ಹುಬ್ಬಳ್ಳಿ: ಈ ಹಿಂದೆ ಈದ್ಗಾ ಮೈದಾನ ಆಗಿದ್ದ ಬೆಂಗಳೂರಿನ ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಕೋರಿದ ಬೆನ್ನಲ್ಲೇ ಹುಬ್ಬಳ್ಳಿಯ ವಿವಾದ ಈದ್ಗಾ ಮೈದಾನದಲ್ಲೂ ಇದೇ ರೀತಿಯ ಆಚರಣೆಗೆ ಬೇಡಿಕೆ ಕೇಳಿಬಂದಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಅವಕಾಶ ನೀಡಬೇಕು ಎಂದು ವಿವಿಧ ಹಿಂದು ಪರ ಸಂಘಟನೆಗಳ ವತಿಯಿಂದ ಬುಧವಾರ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು, ಮೇಯರ್‌ಗೆ ಮನವಿ ಸಲ್ಲಿಸಲಾಯಿತು.
ಮೂರು ದಿನಗಳ ಗಡುವು
ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಆಗಸ್ಟ್ ೧೧ರಂದೇ ಮನವಿ ಸಲ್ಲಿಸಲಾಗಿತ್ತು. ಆದರೆ, ಇನ್ನೂ ಅದರ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಹೀಗಾಗಿ ಇನ್ನೊಮ್ಮೆ ಮನವಿ ನೀಡುತ್ತಿದ್ದೇವೆ. ಆಯುಕ್ತರು ಹಿಂದುಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅನುಮತಿ ಕೊಡಬೇಕು. ಮೂರು ದಿನಗಳ ಒಳಗೆ ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲವಾದರೆ ಹೋರಾಟ ಸಂಘಟಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.
ಗಜಾನನ ಉತ್ಸವ ಸಮಿತಿ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ರಾಣಿ ಚೆನ್ನಮ್ಮ ಗಜಾನನೋತ್ಸವ ಸಮಿತಿ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಮನವಿಯನ್ನು ಸಲ್ಲಿಸಲಾಗಿದೆ. ಇದೇ ಮನವಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ʻʻಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಅನುಮತಿ ನೀಡಬೇಕು. ಈದ್ಗಾ ಮೈದಾನದಲ್ಲಿ ಮುಸ್ಲಿಮರಿಗೆ ಇರುವಷ್ಟೇ ಅಧಿಕಾರ ಹಿಂದೂಗಳಿಗೂ ಇದೆ. ಕೆಲವರು ಈ ಮೈದಾನವನ್ನು ರಾಜಕೀಯ ಹೋರಾಟಕ್ಕೆ ಬಳಕೆ ಮಾಡಿಕೊಂಡರು. ಈಗ ನಮ್ಮ ಮನೆಯಲ್ಲಿ ನಾವೇ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆʼʼ ಎಂದಿರುವ ಸಂಘಟಕರು, ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರೆಗೂ ನಾವು ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ ಎಂದರು. ಗಣೇಶೋತ್ಸವ ನಡೆಸುವ ನಿರ್ಧಾರಕ್ಕೆ ಬದ್ಧ ಎಂದು ಘೋಷಿಸಿದರು.
೨೦೧೦ರಲ್ಲೇ ಸುಪ್ರೀಂಕೋರ್ಟ್ ಹೇಳಿದೆ
ಸುಪ್ರೀಂಕೋರ್ಟ್ ೨೦೧೦ರಲ್ಲೇ ಈದ್ಗಾ ಮೈದಾನದ ವಿಚಾರದಲ್ಲಿ ತೀರ್ಪನ್ನು ನೀಡಿದೆ. ಇದರಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಬಹುದು. ಉಳಿದ ಅವಧಿಯಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ಬಳಸಬಹುದು ಎಂದು ಅದು ಹೇಳಿತ್ತು ಎಂದು ಸಂಘಟಕರು ಹೇಳಿದ್ದಾರೆ. ಅಂದಿನಿಂದಲೇ ಪದೇಪದೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಆದರೆ, ಆಯುಕ್ತರು ಅಷ್ಟೇನೂ ಸ್ಪಂದಿಸಿಲ್ಲ. ಯಾವ ಕಾರಣ ಎನ್ನುವುದು ಗೊತ್ತಿಲ್ಲ ಎಂದರು.
ಮುಸ್ಲಿಮರಿಗೂ ಮನವಿ
ಹುಬ್ಬಳ್ಳಿಯ ಮುಸ್ಲಿಮರು ಕೂಡಾ ಗಣೇಶೋತ್ಸವಕ್ಕೆ ಹಿಂದಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಮಂಗಳಾರತಿ, ಪ್ರಸಾದ ಸ್ವೀಕರಿಸುತ್ತಾ ಬಂದಿದ್ದಾರೆ. ಈ ಬಾರಿ ಈದ್ಗಾ ಮೈದಾನದಲ್ಲಿ ಆಚರಿಸುವ ಗಣೇಶೋತ್ಸವಕ್ಕೂ ಅದೇ ರೀತಿಯ ಸಹಕಾರ ನೀಡಬೇಕು ಎಂದು ಸಂಘಟಕರು ಮುಸ್ಲಿಮರನ್ನು ಕೇಳಿಕೊಂಡರು.
ಇದನ್ನೂ ಓದಿ| ಚಾಮರಾಜಪೇಟೆ ಮೈದಾನದಲ್ಲಿ ತಿರಂಗಾ ಅರಳಿತು, ಇನ್ನು ಗಣೇಶೋತ್ಸವ ಮಾಡಿಯೇ ಸಿದ್ಧ ಎಂದ ಶ್ರೀರಾಮ ಸೇನೆ