ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸರ್ವೋದಯ ಸಮಾವೇಶದಲ್ಲಿ ಎಐಸಿಸಿಯ ಚುಕ್ಕಾಣಿ ಹಿಡಿದಿರುವ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಾವು ನಡೆದು ಬಂದ ಹಾದಿ ಬಗ್ಗೆ ಮೆಲುಕು ಹಾಕಿದ್ದಾರೆ. ಅಲ್ಲದೆ, ಸಂಘಟನೆ, ಸಿದ್ಧಾಂತ, ಸಂವಿಧಾನ, ಅಧಿಕಾರ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಮಾತುಗಳನ್ನಾಡಿದ್ದಾರೆ. ಪಕ್ಷ ಸೇರಿದ ತಕ್ಷಣ ಅಧಿಕಾರ ಕೇಳಬೇಡಿ, ಗುರಿ ಕಡೆಗೆ ಹೆಜ್ಜೆ ಇಡಿ ಹಂತ ಹಂತವಾಗಿ ಮೇಲೆ ಬನ್ನಿ ಎಂದು ಯುವಕರಿಗೆ ಕಿವಿ ಮಾತು ಹೇಳಿದ್ದಾರೆ. ಇದೇ ವೇಳೆ ನಮ್ಮ ಪಕ್ಷದ ಚಿಂತೆ ನಿಮಗೆ ಏಕೆ ಎಂದು ಗೃಹ ಸಚಿವ ಅಮಿತ್ ಷಾ ಅವರ ಕಾಲೆಳೆದಿದ್ದಾರೆ.
ಸ್ವಯಂ ಶಕ್ತಿಯಿಂದ ಮುಂದೆ ಬಂದರೆ ಎಲ್ಲರೂ ಗುರುತಿಸುತ್ತಾರೆ. ನಾನು ವಕೀಲ ವೃತ್ತಿ ಮಾಡುತ್ತಿದ್ದಾಗ ಕಾಂಗ್ರೆಸ್ ಇಬ್ಭಾಗ ಆಗಿತ್ತು. ಕಲಬುರಗಿಯಲ್ಲಿ ಅಧ್ಯಕ್ಷ ಇರಲಿಲ್ಲ. ಆಗ ಕಾಂಗ್ರೆಸ್ ನಾಯಕರ ಸಂಪರ್ಕ ಬೆಳೆಯಿತು. ಅಧ್ಯಕ್ಷ ಆಗಿ ಅಂತ ನಾಯಕರು ಕೇಳಿಕೊಂಡರು. ಇಂದಿರಾಗಾಂಧಿ ಮಾತ್ರ ಅಧಿಕಾರಕ್ಕೆ ಬರುತ್ತಾರೆ. ನೀವು ಮುಂದೆ ಬರಬೇಕು ಎಂದು ಪ್ರೋತ್ಸಾಹ ನೀಡಿದರು ಎಂದು ತಾವು ನಡೆದುಬಂದ ಹಾದಿಯನ್ನು ಮೆಲುಕು ಹಾಕಿದರು.
ಬಂದ ಕೂಡಲೇ ಮುಖ್ಯಮಂತ್ರಿ ಮಾಡಿ ಎನ್ನಬೇಡಿ
೩೫ ವರ್ಷದ ಒಳಗಿನ ಯುವಕರು ಸೇರಿ ಪಕ್ಷ ಸಂಘಟನೆ ಮಾಡಿದ್ದೇವೆ. ಎಂಎಲ್‌ಎ ಟಿಕೆಟ್ ನೀಡಿದರು ಗೆದ್ದು ಬಂದೆ. ಇಂದು ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಒಂದೇ ದಿನಕ್ಕೆ ನಾನು ಅಧ್ಯಕ್ಷ ಆಗಿಲ್ಲ. ಹಂತ ಹಂತವಾಗಿ ನಾನು ಬೆಳೆದು ಅಧ್ಯಕ್ಷ ಆಗಿದ್ದೇನೆ. ಈಗ ಪಕ್ಷ ಸೇರಿದ ತಕ್ಷಣ ಅಧಿಕಾರ ಬೇಕು ಎಂದು ಹೇಳುತ್ತಾರೆ. ಕೆಲವರು ಯಾವ ದಿನ ಪಕ್ಷಕ್ಕೆ ಬರುತ್ತಾರೋ ಅಂದೇ ಎಂಎಲ್‌ಎ ಆಗಬೇಕು. ಯಾವ ದಿನ ಬರುತ್ತಾರೋ ಅಂದೇ ಸಚಿವರಾಗಬೇಕು, ಅಂದೇ ಮುಖ್ಯಮಂತ್ರಿ ಆಗಬೇಕು. ಆಗಲೇ ಕೇಂದ್ರ ಮಂತ್ರಿ ಆಗಬೇಕು ಎಂದು ತುದಿಗಾಲಲ್ಲೇ ನಿಂತಿರುತ್ತಾರೆ. ಆದರೆ, ಗುರಿ ಇಟ್ಟು ಕೆಲಸ ಮಾಡಿ, ಮುಂದೆ ಬರುತ್ತೀರ ಎಂದು ಯುವಕರಿಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ | Ramulu Vs Siddu | ಕ್ಷೇತ್ರವಿಲ್ಲದೆ ಪರದೇಶಿಯಂತೆ ಓಡಾಡುತ್ತಿರುವ ಗಿರಾಕಿ ಸಿದ್ದರಾಮಯ್ಯ ಎಂದ ರಾಮುಲು
ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿ ಕೆಲಸ ಮಾಡಿ, ಖರ್ಚಿಗಾಗಿ ಕೆಲಸ ಮಾಡಬೇಡಿ. ಪಕ್ಷ ಸಿದ್ಧಾಂತ ನಂಬಿದವರು ಎಂದೂ ಪಕ್ಷ ಬಿಡುವುದಿಲ್ಲ. ಎಪ್ಪತ್ತು ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ನಮ್ಮನ್ನು ಕೇಳುತ್ತಾರೆ. ನಾವು ಏನೂ ಮಾಡದೇ ಹೋಗಿದ್ದರೆ ದೇಶ ಉಳಿಯುತ್ತಿರಲಿಲ್ಲ. ಕಾಂಗ್ರೆಸ್ ಈ ದೇಶಕ್ಕೆ ಬುನಾದಿ ಹಾಕಿ ಕೊಟ್ಟಿದೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಸಂವಿಧಾನ ಇದ್ದರೆ ಮಾತ್ರ ಮೋದಿ, ಅಮಿತ್ ಶಾ ಉಳಿಯುತ್ತಾರೆ. ಸಂವಿಧಾನ, ಪ್ರಜಾಪ್ರಭುತ್ವ, ದೇಶ ಉಳಿಯಬೇಕು. ಜನರನ್ನು ಒಗ್ಗಿಸಿ ಹೋರಾಟ ಮಾಡಬೇಕು. ಈ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಖರ್ಗೆ ಹೇಳಿದರು.
ಭಿನ್ನಾಭಿಪ್ರಾಯ ಬಿಡಿ- ಖರ್ಗೆ ಕಿವಿಮಾತು
ಪಕ್ಷ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ, ನಾಯಕರಾದವರು ಅದನ್ನು ದೊಡ್ಡದು ಮಾಡದೆ, ಪಕ್ಷಕ್ಕಾಗಿ ದುಡಿಯಬೇಕು. ಪಕ್ಷವನ್ನು ಅಧಿಕಾರಕ್ಕೆ ತರಬೇಕು. ನಾವು ಒಗ್ಗಟ್ಟಾಗಿ ಹೋರಾಡಬೇಕು ಎಂದು ಪಕ್ಷದ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ವೇಳೆ ಕಿವಿಮಾತು ಹೇಳಿದರು.
ಅಮಿತ್ ಷಾಗೆ ಖರ್ಗೆ ಪ್ರಶ್ನೆ
ನಮ್ಮ ಪಕ್ಷಕ್ಕೆ ಅವ್ವ ಮಕ್ಕಳ ಪಾರ್ಟಿ ಅಂತ ಈ ಅಮಿತ್ ಷಾ ಹೇಳುತ್ತಾರೆ. ಈ ಬಾರಿ ನಡೆದ ಎಐಸಿಸಿ ಚುನಾವಣೆಯಲ್ಲಿ ಗಾಂಧಿ ಕುಟುಂಬದವರು ಸ್ಪರ್ಧೆ ಮಾಡಿಲ್ಲ. ಆದರೂ ಷಾ ಮಾತನಾಡುವುದನ್ನು ಬಿಟ್ಟಿಲ್ಲ. ಅರ‍್ರೇ, ನಮ್ಮ ಪಾರ್ಟಿ ಚಿಂತೆ ನಿಮಗ್ಯಾಕಪಾ? ನಮ್ಮ ಪಾರ್ಟಿ ಚಿಂತೆ ನಮಗೇ ಬಿಡಿ. ನಾವು ಒಳ್ಳೇ ಶಿಕ್ಷಣ ಕೊಟ್ಟಿದ್ದೇವೆ. ಬೇರೆ ದೇಶಗಳಿಗೂ ಸಹಾಯ ಮಾಡಿರುವ ಶಕ್ತಿಯನ್ನು ಇಂದಿರಾ ಗಾಂಧಿಯವರು ನೀಡಿದ್ದಾರೆ. ವಿದೇಶ ನೀತಿಯನ್ನು ಮಾಡಿದ್ದೇ ಪಂಡಿತ್ ಜವಾಹರ್ ಲಾಲ್ ನೆಹರು ಅವರಾಗಿದ್ದಾರೆ. ಸುಮ್ಮನೇ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಖರ್ಗೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ | Sarvodaya Samavesha | ಬಂಡೆ ನಾನಲ್ಲ, ಮಲ್ಲಿಕಾರ್ಜುನ ಖರ್ಗೆ; ಡಿ.ಕೆ. ಶಿವಕುಮಾರ್ ಬಣ್ಣನೆ
ಖರ್ಗೆಗೆ ಬಲ ತುಂಬಲು ಈ ಸಮಾವೇಶ- ಡಿಕೆಶಿ
ರಾಜ್ಯದ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ. ಮಹಾತ್ಮಾ ಗಾಂಧೀಜಿ ಅವರು ಪ್ರಾರಂಭಿಸಿದ ಈ ಸರ್ವೋದಯ ಹೋರಾಟದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ವಾಸವನ್ನು ಇಟ್ಟಿದ್ದಾರೆ. ಇಂದು ಖರ್ಗೆ ಜತೆಗೆ ನಾವು-ನೀವೆಲ್ಲರೂ ಇದ್ದೇವೆ ಎಂಬ ಸಂದೇಶ ಕೊಡುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಕೆಶಿ ತಿಳಿಸಿದರು.
ಬಡವರಿಗೆ ಶಕ್ತಿ ತುಂಬಲು ಇರುವ ಬಂಡೆ
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಎಐಸಿಸಿ ಚುನಾವಣೆ ನಡೆಯಿತು. ಅವರ ಹೆಸರನ್ನು ಚುನಾವಣೆಗೆ ಸೂಚಿಸುವ ಭಾಗ್ಯ ನಮಗೆ ಸಿಕ್ಕಿತು. ಶೇಕಡಾ 90ರಷ್ಟು ಮತದಾರರು ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ನಿಂತಿದ್ದರು. ಭಾರತ್ ಜೋಡೋ ಯಾತ್ರೆ ಮುಗಿಯುವುದರೊಳಗೆ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾದರು. ಇಡೀ ರಾಷ್ಟಕ್ಕೆ ಶಕ್ತಿ ತುಂಬಲು ಅವರು ಬಂದಿದ್ದಾರೆ. ನಾನು ಕನಕಪುರದ ಬಂಡೆ ಅಲ್ಲ. ಇಡೀ ದೇಶದ ಜನರಿಗೆ, ಬಡವರಿಗೆ ಶಕ್ತಿ ತುಂಬಲು ನಿಂತಿರುವ ಖರ್ಗೆ ಅವರು ಬಂಡೆ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್ ಹೇಳಿದರು.
ಪಕ್ಷಕ್ಕೆ ನಿಷ್ಠೆ, ತ್ಯಾಗ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮಲ್ಲಿಕಾರ್ಜುನ ಖರ್ಗೆ. ಅವರ ತ್ಯಾಗದಿಂದಲೇ ಈ ಸ್ಥಾನ ಅವರಿಗೆ ದೊರೆತಿದೆ. ಅವರು ಹುಡುಕಿಕೊಂಡು ಹೋಗಿ ಅಧಿಕಾರ ಕೇಳಿದವರಲ್ಲ. ಅವರೊಂದಿಗೆ ನಾನು ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈಗ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈಗಲೂ ಅವರ ಜತೆಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಇದು ನನ್ನ ಪುಣ್ಯ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್: ಸಿದ್ದರಾಮಯ್ಯ