ಮೈಸೂರು: ವೇಶ್ಯಾವಾಟಿಕೆ ಕಿಂಗ್‌ಪಿನ್ ಸ್ಯಾಂಟ್ರೋ ರವಿ ಪ್ರಕರಣ (Santro Ravi Case) ಸಿಐಡಿಗೆ ವರ್ಗಾವಣೆಯಾಗಿದೆ. ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು, ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ನಡುವೆ ಆರೋಪಿಗಳನ್ನು ಜ.30ರವರೆಗೆ ಸಿಐಡಿ ವಶಕ್ಕೆ ನೀಡಲಾಗಿದೆ.
ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುತ್ತಿದ್ದಂತೆಯೇ ಸೋಮವಾರವೇ ಮೈಸೂರಿಗೆ ಆಗಮಿಸಿದ ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದ ತಂಡ, ಮೈಸೂರಿನಲ್ಲೇ ಇಡೀ ದಿನ ಬೀಟು ಬಿಟ್ಟಿತ್ತು. ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಅಧಿಕಾರಿಗಳು, ಕಮಿಷನರ್ ರಮೇಶ್ ಬಾನೋತ್, ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರೊಂದಿಗೆ ಚರ್ಚಿಸಿದರು. ಇದುವರೆಗಿನ ತನಿಖೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ದೂರು ಪ್ರತಿ, ಎಫ್‌ಐಆರ್, ಆರೋಪಿಗಳ ಬಂಧನ, ವೈದ್ಯಕೀಯ ಪರೀಕ್ಷೆ, ಸಿಡಿಆರ್ ಸೇರಿ ಎಲ್ಲ ದಾಖಲೆಗಳ ಹಸ್ತಾಂತರ ಮಾಡಿಕೊಂಡರು.
ಈ ಬಗ್ಗೆ ಮಾತನಾಡಿದ ಕಮಿಷನರ್ ರಮೇಶ್ ಬಾನೋತ್, ಸಿಐಡಿ ಅಧಿಕಾರಿಗಳಿಗೆ ದಾಖಲೆಗಳನ್ನು ವರ್ಗಾಹಿಸಿದ್ದೇವೆ. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದೆ. ನಾವು ದಾಖಲೆಗಳನ್ನು ಹಸ್ತಾಂತರ ಮಾಡಿದ್ದೇವೆ.
ಪ್ರಕರಣದ ತನಿಖಾಧಿಕಾರಿ ಬದಲಾಗಿದ್ದಾರೆ. ಆದ್ದರಿಂದ ನಮ್ಮ ಪಾತ್ರ ಇರುವುದಿಲ್ಲ. ಸ್ಥಳೀಯವಾಗಿ ಸಹಕಾರ ಬೇಕಾದರೆ ನೀಡುತ್ತೇವೆ. ರಾಜ್ಯ ಸರ್ಕಾರ ಯಾವುದೇ ಪ್ರಕರಣವನ್ನು ಸಿಐಡಿಗೆ ವಹಿಸಬಹುದು ಅದರು.
ಈ ನಡುವೆ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ಎರಡನೇ ಪತ್ನಿ ದೂರು ನೀಡಿದ್ದರು. ನನ್ನ ಚೆಕ್‌ಬುಕ್ ಕಳವು ಹಾಗೂ ದುರ್ಬಳಕೆ ಮಾಡಿಕೊಂಡಿದ್ದಾರೆ.
2019ರಲ್ಲಿ ಸ್ಯಾಂಟ್ರೋ ರವಿ ನನ್ನ ಖಾತೆ ಓಪನ್ ಮಾಡಿಸಿ, ಚೆಕ್ ಬುಕ್ ತರಿಸಿದ್ದ. 2020ರ ವರೆಗೂ ಆತನ ಬಳಿಯೇ ಚೆಕ್ ಬುಕ್ ಇತ್ತು. 2020ರಲ್ಲಿ ಆತ ವಾಪಸ್ ಕೊಟ್ಟ ದಿನವೇ ಕಳವಾಗಿತ್ತು. ಆಗ ದೇವರಾಜ ಪೊಲೀಸ್ ಠಾಣೆಗೆ ದೂರು ಕೊಟ್ಟು ಎನ್‌ಸಿಆರ್ ಪಡೆದಿದ್ದೆ. ಆಗ ಯಾರು ಕಳವು ಮಾಡಿದ್ದರು ಅಂತ ಗೊತ್ತಾಗಿರಲಿಲ್ಲ. ಈಗ ನನ್ನ ಪತಿಯೇ ಚೆಕ್ ಕದ್ದು ದುರ್ಬಳಕೆ ಮಾಡಿಕೊಂಡಿರೋದು ಗೊತ್ತಾಗಿದೆ. 10 ಲಕ್ಷ ರೂ. ಚೆಕ್ ಬೌನ್ಸ್ ಕೇಸ್ ಹಾಕಿದ್ದ. ಪ್ರಕಾಶ್ ಎಂಬುವರು 2022ರಲ್ಲಿ ಪ್ರಕಾಶ್ ಇದೇ ಚೆಕ್‌ಲೀಫ್ ಬಳಸಿ 5 ಲಕ್ಷ ರೂ. ಕೇಸ್ ಹಾಕಿದ್ದರು. ಸ್ಯಾಂಟ್ರೋ ರವಿ ಮತ್ತಷ್ಟು ಚೆಕ್ ಬಳಸಿ ಬ್ಲಾಕ್ ಮೇಲ್ ಮಾಡೋದಾಗಿ ಧಮ್ಕಿ ಹಾಕಿದ್ದಾನೆ ಅಂತ ವಿಸ್ತಾರ ನ್ಯೂಸ್ ಗೆ ಸಂತ್ರಸ್ತೆ ತಿಳಿಸಿದ್ದಾರೆ.
ಆರೋಪಿ ಸ್ಯಾಂಟ್ರೋ ರವಿ, ರಾಮ್ ಜೀ, ಸತೀಶ್‌ನನ್ನು ಸಿಐಡಿ ವಶಕ್ಕೆ ಪಡೆದಿದೆ. ತನಿಖಾಧಿಕಾರಿಗಳ ಮನವಿ ಮೇರೆಗೆ ಮೈಸೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಜ.30ರವರೆಗೂ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ | Santro Ravi case | ಸುಳ್ಳು ಕೇಸ್ ಹಾಕೋದ್ರಲ್ಲಿ ರವಿ Expert: ಮೊದಲ ಪತ್ನಿ ಕೊಲೆ ಬೆದರಿಕೆ ಹಾಕಿದ್ದಾಳೆಂದು FIR!