Site icon Vistara News

Santro Ravi case | ಸ್ಯಾಂಟ್ರೋ ರವಿ ಈಗ ಕೈದಿ ನಂಬರ್‌ 18894: ಜೈಲರ್‌ ಮಹೇಶ್‌ ಬೆಂಗಳೂರಿಗೆ ಶಿಫ್ಟ್‌

Santro jailor transfer

ಮೈಸೂರು: ಗುಜರಾತ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ಕುಖ್ಯಾತ ಕ್ರಿಮಿನಲ್‌ ಸ್ಯಾಂಟ್ರೋ ರವಿ‌ (Santro Ravi case) ಈಗ ಮೈಸೂರು ಕೇಂದ್ರೀಯ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಆತನಿಗೆ ಕೈದಿ ನಂಬರ್‌ 18894 ನೀಡಲಾಗಿದೆ. ಆತ ಪೊಲೀಸರಿಂದ ತಲೆಮರೆಸಿಕೊಂಡು ತಿರುಗಾಡಲು ಸಹಕಾರ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಸಹಚರರಾದ ರಾಮ್‌ಜೀಗೆ ೧೮೮96 ಹಾಗೂ ಸತೀಶ್ ಕುಮಾರ್‌ಗೆ ೧೮೮95 ಸಂಖ್ಯೆಯನ್ನು ನೀಡಲಾಗಿದೆ. ಕಳೆದ ಶನಿವಾರದಂದು ಇವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಅವರಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪೊಲೀಸರು ಅವರನ್ನು ಮರಳಿ ಪೊಲೀಸ್‌ ಕಸ್ಟಡಿಗೆ ಕೇಳಿದ್ದರು. ಆಗ ನಿರಾಕರಿಸಿದ್ದ ನ್ಯಾಯಾಧೀಶರು ಸೋಮವಾರ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು.

ಆರೋಪಿಗಳನ್ನು ಹೆಚ್ಚುವರಿ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ಸೋಮವಾರ ಕೋರ್ಟ್‌ಗೆ ಮನವಿ ಸಲ್ಲಿಸಲಿದ್ದಾರೆ. ಕೋರ್ಟ್‌ ಯಾವ ತೀರ್ಮಾನ ತೆಗೆದುಕೊಳ್ಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

ಜೈಲರ್‌ ವರ್ಗಾವಣೆ
ಈ ನಡುವೆ, ಸ್ಯಾಂಟ್ರೋ ರವಿ ಜೈಲು ಸೇರುತ್ತಿದ್ದಂತೆಯೇ ಕಾರಾಗೃಹ ಅಧೀಕ್ಷಕ ಮಹೇಶ್ ಕುಮಾರ್ ಎಸ್.ಜಿಗಣಿ ಅವರು ಕರ್ತವ್ಯಕ್ಕೆ ಗೈರುರಾಜರಾಗಿದ್ದಾರೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಜೈಲರ್‌ ಮಹೇಶ್‌ ಕುಮಾರ್

ಮಹೇಶ್‌ ಕುಮಾರ್‌ ಮೈಸೂರು ಜೈಲಿಗೆ ವರ್ಗಾವಣೆಯಾಗಿ ಬರುವಲ್ಲಿ ಸ್ಯಾಂಟ್ರೋ ರವಿ ಕೈವಾಡವಿದೆ ಎಂದು ಹೇಳಲಾಗಿದೆ. ಈ ಹಿಂದೆ ಮಹೇಶ್‌ ಕುಮಾರ್‌ ಮೈಸೂರು ಜಿಲ್ಲೆಗೆ ವರ್ಗಾವಣೆಯಾಗಿ ಬಂದ ಸಂದರ್ಭದಲ್ಲಿ ಸ್ಯಾಂಟ್ರೋ ರವಿ ಈ ವರ್ಗಾವಣೆಯನ್ನು ತಾನೇ ಮಾಡಿಸಿದ್ದು ಎಂಬರ್ಥದಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದ.

ಮಹೇಶ್‌ ಕುಮಾರ್‌ ವರ್ಗಾವಣೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರ ಅವರು ಹೊರಡಿಸಿರುವ ಆದೇಶವನ್ನು ಸ್ಯಾಂಟ್ರೋ ರವಿ ಹಾಕಿಕೊಂಡಿದ್ದ. ಆತನದೇ ಶಿಫಾರಸಿನ ಮೇರೆಗೆ ನಡೆದ ವರ್ಗಾವಣೆ ಇದಾಗಿದೆ ಎಂಬ ಸಂಶಯ ಮೊದಲಿನಿಂದಲೂ ದಟ್ಟವಾಗಿತ್ತು. ಹೀಗಾಗಿ ಆತ ಮೈಸೂರು ಜೈಲಿನಲ್ಲಿದ್ದರೆ ಸ್ಯಾಂಟ್ರೋ ರವಿಗೆ ರಾಜಾತಿಥ್ಯ ನೀಡಬಹುದು ಎಂಬ ಆತಂಕವೂ ಇತ್ತು.

ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿಗೆ ತಲೆಮರೆಸಿಕೊಳ್ಳಲು ಹಣ ಕೊಟ್ಟು ಸಹಕರಿಸಿದ್ದು ಲೀಸ್‌ ಅಧಿಕಾರಿಗಳೇ?

Exit mobile version