ಬೆಂಗಳೂರು: ಕುಖ್ಯಾತ ಕ್ರಿಮಿನಲ್ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ಏನು? ಎತ್ತ? ಆತನಿಂದ ತಾನು ಯಾವ ರೀತಿಯಾಗಿ ಮೋಸ ಹೋದೆ? ಅವನೊಂದಿಗೆ ಸಂಪರ್ಕ ಆಗಿದ್ದು ಯಾವಾಗ? ಎಂಬಿತ್ಯಾದಿ ಅಂಶಗಳ ಬಗ್ಗೆ ಆತನ ೨ನೇ ಪತ್ನಿ ವಿಸ್ತಾರ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಅಲ್ಲದೆ, ಆತನಿಂದ ಹೇಗೆ ದೌರ್ಜನ್ಯಕ್ಕೊಳಗಾಬೇಕಾಯಿತು ಎಂಬ ಸಂಗತಿಯನ್ನೂ ತಿಳಿಸಿದ್ದಾರೆ. ಕೆಲಸಕ್ಕೆ ಸೇರಿದ ಎರಡೇ ದಿನದಲ್ಲಿ ತನ್ನನ್ನು ಅತ್ಯಾಚಾರ ಮಾಡಿದ ಸಂಗತಿಯೂ ಸೇರಿದಂತೆ ಸ್ಯಾಂಟ್ರೋ ರವಿಯ ಇನ್ನಿತರ ಕರ್ಮಕಾಂಡವನ್ನು ಆತನ ಪತ್ನಿ ಎಳೆ ಎಳೆಯಾಗಿ ವಿವರಿಸಿದ್ದಾರೆ.
ತನ್ನನ್ನು ಫೈನಾನ್ಶಿಯರ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದ ಸ್ಯಾಂಟ್ರೋ ರವಿ, ಬಳಿಕ ತಾನು ಸರ್ಕಾರಿ ಉದ್ಯೋಗಿಗಳ ವರ್ಗಾವಣೆಯನ್ನೂ ಮಾಡಿಸುವುದಾಗಿ ಹೇಳಿಕೊಂಡಿದ್ದ. ಹೀಗೆ ಪರಿಚಯವಾಗಿ ಕೊನೆಗೆ ವಿವಾಹವಾಗಿದ್ದೆವು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಂದು ಕೆಲಸಕ್ಕೆ ಒಪ್ಪಿಕೊಳ್ಳುವಂತೆ ತನ್ನ ಮೇಲೆ ಒತ್ತಡ ತಂದಿದ್ದ. ಆದರೆ, ನಾನದಕ್ಕೆ ಒಪ್ಪದೇ ಇದ್ದಾಗ ಮಾರಣಾಂತಿಕವಾಗಿ ಹಲ್ಲೆಯನ್ನೂ ಮಾಡಿದ್ದ. ಈ ಘಟನೆಯಿಂದ ಬಹಳ ಬೇಸರವಾಗಿ ಆತನ ಸಂಪರ್ಕದಿಂದಲೇ ದೂರ ಉಳಿದುಬಿಟ್ಟಿದ್ದೆ. ಆದರೆ, ನನ್ನ ಮೇಲೆ ದರೋಡೆ ಕೇಸ್ ಫಿಟ್ ಮಾಡಿ ಜೈಲಿಗೂ ಕಳುಹಿಸಿಬಿಟ್ಟಿದ್ದ ಎಂಬ ಮಾಹಿತಿಯನ್ನು ಸ್ಯಾಂಟ್ರೋ ರವಿಯ ಎರಡನೇ ಪತ್ನಿ ತಿಳಿಸಿದ್ದಾರೆ.
ಕೆಲಸಕ್ಕೆ ಸೇರಿ ೨ನೇ ದಿನಕ್ಕೇ ಅತ್ಯಾಚಾರ, ಬ್ಲ್ಯಾಕ್‌ಮೇಲ್
ಸ್ಯಾಂಟ್ರೋ ರವಿ ಬಗ್ಗೆ ಇನ್ನೊಂದು ಆಘಾತಕಾರಿ ಅಂಶವನ್ನು ಆತನ ಪತ್ನಿ ಹೇಳಿದ್ದಾರೆ. ರವಿ ಜತೆ ಕೆಲಸಕ್ಕೆ ಸೇರಿದ ಎರಡನೇ ದಿನಕ್ಕೆ ಆತ ಅತ್ಯಾಚಾರ ಮಾಡಿದ್ದ. ಬಳಿಕ ನನ್ನ ಖಾಸಗಿ ಚಿತ್ರಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಸಹ ಮಾಡುತ್ತಿದ್ದ. ನೀನು ನನ್ನನ್ನ ಮದುವೆಯಾಗಬೇಕು, ಇಲ್ಲದಿದ್ದರೆ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತೇನೆ, ನಾಲ್ಕು ಜನರಿಗೆ ಹಂಚುತ್ತೇನೆ ಎಂದು ಹೆದರಿಸುತ್ತಾನೆ. ಜೀವ ಬೆದರಿಕೆ ಒಡ್ಡುತ್ತಾನೆ. ಅಲ್ಲದೆ, ತನಗೆ ಇನ್ನೂ ವಿವಾಹ ಆಗಿಲ್ಲ ಎಂದೂ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹಾಗೂ ಭಯದಿಂದ ನಾನು ಆತನನ್ನು ವಿವಾಹವಾಗಬೇಕಾಯಿತು. ನನಗೆ ಬೇರೆ ಆಯ್ಕೆಯೂ ಇರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | ISRO Spying Case | ನಂಬಿ ನಾರಾಯಣನ್ ವಿರುದ್ಧದ ಆರೋಪ ಸುಳ್ಳು, ಇದು ಜಾಗತಿಕ ಪಿತೂರಿ, ಕೇರಳ ಹೈಕೋರ್ಟ್‌ಗೆ ಸಿಬಿಐ ಮಾಹಿತಿ
ಆತನ ಇನ್ನೊಂದು ವಿವಾಹದ ಬಗ್ಗೆ ಗೊತ್ತಾಗಿದ್ದೇ ಈಗ!
ಆತನಿಂದ ಪ್ರತ್ಯೇಕವಾದ ಮೇಲೆ ಅನೇಕ ತೊಂದರೆಯನ್ನು ಕೊಟ್ಟಿದ್ದ. ಬಳಿಕ ನಾನು ಒಡನಾಡಿ ಸಂಸ್ಥೆಯ ಆಶ್ರಯವನ್ನು ಪಡೆದುಕೊಂಡೆ. ಇಲ್ಲಿ ಸೇರಿದ ಮೇಲೆಯೇ ಸ್ಯಾಂಟ್ರೋ ರವಿಗೆ ಈ ಮೊದಲೇ ವಿವಾಹ ಆಗಿತ್ತು ಎಂಬ ಸಂಗತಿ ನನಗೆ ಗೊತ್ತಾಗಿರುವುದು ಎಂದು ಪತ್ನಿ ಹೇಳಿಕೊಂಡಿದ್ದಾರೆ.
ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಿದ್ದ
೨೦೧೯ರ ಫೆಬ್ರವರಿ ತಿಂಗಳಿನಲ್ಲಿ ಪತ್ರಿಕೆಯೊಂದರಲ್ಲಿ “ವಾಂಟೆಡ್ ಫಾರ್ ಎ ಫೈನಾನ್ಸ್ ಕಂಪನಿ, ಫೈನಾನ್ಸ್ ಅಸಿಸ್ಟೆಂಟ್” ಎಂಬ ಜಾಹೀರಾತನ್ನು ಹಾಕಲಾಗಿತ್ತು. ಅದನ್ನು ನೋಡಿ ಅದರಲ್ಲಿರುವ ನಂಬರ್‌ಗೆ ಕರೆ ಮಾಡಿದಾಗ ಇಂಟರ್ವ್ಯೂ ಇರಲಿದೆ. ಅದಕ್ಕೆ ಹಾಜರಾಗಿ ಎಂದು ಹೇಳುತ್ತಾನೆ. ಅಲ್ಲಿಗೆ ಹೋದಾಗ ನಾನು ಕಾರನ್ನು ಅಡವಾಗಿಟ್ಟುಕೊಂಡು ಫೈನಾನ್ಸ್ ವ್ಯವಹಾರವನ್ನು ಮಾಡುತ್ತೇನೆ ಎಂದು ರವಿ ಹೇಳಿಕೊಳ್ಳುತ್ತಾನೆ. ಜತೆಗೆ ನನ್ನ ಹಾಗೂ ನನ್ನ ಕುಟುಂಬ ಮತ್ತು ಜಾತಿ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳುತ್ತಾನೆ. ಬಳಿಕ ಫಲಿತಾಂಶವನ್ನು ಹೇಳುತ್ತೇನೆ ಎಂದು ಹೇಳಿದವನು, ನಾನು ಮನೆಗೆ ಬಂದು ಅರ್ಧ ಗಂಟೆಯಲ್ಲಿ ಕರೆ ಮಾಡಿ, ನೀನು ಕೆಲಸಕ್ಕೆ ಆಯ್ಕೆಯಾಗಿದ್ದೀಯ ಎಂದು ಹೇಳುತ್ತಾನೆ. ಕೆಲಸಕ್ಕೆ ಸೇರಿದ ಎರಡನೇ ದಿನಕ್ಕೆ ನನ್ನ ಮೇಲೆ ಅತ್ಯಾಚಾರ ಎಸಗುತ್ತಾನೆ ಎಂದು ೨ನೇ ಪತ್ನಿ ಆರೋಪಿಸಿದ್ದಾರೆ.
ಸ್ಯಾಂಟ್ರೋ ರವಿ ತನ್ನ ಜತೆಗೆ ನಡೆದುಕೊಂಡ ಬಗೆ ಏನು? ಈತನ ಈ ಕೃತ್ಯದ ಬಗ್ಗೆ ಕುಟುಂಬದವರಿಗೆ ಹೇಳಿಕೊಳ್ಳಲು ಏಕೆ ಹಿಂದೇಟು ಹಾಕಿದೆ? ೨೦೧೯ರ ಮೇ ೮ರಂದು ಸ್ಯಾಂಟ್ರೋ ರವಿ ಜತೆ ವಿವಾಹವಾಗಿದ್ದು ಹೇಗೆ? ತನ್ನನ್ನು ಹೇಗೆ ಕತ್ತಲಿನಲ್ಲಿಟ್ಟಿದ್ದ ಎಂಬಿತ್ಯಾದಿ ವಿಷಯಗಳ ಬಗ್ಗೆ ಆತನ ಎರಡನೇ ಪತ್ನಿ ವಿಸ್ತೃತವಾಗಿ ಮಾಹಿತಿ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಈ ವಿಡಿಯೊದಲ್ಲಿದೆ.
ಇದನ್ನೂ ಓದಿ | Lovers suicide | ಪ್ರೀತಿಗೆ ಮನೆಯಲ್ಲಿ ವಿರೋಧ: ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು