ಮೈಸೂರು: ಹಲವು ರೀತಿಯ ಕ್ರಿಮಿನಲ್ ಚಟುವಟಿಕೆಗಳ ಮೂಲಕ ಸದ್ದು ಮಾಡುತ್ತಿರುವ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ಕ್ರಿಮಿನಲ್ ಕೇಸ್ ಹಾಕೋದ್ರಲ್ಲಿ ಭಾರಿ ಚಾಲಾಕಿ ಎನ್ನುವುದು ಹಲವು ಪ್ರಕರಣಗಳಲ್ಲಿ ಬಯಲಾಗಿದೆ. ತನ್ನ ಎರಡನೇ ಪತ್ನಿ ಮತ್ತು ಆಕೆಯ ತಂಗಿ ವಿರುದ್ಧ ದರೋಡೆ ಕೇಸ್ ಹಾಕಿದ್ದ ಆತ ಮೊದಲ ಪತ್ನಿ ವಿರುದ್ಧ ಕೊಲೆ ಕೇಸು ದಾಖಲಿಸಿದ್ದ!
ತನ್ನ ಕೃತ್ಯಗಳಿಗೆ ಯಾರೆಲ್ಲ ಅಡ್ಡ ಬರ್ತಾರೋ ಅವರನ್ನೆಲ್ಲ ಕ್ರಿಮಿನಲ್ ಕೇಸ್ ಹಾಕಿಸಿ ಬಾಯಿ ಮುಚ್ಚಿಸುವುದು ಅವನ ಖಯಾಲಿ. ಅದಕ್ಕಾಗಿ ಅವನು ಪೊಲೀಸ್ ಅಧಿಕಾರಿಗಳನ್ನೇ ಬಳಸಿಕೊಳ್ಳುತ್ತಿದ್ದ. ಅವನ ಮಾತು ನಂಬಿ ಎರಡನೇ ಪತ್ನಿ ಮತ್ತು ನಾದಿನಿ ಮೇಲೆ ಕೇಸು ಹಾಕಿದ್ದ ಕಾಟನ್ ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಈಗ ಸಿಕ್ಕಿಬಿದ್ದಿದ್ದಾನೆ.
ಆಸ್ಪತ್ರೆಗೆ ದಾಖಲಾದ ಪ್ರವೀಣ್
ಸ್ಯಾಂಟ್ರೋ ರವಿ ಮಾತು ಕೇಳಿ ಎರಡನೇ ಪತ್ನಿ ಮತ್ತು ನಾದಿನಿ ವಿರುದ್ಧ ಪ್ರವೀಣ್ ದರೋಡೆ ಪ್ರಕರಣ ದಾಖಲಿಸಿದ್ದರು. ತೀವ್ರ ತನಿಖೆಯ ನಂತರ ಇದೊಂದು ಸುಳ್ಳು ಕೇಸು ಎನ್ನುವುದು ಸಾಬೀತಾಯಿತು. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರ ವರದಿ ಆಧಾರದಲ್ಲಿ ಪ್ರವೀಣ್ ಅವರನ್ನು ಅಮಾನತು ಮಾಡಲಾಗಿತ್ತು. ಈ ನಡುವೆ ಪ್ರಕರಣವನ್ನು ಸಿಸಿಬಿ ತನಿಖೆಗೆ ನೀಡಲಾಗಿತ್ತು.
ಪ್ರಕರಣ ಸಿಸಿಐ ಕೈಗೆ ಹೋಗುತ್ತಿದ್ದಂತೆಯೇ ಬಂಧನ ಭೀತಿಗೆ ಒಳಗಾದ ಪ್ರವೀಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ಸ್‌ಪೆಕ್ಟರ್ ಪ್ರವೀಣ್ ತಪ್ಪು ಮಾಡಿದ್ದಾರೆಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ಡಿಸಿಪಿ ವರದಿ ನೀಡಿದ್ದರು. ಈಗ ಬಂಧನ ಭೀತಿ ಎದುರಾಗಿದೆ.
ಮೊದಲ ಹೆಂಡತಿ ಮೇಲೂ ಕೇಸು!
ಸ್ಯಾಂಟ್ರೋ ರವಿ ೨೦೧೯ರಲ್ಲಿ ತನ್ನ ಮೊದಲ ಪತ್ನಿ ವಿರುದ್ಧವೂ ಕೇಸು ದಾಖಲಿಸಿದ್ದು ಈಗ ಬಯಲಾಗಿದೆ. ಆಕೆಯ ಮೇಲೆ ಕೊಲೆ ಯತ್ನವೇ ದಾಖಲಾಗಿತ್ತು.
ʻʻನನ್ನ ಪತ್ನಿಯ ಮೊಬೈಲ್ ಅಸಭ್ಯ ಸಂದೇಶ ಬಂದಿತ್ತು. ಅದನ್ನು ಪ್ರಶ್ನೆ ಮಾಡಿದ್ದೆ. ಆಗ ಆಕೆ ಜಗಳವಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ಅಂದು ಸ್ಯಾಂಟ್ರೋ ರವಿ ದೂರು ನೀಡಿದ್ದ. ಪೊಲೀಸರು ಆತನ ಮಾತು ಕೇಳಿ ಎಫ್‌ಐಆರ್ ಕೂಡಾ ದಾಖಲಿಸಿದ್ದರು.
ಸಣ್ಣ ಪುಟ್ಟ ವಿಷಯಗಳಿಗೆಲ್ಲ ಆತ ಕೇಸು ದಾಖಲಿಸಿ ಬೆದರಿಸುತ್ತಿದ್ದ ಎನ್ನುವುದು ಇದರಿಂದ ಋಜುವಾತಾಗಿದೆ. ಬಳಿಕ ಆತ ಮೊದಲ ಹೆಂಡತಿ ಜತೆ ಚೆನ್ನಾಗಿಯೇ ಇದ್ದ ಎನ್ನಲಾಗಿದೆ.
ಇದನ್ನೂ ಓದಿ | Santro Ravi case | ಅವಳು 2ನೇ ಪತ್ನಿಯಲ್ಲ, 10 ಲಕ್ಷ ರೂ. ಸಾಲ ಪಡೆದು ಮರಳಿಸದೆ ಸುಳ್ಳು ಆರೋಪ ಎಂದ ರವಿ ವಕೀಲರು