ಮೈಸೂರು: ಸಾಹಸ ಸಿಂಹ ವಿಷ್ಣುವರ್ಧನ್ ( Vishnuvardhan ) ಅವರ ಸ್ಮಾರಕ ಉದ್ಘಾಟನೆ ಇಂದು ನಡೆಯಲಿದೆ. ಮೈಸೂರಿನ ಎಚ್.ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಸ್ಮಾರಕವನ್ನು ಜನವರಿ 29ರಂದು (ಭಾನುವಾರ) ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಾಗುತ್ತದೆ. (Vishnuvardhan Memorial Inauguration) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ಮಾರಕದ ಲೋಕಾರ್ಪಣೆ ಮಾಡಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ನಾನಾ ಕಾರಣಗಳಿಂದ ನನೆಗುದಿಯಲ್ಲಿತ್ತು. ಕೊನೆಗೂ ಮೈಸೂರಿನಲ್ಲಿ ಅನಾವರಣಗೊಳ್ಳುತ್ತಿದೆ. ದಾದಾ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. (Vishnuvardhan Memorial in Mysore) ಮಧ್ಯಾಹ್ನ 12.30ಕ್ಕೆ ಉದ್ಘಾಟನೆಯಾಗಲಿದೆ. ವಿಷ್ಣುವರ್ಧನ್ ಪತ್ನಿ ಭಾರತಿ ಮತ್ತು ಕುಟುಂಬದವರು ಭಾಗವಹಿಸಲಿದ್ದಾರೆ. ವಿಷ್ಣುವರ್ಧನ್ ಅವರ ಕಟೌಟ್‌ಗಳನ್ನು ಹಾಕಲಾಗಿದ್ದು, ಭಾನುವಾರ ಪ್ರತಿಮೆಯೂ ಅನಾವರಣಗೊಳ್ಳಲಿದೆ.
ಸ್ಮಾರಕದಲ್ಲಿ ಏನೇನಿರಲಿದೆ?
ಒಟ್ಟು 2.75 ಎಕರೆ ಜಾಗದಲ್ಲಿ ಈ ಸ್ಮಾರಕ ಭವನ ನಿರ್ಮಾಣವಾಗಿದೆ. ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ 676 ಫೋಟೊಗಳನ್ನು ಒಳಗೊಂಡಿರುವ ಗ್ಯಾಲರಿ, 7 ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆ, ವಿಶೇಷ ಪುತ್ಥಳಿ, ಆಡಿಟೋರಿಯಂ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಸೆಲ್ಫಿ ಸ್ಪಾಟ್, ಅವರ ಸಿನಿಮಾಗಳಿಗೆ ದೊರೆತ ಪ್ರಶಸ್ತಿಗಳು, ಸ್ಮರಣ ಫಲಕಗಳು, ಅವರು ಬಳಸುತ್ತಿದ್ದ ವಸ್ತುಗಳು, ಬಟ್ಟೆಗಳು ಹೀಗೆ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ನಲುವತ್ತು ವರ್ಷಗಳಿಗೂ ಹೆಚ್ಚು ಕಾಲ ಸತತವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದ ವಿಷ್ಣುವರ್ಧನ್ ಅವರು ದೇಶದ ಚಲನಚಿತ್ರ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಬೀರಿದ ಮೇರು ನಟ. ಅವರ ಈ ಸೇವೆಗೋಸ್ಕರ 11 ಕೋಟಿ ರೂ. ವೆಚ್ಚದಲ್ಲಿ ಸರ್ಕಾರ 5 ಎಕರೆ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಿದೆ. ಮೂಲತಃ ಮೈಸೂರಿನವರಾದ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆದಿತ್ತು. 13 ವರ್ಷಗಳ ಕಾಯುವಿಕೆ, ಹೋರಾಟದ ಬಳಿಕ ಕೊನೆಗೂ ಇಂದು ವಿಷ್ಣುವರ್ಧನ್ ಸ್ಮಾರಕ ಅನಾವರಣವಾಗುತ್ತಿದೆ.
2020ರಲ್ಲಿ ಶಂಕುಸ್ಥಾಪನೆ:
ವಿಷ್ಣುವರ್ಧನ್ ಸ್ಮಾರಕಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು 2020ರ ಸೆಪ್ಟೆಂಬರ್ 15ರಂದು ಶಂಕು ಸ್ಥಾಪನೆಯನ್ನು ನೆರವೇರಿಸಿದ್ದರು. ಈ ಸ್ಮಾರಕ ಭವನದಲ್ಲಿ ಸಿನಿಮಾ ಮತ್ತು ನಾಟಕಗಳ ಚಟುವಟಿಕೆಗಳನ್ನೂ ಹಮ್ಮಿಕೊಳ್ಳುವ ನಿರೀಕ್ಷೆ ಇದೆ. ಮೂಲತಃ ಮೈಸೂರಿನವರಾದ ಡಾ.ವಿಷ್ಣುವರ್ಧನ್ ಸಿನಿಮಾ ಶೂಟಿಂಗ್ ಸಲುವಾಗಿ ಮೈಸೂರಿಗೆ ಬಂದಾಗ ಇಲ್ಲಿ ಕಳೆದ ಬಾಲ್ಯವನ್ನು ನೆನಪಿಸಿಕೊಳ್ಳುತ್ತಿದ್ದರು. ತಮ್ಮ ಇಳಿಗಾಲದಲ್ಲಿ ಮೈಸೂರಿನಲ್ಲಿ ವಿರಾಮದ ದಿನಗಳನ್ನು ಕಳೆಯಲು ಬಯಸುತ್ತಿದ್ದರು.
ಬೆಂಗಳೂರು-ಮೈಸೂರು ನಡುವೆ ಬೈಕ್ ರ‍್ಯಾಲಿ
ಸ್ಮಾರಕ ಉದ್ಘಾಟನೆ ದಿನವಾದ ಭಾನುವಾರ ಬೆಂಗಳೂರಿನಿಂದ ಮೈಸೂರಿಗೆ ಬೈಕ್ ರ‍್ಯಾಲಿಯೂ ನಡೆಯಲಿದೆ. ಬೈಕ್, ಕಾರು, ಬಸ್‌ಗಳ ಮೂಲಕ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮೂಲಕ ಮೈಸೂರಿಗೆ ಅಭಿಮಾನಿಗಳು ಬಂದು ಸೇರಲಿದ್ದಾರೆ.
ವಿಷ್ಣು ಅಭಿಮಾನಿಗಳು ಏನೆನ್ನುತ್ತಾರೆ?
ಸ್ಮಾರಕ ಉದ್ಘಾಟನೆಗೆ ರಾಜ್ಯಾದ್ಯಂತ ಪ್ರಚಾರ ನೀಡಬೇಕಾಗಿತ್ತು. ಬೇರೆ ಕಾರ್ಯಕ್ರಮಗಳಿಗೆ ರಾಜ್ಯದಾದ್ಯಂತ ಪಬ್ಲಿಸಿಟಿ ಕೊಡುವ ಸರ್ಕಾರ ಈ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ವಹಿಸಿದೆ. ಕೇವಲ ಮೈಸೂರು ಡಿಸಿ ನೇತೃತ್ವದಲ್ಲಿ ಕಾರ್ಯಕ್ರಮ ಮುಗಿಸಿ ಸುಮ್ಮನಾಗುತ್ತಿದ್ದಾರೆ ಎಂದು ವಿಷ್ಣುವರ್ಧನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಚಲನಚಿತ್ರ ಮಂಡಳಿ, ಕನ್ನಡ ನಟರು ಯಾರು ಕೂಡ ಈ ಬಗ್ಗೆ ಸರಿಯಾದ ಗಮನ ಹರಿಸಿಲ್ಲ.
ಸರ್ಕಾರ ಇತರ ಕಾರ್ಯಕ್ರಮಗಳಿಗೆ ಖಾಸಗಿ ಜೆಟ್ ಮೂಲಕ ಅನ್ಯಭಾಷ ನಟರನ್ನೂ ಕರೆತಂದು ಅದ್ದೂರಿ ಕಾರ್ಯಕ್ರಮ ಮಾಡುತ್ತದೆ. ವಿಷ್ಣುವರ್ಧನ್ ವಿಚಾರದಲ್ಲಿ ಮಾತ್ರ ಯಾಕಿಷ್ಟು ನಿರ್ಲಕ್ಷ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Vishnuvardhan: ಭಾನುವಾರ ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ; ಸರ್ಕಾರದ ನಡೆಗೆ ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ಬೇಸರ