ಮಂಗಳೂರು: ಸರ್ಕಾರಿ ಇಲಾಖೆಗಳಲ್ಲಿ (Government departments) ಹತ್ತಾರು ವರ್ಷ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಆಧಾರದ ಪೂಜೆಗಳನ್ನು (Religious rituls) ತಡೆಯುವ ಸಂಚು ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin kumar kateel) ಆಪಾದಿಸಿದ್ದಾರೆ.
ಪೊಲೀಸರು ಹಬ್ಬದ ದಿನದಂದು ಪೊಲೀಸ್ ಠಾಣೆಯಲ್ಲಿ ಕೇಸರಿ ಬಟ್ಟೆ ಧರಿಸಿದ್ದನ್ನೇ ಮುಖ್ಯವಾಗಿಟ್ಟುಕೊಂಡು (Saffron politics) ಇಡೀ ಪೊಲೀಸ್ ಇಲಾಖೆಯ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹರಿಹಾಯ್ದ ಬಗ್ಗೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದರು.
ʻʻಸಾಂವಿಧಾನಾತ್ಮಕವಾಗಿ ಎಲ್ಲಾ ಇಲಾಖೆಗಳಲ್ಲೂ ಪ್ರತಿ ನಾಗರಿಕನಿಗೂ ಅವನ ಧರ್ಮದ ಅನುಷ್ಠಾನದ ಹಕ್ಕಿದೆ. ಹತ್ತಾರು ವರ್ಷಗಳಿಂದ ಎಲ್ಲಾ ಇಲಾಖೆಗಳಲ್ಲೂ ಧಾರ್ಮಿಕ ಆಧಾರದಲ್ಲಿ ಪೂಜೆಗಳು ನಡೆಯುತ್ತಿವೆ. ಆಯುಧ ಪೂಜೆ, ಶಿಲಾನ್ಯಾಸಗಳ ಸಮಯದಲ್ಲಿ ಸಂಪ್ರದಾಯಬದ್ಧವಾಗಿ ಪೂಜೆ ನಡೆಯುತ್ತಿದೆ. ಇದೀಗ ಕಾಂಗ್ರೆಸ್ ಸರ್ಕಾರ ಅದೆಲ್ಲವನ್ನೂ ತಡೆಯುವ ಕೆಲಸಕ್ಕೆ ಮುಂದಾಗಿದೆʼʼ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ʻʻಕಾಂಗ್ರೆಸ್‌ನ ಹೀನ ರಾಜಕಾರಣ ಮತ್ತು ಸಿದ್ದರಾಮಯ್ಯ ಅವರ ಮಾನಸಿಕತೆ ಈ ಮೂಲಕ ಬಯಲಾಗಿದೆ. ಒಬ್ಬ ಮುಖ್ಯಮಂತ್ರಿ ಸಾಂವಿಧಾನಿಕವಾಗಿ ಆತನ ಧಾರ್ಮಿಕ ಆಚರಣೆಗೆ ಅಡ್ಡಿ ಬರುವುದು ಸರಿಯಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಪೂಜೆಗಳನ್ನು ಕೆಲವು ಇಲಾಖೆಗಳಲ್ಲಿ ಮಾಡುತ್ತಾರೆ. ನಂಬಿಕೆಗಳ ಆಧಾರದಲ್ಲಿ ಕೆಎಸ್ಸಾರ್ಟಿಸಿ, ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡ್ತಾರೆ. ಇಂಥ ಪೂಜೆಗಳನ್ನು ನಿಷೇಧಿಸುವ, ಬಹಿಷ್ಕಾರ ಹಾಕುವ ಕ್ರಮ ಸರಿಯಲ್ಲʼʼ ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ʻʻಪೂಜೆ ಮಾಡುವ ಪೊಲೀಸರನ್ನು ಒಂದು ಪಾರ್ಟಿಗೆ ಸೀಮಿತ ಮಾಡುವ ಹೀನ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಬಜರಂಗದಳ ನಿಷೇಧವನ್ನು ಉಲ್ಲೇಖ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ಹಿಂದೂ ಸಮಾಜದ ಮೇಲೆ ಹೇಗೆ ಸವಾರಿ ಮಾಡುತ್ತದೆ ಎನ್ನುವುದನ್ನು ತೋರಿಸುತ್ತಿದೆʼʼ ಎಂದು ಅಭಿಪ್ರಾಯಪಟ್ಟರು ನಳಿನ್ ಕುಮಾರ್ ಕಟೀಲ್.
ʻʻಹಿಂದೂ ಆಚರಣೆಗಳು ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರ ಮೇಲೆ ಹೇಗೆ ಸವಾರಿ ಮಾಡುವ ಇಂಥ ಕೃತ್ಯಗಳ ವಿರುದ್ಧ ಹೋರಾಟ ಮಾಡಿ ಉತ್ತರ ಕೊಡುವ ಶಕ್ತಿ ಬಿಜೆಪಿಗಿದೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನ ಮಾನಸಿಕತೆಯನ್ನು ನಾನು ವಿರೋಧಿಸುತ್ತೇನೆ. ಸಂಘಟನೆ ಕಾರ್ಯಗಳಿಗೆ ಕೈ ಹಾಕಿದ್ರೆ ನಾವು ಉತ್ತರ ಕೊಡುತ್ತೇವೆʼʼ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳನ್ನು ಬೆದರಿಕೆ ತಂತ್ರ
ʻʻಎಲ್ಲಾ ಇಲಾಖೆಗಳಲ್ಲೂ ರಾಜಕಾರಣ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಾಂಗ್ರೆಸ್ ಅಜೆಂಡಾ ಹೇರುವ ಕೆಲಸ ನಡೆಯುತ್ತಿದೆ. ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಒಳ್ಳೆಯ ಕೆಲಸ ಮಾಡಿ ರಾಜ್ಯ ಅಭಿವೃದ್ಧಿ ಆಗಿದೆ. ಇವತ್ತು ಅಂಥ ಅಧಿಕಾರಿಗಳನ್ನು ಬೆದರಿಸುವ ತಂತ್ರಗಾರಿಕೆಯನ್ನು ಸಿದ್ದರಾಮಯ್ಯ ಮಾಡ್ತಿದಾರೆʼʼ ಎಂದು ಆರೋಪಿಸಿದರು
ಹೋರಾಟಗಳ ಮೂಲಕ ಕಾಂಗ್ರೆಸ್‌ಗೆ ಉತ್ತರ
ʻಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನು ಪ್ರಕಟಿಸಿಯೇ ಪ್ರಕಟಿಸುತ್ತದೆ ಅಂತ ನಮಗೆ ಚೆನ್ನಾಗಿ ಗೊತ್ತಿದೆ. ನಾವು ಕೂಡಾ ಹೋರಾಟದ ಮೂಲಕ ಕಾಂಗ್ರೆಸ್ ಗೆ ಉತ್ತರ ಕೊಡ್ತೇವೆ. ನಾವು ಹಿಂದೂಗಳ ಪರವಾಗಿದ್ದೇವೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧದ ಪರವಾಗಿದ್ದೇವೆ. ಹಿಂದೂ ಸಮಾಜಕ್ಕೆ ತೊಂದರೆಯಾದರೆ ಬಿಜೆಪಿ ಹೋರಾಟ ಮಾಡಲಿದೆʼʼ ಎಂದು ಹೇಳಿದರು ನಳಿನ್.
ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ: ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ಮಂಗಳವಾರ ನಡೆದ ಸಭೆಯಲ್ಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಕೇಸರೀಕರಣ ಮಾಡುವ ಅವಕಾಶ ಕೊಡಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಉತ್ತಮ ಹೆಸರು ಮಾಡಿದೆ. ನಮ್ಮ ಪೊಲೀಸರು ಕೇಸರಿಕರಣ ಯಾವತ್ತೂ ಮಾಡಿಲ್ಲ. ಕಾಂಗ್ರೆಸ್ ನವರು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ʻʻಕಾಂಗ್ರೆಸ್‌ನವರು ಅವರ ಅಜೆಂಡಾ ಜಾರಿ ಮಾಡಲು ಈ ರೀತಿ ತೀರ್ಮಾನ ಮಾಡಿದ್ದಾರೆ. ಇದರಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ಮಾಡಲು ಮೊದಲ ದಿನದಿಂದಲೇ ಕಾಂಗ್ರೆಸ್ ಮುಂದಾಗಿದೆʼʼ ಎಂದರು ಬೊಮ್ಮಾಯಿ.
ಇದನ್ನೂ ಓದಿ: Saffronisation issue: ಕೇಸರಿ ಶಾಲಿನ ವಿರುದ್ಧ ಡಿಕೆಶಿ ಆಕ್ರೋಶಕ್ಕೆ ವಿಜಯೇಂದ್ರ, ಕೋಟ ತಿರುಗೇಟು