ಗದಗ: ʻʻನಾವು ಕೇಸರಿ ಶಾಲು (Saffron Politics) ಹಾಕೋದನ್ನು ತಡೆಯಲು ಹರಿಹರ ಬ್ರಹ್ಮರಿಗೂ ಸಾಧ್ಯವಿಲ್ಲ. ನಾವು ಕೇಸರಿ ಶಾಲು ಹಾಕಿಕೊಂಡೇ ವಿಧಾನಸೌಧಕ್ಕೆ ಹೋಗುತ್ತೇವೆ. ನಮ್ಮನ್ನೂ ಒದ್ದು ಒಳಗೆ ಹಾಕುತ್ತಾರಾ?ʼʼ ಹೀಗೆಂದು ಸವಾಲು ಹಾಕಿದ್ದಾರೆ. ಮಾಜಿ ಸಚಿವ, ನರಗುಂದ ಕ್ಷೇತ್ರದ ಬಿಜೆಪಿ ಶಾಸಕ ಸಿ.ಸಿ. ಪಾಟೀಲ್ (CC Patil).
ಗದಗದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʻʻಯಾರಾದ್ರೂ ಆ ದಳ, ಈ ದಳ ಎಂದು ಕೇಸರಿ ಶಾಲು ಹಾಕಿಕೊಂಡು ಬಂದಲ್ಲಿ ಒದ್ದು ಒಳಗೆ ಹಾಕ್ತೀವಿʼʼ ಎಂಬ ಸಚಿವ ಪ್ರಿಯಾಂಕ ಖರ್ಗೆ (Minister Priyank Kharge) ಹೇಳಿಕೆಯನ್ನು ಖಂಡಿಸಿದರು.
ʻʻಒದ್ದು ಒಳಗೆ ಹಾಕ್ತೀವಿ ಅನ್ನೋದಕ್ಕೆ ಇದು ತಾಲಿಬಾನ್ ಸರ್ಕಾರ ಅಲ್ಲ. ಇದು ತಾಲಿಬಾನ್ ರಾಜ್ಯವೂ ಅಲ್ಲ.. ಕಾನೂನು ಕೈಗೆ ತೆಗೆದುಕೊಂಡವರಿಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಕೇಸರಿ ಶಾಲು ಹಾಕಿಕೊಂಡ ಮಾತ್ರಕ್ಕೆ ಒದೀತೀವಿ, ಒದ್ದು ಒಳಗೆ ಹಾಕ್ತೀವಿ ಅನ್ನೋದು ಅತಿರೇಕದ ಪರಮಾವಧಿ. ವಿನಾಶಕಾಲೇ ವಿಪರೀತ ಬುದ್ಧಿʼʼ ಎಂದು ಹೇಳಿದರು ಸಿ.ಸಿ. ಪಾಟೀಲ್.
ʻʻ135 ಸೀಟು ಬಂದಿವೆ ಅನ್ನುವ ಅಹಂಕಾರದಲ್ಲಿ ಪ್ರಜಾಸತ್ತಾತ್ಮಕ ನೀತಿ ನಿಯಮ ಯಾರೂ ದಾಟಬಾರದು. ಪ್ರತಿಯೊಬ್ಬ ರಾಜಕಾರಣಿಗೂ ತಮ್ಮದೇ ಆದಂತ ಲಕ್ಷ್ಮಣ ರೇಖೆ ಇರುತ್ತದೆ. ಆ ರೇಖೆಯನ್ನು ದಾಟೋದು ಬೇಡʼʼ ಎಂದು ಅವರು ಕಿವಿಮಾತು ಹೇಳಿದರು.
ಫ್ರೀ ಗ್ಯಾರಂಟಿ ತಪ್ಪಿಸಿಕೊಳ್ಳಲು ಸರ್ಕಾರದಿಂದ ಪ್ರಯತ್ನ
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಗೊಂದಲ ವಿಚಾರವನ್ನು ಪ್ರಸ್ತಾಪಿಸಿದ ಸಿ.ಸಿ. ಪಾಟೀಲ್, ಸಿಎಂ ಸಿದ್ಧರಾಮಯ್ಯನವರ ನನಗೂ ಫ್ರೀ ನಿನಗೂ ಫ್ರೀ ಡೈಲಾಗ್ ಹೊಡೆದು ವ್ಯಂಗ್ಯವಾಡಿದರು.
ಈಗ ಫ್ರೀ ಹೋಗಿ ಹೊರೆಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ವಿದ್ಯುತ್ ದರ ಏರಿಕೆ, ಹಾಲಿನ ದರ ಏರಿಕೆ, ಹೀಗೆ ಎಲ್ಲಾ ದರಗಳ ಹೆಚ್ಚಳ ಮಾಡಿದ್ದಾರೆ. ಫ್ರೀ ಕೊಡ್ತೇವೆ ಅಂತ ಹೇಳಿದ ಸಿದ್ದರಾಮಯ್ಯನವರ ಸರಕಾರ ಈಗ ತಪ್ಪಿಸಿಕೊಳ್ಳುವ ಹುನ್ನಾರ ಮಾಡುತ್ತಿದೆ ಎಂದು ಹೇಳಿದರು.
10 ಅಲ್ಲ 15 ಕೆಜಿ ಅಕ್ಕಿ ಕೊಡಬೇಕು ಎಂದ ಪಾಟೀಲ್
ಕಾಂಗ್ರೆಸ್‌ನವರು 10 ಕೆಜಿ ಉಚಿತ ಅಕ್ಕಿ ಕೊಡುತ್ತೇವೆ ಅಂದಿದ್ದರು. ಈಗಾಗಲೇ ಕೇಂದ್ರ ಸರಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಕರ್ನಾಟಕದಲ್ಲಿರುವ ಜನರಿಗೆ ಭಾರತ ಸರ್ಕಾರ ಅಕ್ಕಿ ಕೊಡುತ್ತಿದೆ ಎಂದು ಹೇಳಿದ ಸಿ.ಸಿ. ಪಾಟೀಲ್, ನೀವು ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕಾದರೆ ಐದು ಕೆಜಿ ಅಕ್ಕಿ ಉಸಾಬರಿಗೆ ಹೋಗಬಾರದು. ಅದು ಕೇಂದ್ರ ಸರಕಾರದ್ದು. ನೀವು ಕೊಟ್ಟ ಮಾತಿನಂತೆ 10 ಕೇಜಿ ಅಕ್ಕಿಯನ್ನು ಕೊಟ್ಟು ನಿಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಸವಾಲ್ ಹಾಕಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳನ್ನು ಈಡೇರಿಸಲು ಭಾರಿ ಕಷ್ಟಪಡುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಬೇರೆ ರಾಜ್ಯಗಳಿಂದ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಸಿಗುವ ಸಾಧ್ಯತೆಗಳು ಕಡಿಮೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಅಕ್ಕಿಯನ್ನು ಎಂಟು ಕೆಜಿಗೆ ಇಳಿಸಿ, ಎರಡು ಕೆಜಿಯಷ್ಟು ಬೇರೆ ಧಾನ್ಯಗಳನ್ನು ನೀಡಲು ಮುಂದಾಗಿದೆ.
ಇದನ್ನೂ ಓದಿ: CM Siddaramaiah: ರಾಜ್ಯಕ್ಕೆ ಅಕ್ಕಿಗಾಗಿ ಮುಂದುವರಿದ ಜಟಾಪಟಿ, ಸಿಗದ ಕೇಂದ್ರ ಆಹಾರ ಸಚಿವ, ಅನ್ನಭಾಗ್ಯ ಫಲಾನುಭವಿಗಳು ಅತಂತ್ರ