ಬೆಂಗಳೂರು: ತಲೆಮರೆಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್ ಸ್ಯಾಂಟ್ರೋ ರವಿ (Santro Ravi Case) ಬಂಧನವಾಗಿ ಜೈಲಿನಲ್ಲಿದ್ದಾನೆ. ಆದರೆ, ಕೇಸ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಈತನಿಗೆ ಹಣಕಾಸಿನ ಸಹಾಯ ಮಾಡಿದವರು ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳೆಂಬುವುದು ಬೆಳಕಿಗೆ ಬಂದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಪತ್ನಿ ಮೇಲೆ ಅತ್ಯಾಚಾರ, ದಬ್ಬಾಳಿಕೆ ನಡೆಸಿ ತಲೆಮರೆಸಿಕೊಂಡಿದ್ದ ವೇಶ್ಯಾವಾಟಿಕೆ, ವರ್ಗಾವಣೆ ದಂಧೆಕೋರ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ. ಆದರೆ, ಆತನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಏನೂ ಆಗುವುದಿಲ್ಲ ಎಂದು ಸುಮ್ಮನಿದ್ದ. ಆದರೆ, ಕೇಸ್ ಗಂಭೀರತೆ ಪಡೆಯುತ್ತಿದ್ದಂತೆ ಜನವರಿ 5ರಂದು ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಎಸ್ಐ ಒಬ್ಬರು ಸ್ಯಾಂಟ್ರೋ ರವಿಗೆ ತಲೆಮರೆಸಿಕೊಳ್ಳಲು ಸೂಚಿಸಿದ್ದರು ಎನ್ನಲಾಗಿದೆ.
ಯಾವಾಗ ಪೊಲೀಸ್ ಇಲಾಖೆಯಿಂದಲೇ ತಲೆಮರೆಸಿಕೋ ಎಂಬ ಮಾಹಿತಿ ಬರುತ್ತದೋ ಆಗ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ರವಿ ಪತ್ನಿಯ ವಿರುದ್ಧ ಕೇಸ್ ದಾಖಲಿಸಿ ಕರ್ತವ್ಯಲೋಪದ ಮೇಲೆ ಸಸ್ಪೆಂಡ್ ಆಗಿದ್ದ ಇನ್ಸ್‌ಪೆಕ್ಟರ್ ಅನ್ನು ಭೇಟಿ ಮಾಡಿದ್ದನಂತೆ. ಜನವರಿ ೩ ರಂದು ಕೇಸ್ ದಾಖಲಾಗಿದ್ದು, ಜನವರಿ ೫ರಂದು ಬೆಂಗಳೂರಿಗೆ ಬಂದ ಸ್ಯಾಂಟ್ರೋ ರವಿಗೆ ಇನ್ಸ್‌ಪೆಕ್ಟರ್ ೫ ಲಕ್ಷ ಹಣ ನೀಡಿ, ಐ20 ಕಾರಿನಲ್ಲಿ ಉಡುಪಿ ಬಳಿಯ ಹೆಬ್ರಿ ಚೆಕ್ ಪೋಸ್ಟ್ ಬಳಿಗೆ ಡ್ರಾಪ್ ನೀಡಿದ್ದರು.
ಇದನ್ನೂ ಓದಿ | Kidnap case | ಕೋರಮಂಗಲ ಕೇಸ್‌ಗೆ ಟ್ವಿಸ್ಟ್; ಹಣಕ್ಕಾಗಿ ಕಿಡ್ನ್ಯಾಪ್ ಮಾಡಿ, ಹೆಣ್ಣಿಗಾಗಿ ಒತ್ತೆ ಇರಿಸಿಕೊಂಡ ಖದೀಮರು
ಹೆಬ್ರಿ ಚೆಕ್ ಪೋಸ್ಟ್ ಬಳಿ ಡ್ರಾಪ್ ಪಡೆದ ಸ್ಯಾಂಟ್ರೋ ರವಿ ಅಲ್ಲಿಂದ ಕಾಸರಗೋಡು ಟ್ರಾನ್ಸ್‌ಫೋರ್ಟ್‌ನಲ್ಲಿ ನೇರವಾಗಿ ಕೊಚ್ಚಿಗೆ ತಲುಪಿದ್ದ. ಅಲ್ಲಿ ಕೊರಿಯರ್ ಕಂಪನಿಯ ಉದ್ಯಮಿ ರಾಮ್‌ಜಿಯನ್ನು ರವಿ ಸಂಪರ್ಕಿಸಿ ೨ ಲಕ್ಷ ರೂಪಾಯಿ ನೀಡಿದ್ದ. ತಾನು ತಲೆಮರೆಸಿಕೊಳ್ಳಲು ಸುರಕ್ಷಿತವಾದ ತಾಣದ ವ್ಯವಸ್ಥೆ ಮಾಡಲು ಸೂಚಿಸಿ, ಅಲ್ಲಿಂದ ಹುಂಡೈ ವೆನ್ಯೂ ಕಾರು ವ್ಯವಸ್ಥೆ ಮಾಡಿಕೊಂಡು ಕೊಚ್ಚಿಯಿಂದ ಎಸ್ಕೇಪ್ ಆಗಿದ್ದ.
ಒಂದು ಕಡೆ ಪೊಲೀಸರು ಸ್ಯಾಂಟ್ರೋ ರವಿ ಬಂಧನಕ್ಕೆ ಶೋಧ ನಡೆಸುತ್ತಿದ್ದರೆ, ಅದೇ ತಂಡದಲ್ಲಿದ್ದ ಕೆಲವರು ರವಿಗೆ ಪೊಲೀಸರ ಕಾರ್ಯಾಚರಣೆ ಬಗ್ಗೆ ಮಾಹಿತಿ ರವಾನಿಸುತ್ತಿದ್ದರಂತೆ. ಹೀಗಾಗಿ ರವಿ ಕೊಚ್ಚಿಯಿಂದಲೂ ಎಸ್ಕೇಪ್ ಆಗಿದ್ದ. ಮಾಹಿತಿ ಸೋರಿಕೆ ಆಗುತ್ತಿರುವುದನ್ನು ಅರಿತ ಪೊಲೀಸರು ರವಿ ಆಪರೇಷನ್ ರಹಸ್ಯವನ್ನು ಕೆಲವೇ ಕೆಲವು ಅಧಿಕಾರಿಗಳು ಆಪರೇಟ್ ಮಾಡಿ, ಕೊನೆಗೆ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಸದ್ಯ ತನಿಖೆ ಮುಂದುವರಿಸಿರುವ ಮೈಸೂರು ಮತ್ತು ವಿಜಯನಗರ ಪೊಲೀಸರು, ಆರೋಪಿ ಸ್ಯಾಂಟ್ರೋ ರವಿಯೊಂದಿಗೆ ಸಂಪರ್ಕದಲ್ಲಿದ್ದ 9 ಸಿಬ್ಬಂದಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸ್ಯಾಂಟ್ರೋ ನಾಪತ್ತೆಗೆ ಸಹಕರಿಸಿದ ಮೈಸೂರಿನ ಪಿಎಸ್ಐ ಹಾಗೂ ಬೆಂಗಳೂರಿನಲ್ಲಿ ಅಮಾನತಾಗಿರುವ ಇನ್ಸ್‌ಪೆಕ್ಟರ್ ಅನ್ನು ವಿಚಾರಣೆಗೊಳಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಕೇವಲ ಮೈಸೂರು, ವಿಜಯನಗರ ಠಾಣೆಗೆ ಮೀಸಲಾಗುತ್ತಾ ತನಿಖೆ?
ವೇಶ್ಯಾವಾಟಿಕೆ, ವರ್ಗಾವಣೆ ದಂಧೆಕೋರ ಸ್ಯಾಂಟ್ರೋ ರವಿ ಸದ್ಯ ಮೈಸೂರು ಜೈಲಿನಲ್ಲಿದ್ದಾನೆ. ಈತನ ವಿರುದ್ಧ ಕೇವಲ ಮೈಸೂರು, ವಿಜಯನಗರ ಠಾಣೆಗಳಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅಲ್ಲಿನ ಠಾಣೆಗಳಿಗೆ ಮಾತ್ರ ತನಿಖೆ ಮೀಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸದ್ಯ ಬೆಂಗಳೂರು ಸಿಸಿಬಿ ಪೊಲೀಸರು ಸ್ಯಾಂಟ್ರೋ ರವಿಯನ್ನು ವಶಕ್ಕೆ ತೆಗೆದುಕೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ.
ರವಿ ವಿರುದ್ಧ ಕೇವಲ ಆರೋಪಗಳಿವೆ ಹೊರತು, ಬೆಂಗಳೂರಿನಲ್ಲಿ ಯಾವುದೇ ಕೇಸ್‌ಗಳಿಲ್ಲ. ಈತ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿತ್ತೇ ವಿನಾ, ಎಲ್ಲೂ ದಂಧೆಯಲ್ಲಿ ಸಿಕ್ಕಿ ಬಿದ್ದಿಲ್ಲ. ಇನ್ನು ವರ್ಗಾವಣೆ ದಂಧೆ ಬಗ್ಗೆ ಮಾಹಿತಿ ಕಲೆ ಹಾಕಬಹುದೇ ಹೊರತು ಸಾಕ್ಷಿಗಳು ಕಲೆಹಾಕುವುದಕ್ಕೆ ಸಾಧ್ಯವಿಲ್ಲ ಎನ್ನಲಾಗಿದೆ.
ಇನ್ನು ವರ್ಗಾವಣೆ ಮಾಡಿಸಿಕೊಂಡು ಲಾಭ ಪಡೆದಿದ್ದರೂ ಯಾರೂ ಮುಂದೆ ಬಂದು ತಾನು ಇವನಿಂದ ವರ್ಗಾವಣೆ ಮಾಡಿಸಿಕೊಂಡಿದ್ದೆ ಎಂದು ಹೇಳುವುದಿಲ್ಲ. ಸಿಡಿಆರ್ ಮೂಲಕ ಸ್ಯಾಂಟ್ರೋ ರವಿಯೊಂದಿಗೆ ಯಾರ‍್ಯಾರು ಸಂಪರ್ಕದಲ್ಲಿದ್ದರು ಎಂಬುದು ಬೆಳಕಿಗೆ ಬರುತ್ತದೆಯೇ ಹೊರತು, ಸಾಕ್ಷಿ ಕಲೆಹಾಕಲು ಸಾಧ್ಯವಿಲ್ಲ.
ಇದನ್ನೂ ಓದಿ | Murder Case | ಮಾವನ ಸಂಸಾರ ಸರಿಪಡಿಸಲು ಮಾತುಕತೆಗೆ ಕರೆದ ಅಳಿಯ; ಎಣ್ಣೆ ಗಲಾಟೆಯು ಕೊಲೆಯಲ್ಲಿ ಅಂತ್ಯ