ಬಳ್ಳಾರಿ: ನಗರದ ಬಂಡಿಹಟ್ಟಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಯಲಾಟದ ಸಾರಥಿ ಪಾತ್ರಧಾರಿ ಪಂಪಾಪತಿ (Sarathi Pampapathi) ಮತ್ತು ಪತ್ನಿ ದ್ಯಾವಮ್ಮ ಅವರು ಭಾನುವಾರ ಸಂಜೆ ಮೃತಪಟ್ಟಿದ್ದಾರೆ.
ಮನೆಯ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿ ತಾಕಿದ್ದರಿಂದ ಹೆಂಡತಿ ದ್ಯಾವಮ್ಮಗೆ ಮೊದಲು ವಿದ್ಯುತ್ ತಗುಲಿದೆ. ಗಂಡ ಪಂಪಾಪತಿ ಬಿಡಿಸಲು ಹೋದಾಗ ಇಬ್ಬರಿಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಬಯಲಾಟದ ಕಲೆಯಲ್ಲಿ ‘ಸಾರಥಿ’ ಪಾತ್ರದಿಂದ ಪಂಪಾಪತಿ ಅವರು ಈ ಭಾಗದಲ್ಲಿ ಮನೆ ಮಾತಾಗಿದ್ದರು. ನೂರಾರು ಬಯಲಾಟದಲ್ಲಿ ಸಾರಥಿ ಪಾತ್ರದಿಂದ ‘ಸಾರಥಿ ಪಂಪಾಪತಿ’ಯೆಂದು ಹೆಸರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕೌಲ್ ಬಜಾರ್ ಇನ್ಸ್‌ಪೆಕ್ಟರ್ ವಾಸುಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಮೃತ ದೇಹಗಳನ್ನು ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪಂಪಾಪತಿ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಚೋರುನೂರು ಕೊಟ್ರಪ್ಪ, ರಂಗಭೂಮಿ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ | ದುರಸ್ತಿ ಮಾಡುವಾಗ ವಿದ್ಯುತ್ ಸ್ಪರ್ಶ; ಕಂಬದ ಮೇಲೆಯೇ ಲೈನ್‌ಮನ್ ಸಾವು