ಕಲಬುರಗಿ: ಖತರ್ನಾಕ್ ಹಿನ್ನೆಲೆ ಹೊಂದಿರುವ ಮೈಸೂರಿನ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಡುವೆ ಕಿಡಿ ಹೊತ್ತಿಕೊಂಡಿದೆ.
ಯಾವುದೋ ಎಸಿಪಿ ವರ್ಗಾವಣೆಗೆ ೭೫ ಲಕ್ಷ ರೂಪಾಯಿ ವರ್ಗಾವಣೆಯ ಡೀಲ್ ಅದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಟ್ರೋ ರವಿ ೧೫ ಲಕ್ಷ ರೂಪಾಯಿ ತಂದಿಟ್ಟುಕೊಂಡು ಲೆಕ್ಕ ಮಾಡುತ್ತಿದ್ದಾನೆ. ಲೆಕ್ಕ ಮಾಡುತ್ತಿರುವ ಫೋಟೊವನ್ನು ತೆಗೆದವರು ಯಾರು? ಎಂದು ಎಚ್.ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದರು.
ಆರಗ ಜ್ಞಾನೇಂದ್ರ ಸವಾಲು
ಕುಮಾರಸ್ವಾಮಿ ಆರೋಪಕ್ಕೆ ಪ್ರತಿಯಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಆರಗ ಜ್ಞಾನೇಂದ್ರ ಅವರು, ಕುಮಾರಸ್ವಾಮಿಯವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಅತ್ಯಂತ ಬೇಜವಾಬ್ದಾರಿಯಿಂದ ಆರೋಪಗಳನ್ನು ಮಾಡಿದ್ದಾರೆ. ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಹೇಳುವುದರ ಮೂಲಕ ಅವರು ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ ಎಂದಿದ್ದಾರೆ.
ಕುಮಾರಸ್ವಾಮಿ ಮರು ಸವಾಲು
ಈ ನಡುವೆ, ಕಲಬುರಗಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರು ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ್ದು, ʻʻನಾನು ಯಾವುದೇ ಇಲ್ಲಸಲ್ಲದ ಆರೋಪವನ್ನು ಮಾಡಿಲ್ಲ. ಸ್ಯಾಂಟ್ರೋ ರವಿ ಹಲವು ಮಂತ್ರಿಗಳ ಜೊತೆ ಇರೋ ಪೋಟೊ ಬಂದಿದೆ. ಅದು ಸಾರ್ವಜನಿಕವಾಗಿ ಹರಿದಾಡುತ್ತಿದೆ, ನಾನು ಯಾವುದೇ ಬಿಡುಗಡೆ ಮಾಡಿಲ್ಲ. ಪೊಲೀಸ್ ಅಧಿಕಾರಿಗಳ ಬಳಿ ಹಣ ಪಡೆದು ವರ್ಗಾವಣೆ ದಂಧೆ ಮಾಡುತ್ತಿದ್ದಾನೆ. ರಾಜ್ಯದ ಮಂತ್ರಿಗಳಿಗೂ ಈ ವಿಚಾರ ಗೊತ್ತಿದೆ. ಅರಗ ಜ್ಞಾನೇಂದ್ರ ಮನೆಯಲ್ಲಿ ಹಣ ಎಣಿಕೆ ಮಾಡಿಲ್ಲದೆ ಹೊದ್ರೆ ಇನ್ನೆಲ್ಲಿ ಹಣ ಎಣಿಕೆ ಮಾಡಿರೋದುʼʼ ಎಂದು ಪ್ರಶ್ನೆ ಮಾಡಿದ್ದಾರೆ.
ʻʻಹಣ ಎಣಿಕೆ ಮಾಡಿರೋದರ ಬಗ್ಗೆ ತನಿಖೆ ಮಾಡಬೇಕು ಅಲ್ವಾ? ಕುಮಾರಕೃಪ ಅತಿಥಿ ಗೃಹದಲ್ಲಿ ದೇವರಾಜ್ ಜೊತೆ ವ್ಯವಹಾರ ನಡೆಸಿದ್ದಾನೆ.. ಸ್ಯಾಂಟ್ರೋ ರವಿಯನ್ನು ಕುಮಾರಕೃಪದಲ್ಲಿ ಯಾಕೆ ಬಿಟ್ಟುಕೊಳ್ಳಬೇಕಿತ್ತು?ʼʼ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ʻʻಒಬ್ಬ ವ್ಯಕ್ತಿ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿ ಎಲ್ಲಾ ಇಲಾಖೆಯಲ್ಲಿ ಟ್ರಾನ್ಸ್ಫರ್ ಮಾಡಿದ್ದಾನೆ. ಡಿಜಿಪಿ ಜೊತೆ ಒನ್ ಟೂ ಒನ್ ಟಚ್ ನಲ್ಲಿ ಇದ್ದಾನೆ ಅಂತಾ ಹೇಳ್ತಾನೆ. ಹೀಗಿರುವಾಗ ತನಿಖೆ ಮಾಡಿಸೋದಕ್ಕೆ ಅವರಿಂದ ಆಗುತ್ತಾ? ಪೊಲೀಸ್ ಇಲಾಖೆಯಿಂದ ಎಲ್ಲಿಂದ ತನಿಖೆ ಮಾಡಿಸ್ತಾರೆ..?ʼʼ ಎಂದು ಪ್ರಶ್ನಿಸಿರುವ ಎಚ್.ಡಿಕೆ., ಮುಖ್ಯಮಂತ್ರಿಯೇ ಸಾರ್ ಅಂತಾ ಹೇಳ್ತಾರೆ ಅಂತಾ ಹೇಳ್ತಾನೆ. ಹಾಗಿದ್ದ ಮೇಲೆ ಎಲ್ಲಿಂದ ನಿಷ್ಪಕ್ಷಪಾತವಾಗಿ ತನಿಖೆ ಆಗುತ್ತದೆ. ಹಾಗಾಗಿ ಹೈ ಕೋರ್ಟ್ ಸುಪರ್ದಿಯಲ್ಲಿ ತನಿಖೆ ನಡೆಸಲು ಆದೇಶ ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | Santro Ravi case | ಮಹಿಳಾ ವೈದ್ಯರನ್ನೂ ದುರ್ಬಳಕೆ ಮಾಡಿಕೊಳ್ತಿದ್ದ ಸ್ಯಾಂಟ್ರೋ: ಒಬ್ಬ ಡಾಕ್ಟರ್‌ರಿಂದ ಐದು ಜನರ ಗರ್ಭಪಾತ!