ಬೆಂಗಳೂರು: ಸ್ಯಾಂಟ್ರೋ ರವಿ ವಿರುದ್ಧದ ದಲಿತ ಮಹಿಳೆಯ ಅತ್ಯಾಚಾರ, ವಂಚನೆ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿಯ (Santro Ravi Case) ಎರಡನೇ ಪತ್ನಿಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ, ಸ್ಥಳ ಮಹಜರು ನಡೆಸಿದ್ದಾರೆ. ಡಿವೈಎಸ್‌ಪಿ ಅಂಜುಮಾಲ ನಾಯಕ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ.
ಸಿಐಡಿ ಕಚೇರಿಯಲ್ಲಿ ರವಿ 2ನೇ ಪತ್ನಿ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಶೇಷಾದ್ರಿಪುರಂನ ವಾಹಬ್ ಅಪಾರ್ಟ್‌ನಲ್ಲಿ ಸ್ಥಳ ಮಹಜರು ನಡೆಸಲಾಯಿತು. ಅಪಾರ್ಟ್ಮೆಂಟ್‌ನಲ್ಲಿ ಇರಿಸಿ ಗರ್ಭಪಾತ ಮಾಡಿಸಿದ್ದಾಗಿ ಸ್ಯಾಂಟ್ರೋ ರವಿ ಪತ್ನಿ ಆರೋಪ ಮಾಡಿದ್ದರು. ಹೀಗಾಗಿ ಮಹಿಳೆ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಯಿತು.
ಶೇಷಾದ್ರಿಪುರಂನ ವಾಹಬ್ ಅಪಾರ್ಟ್ಮೆಂಟ್‌ಗೆ ಸಿಐಡಿ ತಂಡ ತೆರಳಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಹೋಟೆಲ್ ಸನ್ಮಾನ್‌ನಲ್ಲಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು. ಹೋಟೆಲ್‌ನಲ್ಲೇ ಕುಳಿತು ಸ್ಯಾಂಟ್ರೋ ರವಿ ಡೀಲಿಂಗ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಕಲೆಹಾಕಲಾಗಿದೆ. ಸ್ಯಾಂಟ್ರೋ ರವಿ ಕರೆತರುತ್ತಿದ್ದ ಅಧಿಕಾರಿಗಳು ಯಾರು ಎಂಬುದರ ಬಗೆಗೂ ಸಿಐಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Santro Ravi case: ಸ್ಯಾಂಟ್ರೋ ರವಿ ಪತ್ನಿ ಕೊಟ್ಟಿದ್ದು ದೂರು ಮಾತ್ರ, 2ನೇ ಪತ್ನಿ ಅನ್ನೋದಕ್ಕೂ ರೆಕಾರ್ಡ್ ಇಲ್ವಾ?
ಶೇಷಾದ್ರಿಪುರಂ ವಹಾಬ್ ಅಲ್ಮಿಯಾದಲ್ಲಿ ಸ್ಯಾಂಟ್ರೋ ರವಿ ಮನೆ ಮಾಡಿ ಎರಡನೇ ಪತ್ನಿಯನ್ನು ತಂದಿರಿಸಿ, ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ. ನಂತರ ಆಕೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಗರ್ಭಪಾತಕ್ಕೆ ಒತ್ತಾಯ ಮಾಡಿದ್ದಾನೆ. ಬಳಿಕ ಒತ್ತಾಯಪೂರ್ವಕವಾಗಿ ಶೇಷಾದ್ರಿಪುರಂ ಟ್ರಿನಿಟಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಟ್ರಿನಿಟಿ ಆಸ್ಪತ್ರೆಯಲ್ಲಿ ಈ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಸತತ ಎರಡು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ ಅಧಿಕಾರಿಗಳು, ಸ್ಯಾಂಟ್ರೋ ರವಿ ಮಲಗುತ್ತಿದ್ದ ಕೋಣೆ ಸೇರಿ ಸಂತ್ರಸ್ತೆ ಸೂಚಿಸಿದ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಜತೆಗೆ ಸಂತ್ರಸ್ತೆ ನೀಡಿದ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಸ್ಯಾಂಟ್ರೋ ರವಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ.