ಬೆಂಗಳೂರು: ರಾಜಕಾರಣಿಗಳ ಜತೆಗೆ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ವಿಚಾರದಲ್ಲಿ ಬಿಜೆಪಿಯನ್ನು ಕೆಣಕುವುದನ್ನು ಕಾಂಗ್ರೆಸ್ ಮುಂದುವರಿಸಿದೆ. ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಗೃಹ ಸಚಿವರನ್ನು ಟಾರ್ಗೆಟ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ತಾನು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತೇನೆ ಎಂದು ಡೀಲ್ ಮಾಡುವ ಆಡಿಯೊವನ್ನು ಉಲ್ಲೇಖಿಸಿರುವ ದಿನೇಶ್ ಗುಂಡೂರಾವ್ ಆತ ಅಷ್ಟೊಂದು ಪ್ರಭಾವಿಯೇ ಎಂದು ಪ್ರಶ್ನಿಸಿದ್ದಾರೆ.
ದಿನೇಶ್ ಗುಂಡೂ ರಾವ್ ಟ್ವೀಟ್‌ಗಳಿವು
-‘ಸ್ಯಾಂಟ್ರೋ ರವಿ’ ಎಂಬ ಪಿಂಪ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾನೆ. ಈ ಸರ್ಕಾರದಲ್ಲಿ ‘ತಲೆ ಹಿಡುಕ’ನೊಬ್ಬ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವಷ್ಟು ಪ್ರಭಾವಿಯೇ.? ಗೃಹಮಂತ್ರಿ ಜ್ಞಾನೇಂದ್ರರವರೆ ತಲೆಹಿಡುಕ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು.? ನಿಮ್ಮ ಗಮನಕ್ಕೆ ಬಾರದೆ ವರ್ಗಾವಣೆ ನಡೆಸಲು ಸಾಧ್ಯವೇ.?
– ತಲೆಹಿಡುಕ ಸ್ಯಾಂಟ್ರೋ ರವಿ ವರ್ಗಾವಣೆ ಸಂಬಂಧ ಹಲವು ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿರೋ ಆಡಿಯೋ ರಿಲೀಸ್ ಆಗಿದೆ.ಆ ಆಡಿಯೋದಲ್ಲಿ ಬೊಮ್ಮಾಯಿಯವರೇ ನನಗೆ ಸರ್ ಎನ್ನುತ್ತಾರೆ, ನೀವು ನನಗೆ ಸರ್ ಎನ್ನಬೇಕು ಎಂದು DYSPಯೊಬ್ಬರಿಗೆ ಧಮಕಿ ಹಾಕಿದ್ದಾನೆ.ಈ ಸರ್ಕಾರದ ಪ್ರಭಾವಿಗಳ ರಕ್ಷಣೆಯಿಲ್ಲದೆ ಅಧಿಕಾರಿಗೆ ಧಮಕಿ ಹಾಕಲು ಸ್ಯಾಂಟ್ರೋ ರವಿಗೆ ಸಾಧ್ಯವೇ?
-ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟ್ರೋ ರವಿ ಜೊತೆ BJPಯ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ. BJPಯವರು ವಿಶೇಷವಾಗಿ ತಲೆಹಿಡುಕರ ಸಂಗ ಯಾಕೆ ಬೆಳೆಸುತ್ತಾರೋ ಅರ್ಥವಾಗುತ್ತಿಲ್ಲ.? BJPಯವರು ತಲೆಹಿಡುಕರ ಸಂಗ ಬೆಳೆಸುವ ಹಿಂದಿನ ಮರ್ಮವೇನು.? ಉತ್ತರಿಸುವಿರಾ ಬೊಮ್ಮಾಯಿಯವರೇ.?
ಬಿಜೆಪಿ ಕೂಡಾ ಉತ್ತರಿಸಿದೆ
ಈ ನಡುವೆ ಬಿಜೆಪಿ ಸಿಎಂ ಬೊಮ್ಮಾಯಿ ಅವರ ಮೇಲೆ ಬಂದಿರುವ ಆರೋಪಕ್ಕೆ ಉತ್ತರ ನೀಡಿದೆ. ಮುಖ್ಯಮಂತ್ರಿ ಎಂದ ಮೇಲೆ ಹಲವು ಬಂದು ಮಾತನಾಡಿಸುತ್ತಾರೆ, ಫೋಟೊ ತೆಗೆಸಿಕೊಳ್ಳುತ್ತಾರೆ ಎಂದು ವಿವರಣೆ ನೀಡಿದೆ.
ʻʻಮುಖ್ಯಮಂತ್ರಿಗಳ ಮನೆಗೆ ಅನೇಕರು ಬಂದು ಹೋಗುತ್ತಾರೆ. ಅಲ್ಲಿ ಬಂದವರು ಸಿಎಂ ಹಾಗೂ ಅವರ ಕುಟುಂಬದ ಜೊತೆ ಫೋಟೋ ತೆಗೆಸಿಕೊಂಡು ಹೋಗುವುದು ಸಾಮಾನ್ಯ. ಸ್ಯಾಂಟ್ರೊ ರವಿ ಎಂಬಾತ ಕೂಡ ಅದೇ ರೀತಿ ಫೋಟೋ ತೆಗೆಸಿಕೊಂಡಿರಬಹುದುʼʼ ಎಂದು ಬಿಜೆಪಿ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ | Santro Ravi case | 1995ರಲ್ಲೇ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಸ್ಯಾಂಟ್ರೋ ರವಿ!