ರೆಸ್‌ ಆಹ್ವಾನ

sachin siddu

ಚಿಕ್ಕಮಗಳೂರು: ಸಿದ್ದರಾಮೋತ್ಸವದ ಬಳಿಕ ತಮ್ಮ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಭಾರಿ ಬೇಡಿಕೆ ಬಂದಿದೆ. ಈಗಾಗಲೇ ಸುಮಾರು ೨೦ ಕ್ಷೇತ್ರಗಳ ಕಾರ್ಯಕರ್ತರು, ನಾಯಕರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವುದು ಚಿಕ್ಕಮಗಳೂರು ಜಿಲ್ಲೆ.

75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಶುಭಾಶಯ ಕೋರಿರುವ ಕರ್ನಾಟಕ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಅವರು ಮುಂದಿನ ವಿಧಾನ ಸಭಾ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ.

ಚಿಕ್ಕಮಗಳೂರಿನ ಹಾಲಿ ಶಾಸಕ ಸಿ.ಟಿ ರವಿ ವರ್ತನೆಯಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ನಿಮ್ಮಂಥ ಜನ ನಾಯಕರು ದಿವಂಗತ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪುನರ್ ಜನ್ಮ ನೀಡುವಂತೆ ಮನವಿದ್ದಾರೆ ಸಚಿನ್ ಮೀಗಾ.

ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಈಗ ಮೂರರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಜೆಡಿಎಸ್‌ ಗೆದ್ದಿದೆ. ʻʻಸಿದ್ದರಾಮಯ್ಯ ಅವರು ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲಿಸುತ್ತೇವೆʼʼ ಎಂದು ಸಚಿನ್‌ ಮೀಗಾ ಹೇಳಿದ್ದಾರೆ.

ಪ್ರಸಕ್ತ ಬಾದಾಮಿ ಶಾಸಕರಾಗಿರುವ ಸಿದ್ದರಾಮಯ್ಯ ಅವರು ಈ ಬಾರಿ ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಎಲ್ಲ ಕಡೆಯಿಂದ ನಮ್ಮಲ್ಲಿ ಬನ್ನಿ ಎಂಬ ಒತ್ತಾಯ ಜೋರಾಗಿದೆ. ಚಾಮರಾಜಪೇಟೆ, ಕೋಲಾರ, ಬಾಗೇಪಲ್ಲಿ ಸೇರಿದಂತೆ ೨೦ ಕಡೆ ಅವರಿಗೆ ಅಹ್ವಾನ ಇದೆ. ಯಾವುದನ್ನು ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ| ಸಿದ್ದರಾಮೋತ್ಸವ: ಸಿದ್ದು ಪವರ್‌ ಶೋ ಸಕ್ಸಸ್‌, ಜೈ ಎಂದ ಡಿಕೆಶಿ, ಬಿಜೆಪಿಗೂ ಬಿಸಿ

Exit mobile version