Site icon Vistara News

Santro Ravi Case | ಪೊಲೀಸರಿಂದ ತನಿಖಾ ವರದಿ ಪಡೆದ ಸಿಐಡಿ: ರವಿ 2ನೇ ಪತ್ನಿಯಿಂದ ಇನ್ನೊಂದು ದೂರು

Santro ravi new photo

ಬೆಂಗಳೂರು/ಮೈಸೂರು: ಕುಖ್ಯಾತ ಕ್ರಿಮಿನಲ್‌ ಸ್ಯಾಂಟ್ರೋ ರವಿ (Santro Ravi Case) ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಿರುವ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಇದುವರೆಗಿನ ತನಿಖಾ ಮಾಹಿತಿಯನ್ನು ಮೈಸೂರು ಪೊಲೀಸರಿಂದ ಪಡೆದುಕೊಂಡಿದ್ದಾರೆ.

ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ಎರಡನೇ ಪತ್ನಿ ದಾಖಲಿಸಿದ ದೂರಿನ ಆಧಾರದಲ್ಲಿ ಇದುವರೆಗೆ ಪೊಲೀಸರು ನಡೆಸಿದ ತನಿಖೆಯ ಎಲ್ಲ ವಿವರಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ಪ್ರಕರಣದ ತನಿಖೆಯನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ ಬೆನ್ನಿಗೇ ಸಿಐಡಿ ಡಿಜಿ ಹಿತೇಂದ್ರ ಅವರು ಮೈಸೂರು ಪೊಲೀಸ್‌ ಕಮಿಷನರ್‌ ಅವರನ್ನು ಸಂಪರ್ಕಿಸಿ ಇದುವರೆಗಿನ ಎಲ್ಲ ತನಿಖಾ ವಿವರಗಳನ್ನು ನೀಡುವಂತೆ ಸೂಚನೆ ನೀಡಿದ್ದರು. ಇದರ ಆಧಾರದಲ್ಲಿ ವರದಿಗಳನ್ನು ನೀಡಲಾಗಿದೆ.

ಡಿಜಿ ಸೂಚನೆ ಬೆನ್ನಲ್ಲೇ ಸಿಐಡಿ ಪೊಲೀಸರು ಮೈಸೂರಿಗೆ ತೆರಳಿ ತನಿಖಾ ವರದಿಯನ್ನು ಪಡೆದಿದ್ದಾರೆ. ಸ್ಯಾಂಟ್ರೋ ರವಿ ಪತ್ನಿ ಕೊಟ್ಟ ದೂರಿನನ್ವಯ ಇಷ್ಟು ದಿನ ನಡೆದ ತನಿಖೆಯ ವರದಿ, ಸ್ಯಾಂಟ್ರೋ ರವಿ ಪತ್ನಿಯ ಹೇಳಿಕೆಯನ್ನು ಸಿಐಡಿ ಪಡೆದುಕೊಂಡಿದೆ.

ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಸದ್ಯ ಮೈಸೂರು ಜೈಲಿನಲ್ಲಿದ್ದು, ಆತನನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅದಕ್ಕಾಗಿ ಅದು ಪ್ರತ್ಯೇಕವಾಗಿ ಕೋರ್ಟ್‌ಗೆ ಮನವಿ ಸಲ್ಲಿಸಬೇಕಾಗುತ್ತದೆ.

ತನಿಖಾ ನೇತೃತ್ವ ಯಾರದು?
ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದ ಸಿಐಡಿ ತಂಡ ಈಗಾಗಲೇ ವಿಜಯನಗರ ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆದಿದೆ. ತನಿಖಾ‌ಧಿಕಾರಿ ಎಸಿಪಿ ಶಿವಶಂಕರ್ ಅವರು ಎಲ್ಲ ಮಾಹಿತಿ ನೀಡಿದರು. ಸಿಐಡಿ ತಂಡದಲ್ಲಿ ಡಿವೈಎಸ್ಪಿ ಸೇರಿದಂತೆ ಇನ್ಸಪೆಕ್ಟರ್, ಪಿಎಸ್‌ಐಗಳು ಹಾಗೂ ಸಿಬ್ಬಂದಿ ಇದ್ದಾರೆ.

ಎರಡನೇ ಪತ್ನಿಯಿಂದ ಮತ್ತೊಂದು ದೂರು
ಈ ನಡುವೆ, ಸ್ಯಾಂಟ್ರೋ ರವಿಯ ವಿರುದ್ಧ ಸಂತ್ರಸ್ತ ಮಹಿಳೆ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ಬಾರಿ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ‌ ಎಫ್‌ಐಆರ್ ಆಗಿದ್ದು, ಚೆಕ್‌ ಬುಕ್ ಕಳವು, ನಾಲ್ಕು ಚೆಕ್ ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರು ದಾಖಲಾಗಿದೆ.

ಪತಿ ಸ್ಯಾಂಟ್ರೋ ರವಿ ಹಾಗೂ ಆರ್‌.ಆರ್.ನಗರದ ಮನೆ ಮಾಲೀಕ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ. ಸಹಿ ಮಾಡಿರುವ ನಾಲ್ಕು ಚೆಕ್‌ಗಳು ಅವರ ಕೈಯಲ್ಲಿದ್ದು, ದುರುಪಯೋಗದ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ. 2022ರ ಆಗಸ್ಟ್ 22ರಂದು ನಡೆದ ಘಟನೆ ಇದಾಗಿದ್ದು, ಘಟನೆ ಬಳಿಕ ದೂರು ನೀಡಿದರೂ ಯಾವುದೇ ಕ್ರಮ ಆಗದ ಬಗ್ಗೆ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | Santro Ravi case | ಸುಳ್ಳು ಕೇಸ್‌ ಹಾಕೋದ್ರಲ್ಲಿ ರವಿ Expert: ಮೊದಲ ಪತ್ನಿ ಕೊಲೆ ಬೆದರಿಕೆ ಹಾಕಿದ್ದಾಳೆಂದು FIR!

Exit mobile version