ವಿಧಾನಸೌಧ (ಬೆಂಗಳೂರು)/ಮಂಗಳೂರು : ಪೊಲೀಸರು ಕೇಸರಿ ಶಾಲು (Saffronisation issue) ಹಾಕಿದ್ದರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಕೆಂಡಾಮಂಡಲರಾಗಿ ಎಚ್ಚರಿಕೆ ನೀಡಿದ್ದಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ನೂತನ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಮತ್ತು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas poojari) ತಿರುಗೇಟು ನೀಡಿದ್ದಾರೆ.
ವಿಧಾನಸಭಾ ಅಧಿವೇಶನಕ್ಕೆ ಆಗಮಿಸಿದ ವೇಳೆ ಮಾತನಾಡಿದ ಈ ಇಬ್ಬರೂ ನಾಯಕರು ಈ ರೀತಿಯ ದ್ವೇಷ ಒಳ್ಳೆಯದಲ್ಲ ಎಂದಿದ್ದಾರೆ.
ರಾಷ್ಟ್ರಧ್ವಜದಲ್ಲೂ ಕೇಸರಿ ಇದೆ ಎಂದ ವಿಜಯೇಂದ್ರ
ʻʻನಿನ್ನೆ ಡಿಸಿಎಂ ಸಾಹೇಬ್ರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಸರಿ ಬಣ್ಣದ ವಿರುದ್ಧವೂ ಮಾತಾಡಿದ್ದಾರೆ. ರಾಷ್ಟ್ರದ ಧ್ವಜದಲ್ಲಿ ಕೇಸರಿ ಬಣ್ಣ ಇದೆ, ಸ್ವಾಮೀಜಿಗಳ ಉಡುಗೆ ಕೇಸರಿ, ಹನುಮ ಧ್ವಜದ ಬಣ್ಣವೂ ಕೇಸರಿ. ಇಂಥ ಕೇಸರಿ ಬಗ್ಗೆ ಕಾಂಗ್ರೆಸ್‌ನವರಿಗೆ ಯಾಕೆ ಸಿಟ್ಟೋ ಗೊತ್ತಿಲ್ಲʼʼ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ʻʻಕಾಂಗ್ರೆಸ್‌ನವರು ಇಡೀ ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಇಂತಹ ಭ್ರಮೆಯಲ್ಲಿದ್ದವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆʼʼ ಎಂದು ಹೇಳಿದರು.
ಸರ್ಕಾರದ್ದೇ ಗ್ಯಾರಂಟಿ ಇಲ್ಲ, ಜನರಿಗೆ ಕೊಟ್ಟ ಗ್ಯಾರಂಟಿ ಯಾವ ಲೆಕ್ಕ?
ʻʻರಾಜ್ಯದ ಮುಖ್ಯಮಂತ್ರಿಯೇ ಐದು ವರ್ಷ ಇರುತ್ತಾರಗೋ ಇಲ್ವೋ ಎನ್ನುವ ಗ್ಯಾರಂಟಿಯೇ ಇಲ್ಲ. ಇನ್ನು ಗ್ಯಾರಂಟಿ ಸ್ಕೀಂಗಳ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ನಿರಾಸೆ ಕಾದಿದೆಯಾ ಎಂಬ ಅನುಮಾನ ಬರುತ್ತಿದೆʼʼ ಎಂದು ವಿಜಯೇಂದ್ರ ಹೇಳಿದರು.
ʻʻಈ ಸರ್ಕಾರ ಡಬಲ್ ಸ್ಟೇರಿಂಗ್ ಸರ್ಕಾರ. ಸಿಎಂಗೊಂದು ಸ್ಟೇರಿಂಗ್, ಡಿಸಿಎಂಗೊಂದು ಸ್ಟೇರಿಂಗ್. ಯಾರು ಯಾವ ಕಡೆ ಎಳೀತಾರೋ ಗೊತ್ತಿಲ್ಲ. ಯಾರು ಯಾವ ಕಡೆಗೆ ಸ್ಟೇರಿಂಗ್ ತಿರುಗಿಸ್ತಾರೋ..? ಬಸ್ ಯಾವ ಕಡೆ ಹೋಗುತ್ತೋ ಕಾದು ನೋಡಬೇಕು. ಇವರಿಗೆ ಆ ದೇವರೇ ಬುದ್ಧಿ ಕಲಿಸುತ್ತಾರೆʼʼ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಕೇಸರಿ ಶಾಲು ನಿಷೇಧ ಇಲ್ಲ ಅನ್ನೋದು ನೆನಪಿರಲಿ ಎಂದ ಕೋಟ
ʻʻಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ನಡೆದ ಸಭೆಯಲ್ಲಿ ಪೊಲೀಸರ ಮೇಲೆ ಕೇಸರಿ ಶಾಲು ಬಳಸಿದ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದು ಎಚ್ಚರಿಕೆ ಕೊಟ್ಟಿರೋದು ಕಂಡುಬಂದಿದೆ. ಕೇಸರಿ ಶಾಲು ಈ ರಾಜ್ಯದಲ್ಲಿ ನಿಷೇಧ ಇಲ್ಲ, ಕರ್ತವ್ಯದಲ್ಲಿ ಇದ್ದಾಗ ಯಾರೂ ಕೇಸರಿ ಬಳಸಿಲ್ಲ. ಅವರ ಖಾಸಗಿ ಜೀವನದಲ್ಲಿ ಅವರ ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಡಿಕೆಶಿ ದ್ವೇಷ ತೀರಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಅವರು ತಮ್ಮ ಮಾತನ್ನ ಪುನರ್ ಪರಿಶೀಲನೆ ಮಾಡಬೇಕುʼʼ ಎಂದು ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರಿನಲ್ಲಿ ಹೇಳಿದ್ದಾರೆ.
ದ್ವೇಷ ಸಾಧನೆ ಸರಿಯಲ್ಲ ಎಂದ ಕೋಟ
ʻʻಚಿತ್ರದುರ್ಗ ಜಿಲ್ಲೆಯ ಶಿಕ್ಷಕರೊಬ್ಬರು ಮುಖ್ಯಮಂತ್ರಿಗಳ ಸಾಲದ ಬಗ್ಗೆ ಮಾತನಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಸರ್ಕಾರದಲ್ಲಿ ದ್ವೇಷ ಸಾಧಿಸೋ ವಾತಾವರಣ ಕಂಡು ಬರ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರಲ್ಲ, ಅದನ್ನ ಪುನರ್ ಪರಿಶೀಲಿಸಲಿʼʼ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ʻʻಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ವಿವಿಧ ಇಲಾಖೆಗಳಲ್ಲಿನ 40% ಕಮಿಷನ್ ಆರೋಪದ ಬಗ್ಗೆ ತನಿಖೆ ಮಾಡುತ್ತೇವೆ ಅಂದಿದ್ದಾರೆ. ನಾನು ಈ ತನಿಖೆಯನ್ನು ಮುಕ್ತವಾಗಿ ಸ್ವಾಗತ ಮಾಡ್ತೇನೆ. ಸಮಾಜ ಕಲ್ಯಾಣ, ಹಿಂದುಳಿದ ಇಲಾಖೆ ಮಂತ್ರಿಯಾಗಿದ್ದ ನನ್ನಿಂದಲೇ ತನಿಖೆ ಪ್ರಾರಂಭವಾಗಲಿ. ಎಲ್ಲವನ್ನೂ ತನಿಖೆ ಮಾಡಲಿ, ಯಾವ ತನಿಖೆಯಲ್ಲಿ ಏನಾಗುತ್ತೆ ನೋಡೋಣʼʼ ಎಂದು ಕೋಟ ಸವಾಲು ಹಾಕಿದರು.
ಮುಂದಿನ ದಿನಗಳು ಹಿಂದುಗಳಿಗೆ ಕಠಿಣವಾಗಲಿದೆ
ʻʻಹೊಸ ಸರ್ಕಾರ ಹಿಂದುತ್ವದ ವಿಚಾರ ಇಟ್ಟುಕೊಂಡು ಟಾರ್ಗೆಟ್ ಮಾಡುವ ಯೋಜನೆಯಲ್ಲಿದೆ ಎನ್ನುವುದು ನಮಗೆ ಅರ್ಥವಾಗಿದೆ. ಮುಂದಿನ ದಿನಗಳು ಹಿಂದುತ್ವ ಮತ್ತು ಹಿಂದುಗಳಿಗೆ ಕಠಿಣವಾಗಲಿದೆ. ಯಾರನ್ನಾದರೂ ಓಲೈಕೆ ಮಾಡಲು ಹಿಂದುತ್ವದ ಚಟುವಟಿಕೆಗಳನ್ನು ನಿಷೇಧ ಮಾಡುವ ಅಥವಾ ನೈತಿಕ ಪೊಲೀಸ್ ಗಿರಿ ಆರೋಪ ಮಾಡಿ ಬಂಧಿಸುವ ಕೆಲಸ ಮುಂದೆ ಆಗುತ್ತೆ ಅಂತ ನಮಗೆ ಅನಿಸುತ್ತದೆʼʼ ಎಂದು ಹೇಳಿದರು.
ʻʻಮುಂದಿನ ದಿನಗಳಲ್ಲಿ ಗೋಹತ್ಯೆ ನಿಷೇಧ ಕಾಯಿದೆ, ಮತಾಂತರ ತಡೆ ಕಾಯಿದೆಯನ್ನು ವಿರೋಧಿಸುವ, ರದ್ದು ಮಾಡುವ ಕಾರ್ಯತಂತ್ರವೂ ರೂಪುಗೊಂಡಿದೆʼʼ ಎಂದು ಹೇಳಿದ ಶ್ರೀನಿವಾಸ ಪೂಜಾರಿ ಅವರು, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ನಾವು ಜನಸಾಮಾನ್ಯರಿಗೆ ರಕ್ಷಣೆ ಕೊಡುತ್ತೇವೆʼʼ ಎಂಬ ಭರವಸೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್ ಖರ್ಗೆ ವಿವಾದಿತ ಹೇಳಿಕೆ