ಬೆಂಗಳೂರು: ಆಸ್ಟ್ರೇಲಿಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಹೊರದೇಶ ಘಟಕದ ಗೌರವ ಅಧ್ಯಕ್ಷರಾಗಿ ಸತೀಶ್ ಭದ್ರಣ್ಣ ನೇಮಕಗೊಂಡಿದ್ದಾರೆ. ಇವರನ್ನು ನೇಮಕ ಮಾಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಆದೇಶಿಸಿದ್ದಾರೆ.
“ಆಸ್ಟ್ರೇಲಿಯಾದಲ್ಲಿ ಕ್ರಿಯಾಶೀಲವಾಗಿ ಕನ್ನಡ ಪರ ಚಟುವಟಿಕೆಯಲ್ಲಿ ತೊಡಗುವ ಮೂಲಕ ಸತೀಶ್ ಭದ್ರಣ್ಣ ಅವರು ಕನ್ನಡ ನಾಡು-ನುಡಿಯ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಜವಾಬ್ದಾರಿ ಹೊತ್ತುಕೊಂಡಿರುವ ಅವರು ಕನ್ನಡ, ಕಲೆ- ಸಂಸ್ಕೃತಿ, ಸಾಹಿತ್ಯದ ಏಳಿಗೆಗೆ ಇನ್ನಷ್ಟು ಸೇವೆ ನೀಡಲಿದ್ದಾರೆ” ಎಂದು ಮಹೇಶ ಜೋಶಿ ಹೇಳಿದರು.
ಈ ಹಿಂದೆ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡಿಗರೆಲ್ಲರ ಪ್ರೀತಿಗೆ ಪಾತ್ರರಾಗಿದ್ದ ಚಂದ್ರ ಆರ್ಯ ಅವರನ್ನು ಕೆನಡಾ ಕಸಾಪ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದನ್ನೂ ಜೋಶಿ ಸ್ಮರಿಸಿದರು.
ಮಹೇಶ ಜೋಶಿ ಅವರ ಅಧ್ಯಕ್ಷಾವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಿಗೆ ತಿದ್ದುಪಡಿ ತಂದು ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸಲು ಅವಕಾಶ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿದೇಶಗಳಲ್ಲಿ ಘಟಕಗಳನ್ನು ಪ್ರಾರಂಭಿಸುತ್ತಿದೆ. ಕನ್ನಡಿಗರು ಹೆಚ್ಚಾಗಿರುವ ವಿದೇಶಿ ನೆಲದಲ್ಲಿ ಕಸಾಪ ಘಟಕ ಸ್ಥಾಪಿಸುವ ಮೂಲಕ ಪ್ರಪಂಚದಲ್ಲಿರುವ ಎಲ್ಲ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶ ಹೊಂದಿದೆ.
ಇದನ್ನೂ ಓದಿ | ಕೋಟಿ ಸದಸ್ಯತ್ವಕ್ಕೆ ಕಸಾಪ ಮೊದಲ ಹೆಜ್ಜೆ; ಆ್ಯಪ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ