ಶಿವಮೊಗ್ಗ: ಸಕ್ರೇಬೈಲ್ ಆನೆ ಬಿಡಾರದಿಂದ ಮಾವುತರಿಬ್ಬರು ಪುಂಡ ಆನೆಯೊಂದನ್ನು ಕಾಡಿಗೆ ಕರೆದೊಯ್ಯುವ ಕೆಲಸವನ್ನು ಶನಿವಾರ ಮಾಡುತ್ತಿದ್ದರು. ಮಾವುತನೊಬ್ಬ ಅಂಕುಶ ಹಿಡಿದು ಆನೆಯ ಮೇಲೆ ಕುಳಿತು ಹೋಗುತ್ತಿದ್ದರೆ, ಹಿಂಬದಿಯಿಂದ ಸ್ಕೂಟರ್‌ನಲ್ಲಿ ಇನ್ನೊಬ್ಬ ಮಾವುತ ಹಿಂಬಾಲಿಸುತ್ತಿದ್ದ. ಇದು ಆ ಆನೆಗೆ ಸಿಟ್ಟು ತರಿಸಿದ್ದು, ಮಾವುತನನ್ನೇ ಅಟ್ಟಾಡಿಸಿಕೊಂಡು ಹೋಗಿರುವ ಪ್ರಸಂಗ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಈ ಪುಂಡಾನೆ ಮಣಿಕಂಠನನ್ನು ಕಾಡಿಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಆನೆಯನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಎಂದಿನಂತೆ ಮಾಮೂಲಿ ಜನ ಸಂಚಾರ ಮಾಡುವ ರಸ್ತೆಯಲ್ಲಿಯೇ ಆನೆಯನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಎದುರಿನಿಂದ, ಪಕ್ಕದಿಂದ ವಾಹನಗಳು ಸಂಚಾರ ಮಾಡುತ್ತಿದ್ದರೂ ಆನೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಂಚಾರ ಮಾಡುತ್ತಿತ್ತು.
ಆದರೆ, ಒಂದು ಹಂತದಲ್ಲಿ ಆನೆಯು ರಸ್ತೆಯ ಇನ್ನೊಂದು ಭಾಗದಲ್ಲಿ ಹೋಗಿ ನಿಂತಿದೆ. ಅಲ್ಲಿಂದ ಮುಂದೆ ಹೋಗಲು ನಿರಾಕರಿಸಿದೆ. ಪುನಃ ಬಂದ ದಾರಿಗೆ ವಾಪಸಾಗಿದೆ. ಬಂದಿದ್ದೇ ಸ್ಕೂಟರ್‌ನಲ್ಲಿದ್ದ ಇನ್ನೊಬ್ಬ ಮಾವುತನತ್ತ ಓಡಿ ಬಂದು ದಾಳಿಗೆ ಯತ್ನಿಸಿದೆ. ಆಗ ಮಾವುತ ರಸ್ತೆ ಮಧ್ಯೆದಲ್ಲಿಯೇ ಗಾಡಿಬಿಟ್ಟು ತಪ್ಪಿಸಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆನೆಯು ಆ ಮಾವುತ ಹೋದ ಕಡೆಗಳಲ್ಲೆಲ್ಲ ಅಟ್ಟಾಡಿಸಿಕೊಂಡು ಹೋಗಿದೆ.
ಇದನ್ನೂ ಓದಿ | Ramanagara News | ತಾಯಿ ಕಳೆದುಕೊಂಡು ನಿತ್ರಾಣಗೊಂಡ ಆನೆಮರಿಗೆ ಗ್ರಾಮಸ್ಥರ ಆಶ್ರಯ
ರಸ್ತೆಯ ಪಕ್ಕದ ಒಂದು ಮೂಲೆಯಲ್ಲಿ ಮಾವುತ ಅಡಗಿಕೊಂಡಿದ್ದು, ಅಲ್ಲೂ ಸಹ ಆನೆ ಬಂದಿದೆ. ಇದರಿಂದ ಆತ ಅಲ್ಲಿಂದಲೂ ಕಾಲ್ಕಿತ್ತಿದ್ದಾನೆ. ಇದೇ ವೇಳೆ ಅದೇ ಸ್ಥಳದಲ್ಲಿ ಕೆಂಪು ಬಣ್ಣದ ಕಾರೊಂದು ಸಹ ನಿಂತಿತ್ತು. ಅದರೊಳಗೆ ಮಹಿಳೆ ಸೇರಿ ಇಬ್ಬರು ವ್ಯಕ್ತಿಗಳಿದ್ದರು. ಆದರೆ, ಆನೆ ಅಲ್ಲಿಯೇ ಇದ್ದಿದ್ದರಿಂದ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದರು. ಆನೆ ಅಲ್ಲಿಂದ ಬೇರೆಡೆಗೆ ಹೋಗುತ್ತಿದ್ದಂತೆ ಇವರೆಲ್ಲರೂ ಕಾರಿನಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಓಡಿಬಂದಿದ್ದಾರೆ. ಈ ಎಲ್ಲ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಣಿಕಂಠನ ಸೆರೆ
ಹೀಗೆ ಏಕಾಏಕಿ ದಾಳಿ ಮೂಡ್‌ನಲ್ಲಿದ್ದ ಮಣಿಕಂಠನನ್ನು ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಇತರ ಆನೆಗಳ ಸಹಕಾರದಿಂದ ಸೆರೆಹಿಡಿದು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಹಂತದಲ್ಲಿ ಮಣಿಕಂಠನನ್ನು ಹಿಡಿಯಲು ಕಷ್ಟವಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅರಿವಳಿಕೆ ನೀಡಲು ತಜ್ಞರು ಸಿದ್ಧರಾಗಿದ್ದರು. ಕೊನೆಗೂ ಮಾವುತರೆಲ್ಲರೂ ಸೇರಿ ಮಣಿಕಂಠನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಾಕೆ ಮಾವುತ ಟಾರ್ಗೆಟ್?
ಮಣಿಕಂಠ ಈ ರೀತಿಯಾಗಿ ಏಕೆ ವರ್ತಿಸಿದ? ಹಿಂಬಾಲಿಸಿಕೊಂಡು ಬಂದ ಮಾವುತನನ್ನು ಏಕೆ ಟಾರ್ಗೆಟ್ ಮಾಡಿ ದಾಳಿ ಮಾಡಿದ ಎಂಬ ಬಗ್ಗೆ ಇನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ | Chamarajanagar News | ತಾಯಿಯಿಂದ ಬೇರ್ಪಟ್ಟು ಪುರಾಣಿಪೋಡಿ ಶಾಲೆಗೆ ಬಂದ ಪುಟಾಣಿ ಆನೆ!