ಬೆಳಗಾವಿ: ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಾರದರ್ಶಕ ತನಿಖೆಗೆ ಒತ್ತಾಯಿಸಿ ಸಂತೋಷ್ ಪಾಟೀಲ್ ಕುಟುಂಬದವರು ರಾಜ್ಯಪಾಲರ ಮೊರೆ ಹೋಗಿದ್ದಾರೆ. ಮುಂದಿನ ಸಂಪುಟ ವಿಸ್ತರಣೆ ವೇಳೆ ಮತ್ತೆ ಹೇಗಾದರೂ ಸಚಿವ ಸ್ಥಾನವನ್ನು ಮತ್ತೆ ಗಿಟ್ಟಿಸಿಕೊಳ್ಳಬೇಕೆನ್ನುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾದಿ ಇದರಿಂದಾಗಿ ಮತ್ತಷ್ಟು ದುರ್ಗಮವಾಗಿದೆ.
ಸಂತೋಷ್ ಪತ್ನಿ ರೇಣುಕಾ ಪಾಟೀಲ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ನಿರ್ದೇಶನದಂತೆ ನಡೆಯುತ್ತಿದೆ ಎಂದು ಸಂತೋಷ್ ಪಾಟೀಲ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೇವಲ 15 ದಿನದಲ್ಲೇ ಈ ಕೇಸ್ನಿಂದ ಆರೋಪ ಮುಕ್ತನಾಗಿ ಬರುತ್ತೇನೆಂದು ಕೆ.ಎಸ್ ಈಶ್ವರಪ್ಪ ಹೇಳಿರುವುದರ ಬಗ್ಗೆಯೂ ರಾಜ್ಯಪಾಲರಿಗೆ ನೀಡಿದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ತಮ್ಮ ಹಣಬಲ, ರಾಜಕೀಯ ಬಲ ಬಳಸಿ ಆತ್ಮಹತ್ಯೆ ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ಈ ಪ್ರಕರಣದ ಪ್ರತಿ ಹಂತದ ತನಿಖೆಯ ಸೋರಿಕೆಯನ್ನು ಮಾಡುತ್ತಿದ್ದಾರೆ. ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಇದನ್ನೂ ಓದಿ | CM ಬಸವರಾಜ ಬೊಮ್ಮಾಯಿಗೆ ಫುಲ್ ಡಿಮ್ಯಾಂಡ್: ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಡ
ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಂತೋಷ್ ಪತ್ನಿ ರೇಣುಕಾ ಪಾಟೀಲ್, ತಾನು ಈ ಪ್ರಕರಣದಿಂದ ಮುಕ್ತನಾಗಿ ಹೊರಬರುತ್ತೇನೆ ಎಂದು ಈಶ್ವರಪ್ಪ ರಾಜರೋಷವಾಗಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಗಮನಿಸಿದರೆ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ ಎನಿಸುತ್ತಿದೆ. ಯಾರು ಎಷ್ಟೇ ಪ್ರಭಾವಿಯಾದರೂ ಕಾನೂನು ಮುಂದೆ ಎಲ್ಲರೂ ಒಂದೇ. ಅದಕ್ಕಾಗಿ ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ನಂತರ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಪರಿಗಣಿಸಬೇಕು ಎಂದು ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅನೇಕರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ಸಂತೋಷ್ ಕುಟುಂಬದವರು ರಾಜ್ಯಪಾಲರಿಗೆ ದೂರು ನೀಡಿರುವುದರಿಂದ ಈಶ್ವರಪ್ಪ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ಈಶ್ವರಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರಿಂದ, ಚುನಾವಣೆ ಹೊಸ್ತಿಲಲ್ಲಿ ಪ್ರತಿಪಕ್ಷಗಳಿಗೆ ಆಹಾರ ನೀಡಿದಂತಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡದಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಬಿಜೆಪಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ| BJP ರಾಜ್ಯ ಕಾರ್ಯಕಾರಿಣಿಗೆ ಸಂತೋಷ್ ಆತ್ಮಹತ್ಯೆ ನೆರಳು: ಒಂದೇ ದಿನವಿರುವಂತೆ ಮಾಜಿಯಾಗುವ ಈಶ್ವರಪ್ಪ