Site icon Vistara News

Laxmi Hebbalkar: ಸತೀಶ್‌ ಜಾರಕಿಹೊಳಿ ಡಿಸಿಎಂ ಅಲ್ಲ ಸಿಎಂ ಆಗುವಷ್ಟು ಸಮರ್ಥರು, ಕಾಲ ಕೂಡಿ ಬರಲಿ: ಲಕ್ಷ್ಮಿ ಹೆಬ್ಬಾಳ್ಕರ್

laxmi hebbalkar and satish jarkiholi

ಬೆಳಗಾವಿ: ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಅವರು ಉಪ ಮುಖ್ಯಮಂತ್ರಿ (deputy Chief Minister) ಅಲ್ಲ, ಮುಖ್ಯಮಂತ್ರಿ (Chief Minister) ಆಗುವಷ್ಟು ಸಮರ್ಥರಿದ್ದಾರೆ. ಆದರೆ, ಅದಕ್ಕೆ ಕಾಲ ಕೂಡಿ ಬರಬೇಕು. ಇಂದಲ್ಲಾ ನಾಳೆ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ನೂತನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Laxmi Hebbalkar) ಹೇಳಿದರು.

ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ್ದು, ಮಾಧ್ಯಮದವರೊಂದಿಗೆ ಮಾತನಾಡಿ, ಸತೀಶ್‌ ಜಾರಕಿಹೊಳಿಗೆ ಡಿಸಿಎಂ ಹುದ್ದೆ ಕೈ ತಪ್ಪಿದ ಬಗ್ಗೆ ಕೇಳಿದ ಪ್ರಶ್ನೆಗೆ ಹೀಗೆ ಪ್ರತಿಕ್ರಿಯೆ ನೀಡಿದರು.

ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ

ಈಗ ತಾನೇ ಸಚಿವೆಯಾಗಿ ಪದಗ್ರಹಣ ಮಾಡಿದ್ದೇನೆ. ಅಧಿಕೃತವಾಗಿ ಇಲಾಖೆಗಳು ಘೋಷಣೆ ಆಗಬೇಕು. ಇಲಾಖೆಯ ಕುರಿತು ಅಧ್ಯಯನ‌ ನಡೆಸಿ ಮಾಡಬಹುದಾದ ಬದಲಾವಣೆ ಕುರಿತು ಹೇಳುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: New Parliament Building: ವಿಜಯಪುರದ ಸಾರಂಗ ಮಠದಲ್ಲೂ ಇದೆ ಚಿನ್ನದ ಸೆಂಗೋಲ್ ಹೋಲುವ ಧರ್ಮದಂಡ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ನನಗೆ ವಹಿಸಿದರೆ ಅಮೂಲ್ಯಾಗ್ರ ಬದಲಾವಣೆ ಮಾಡುತ್ತೇನೆ. ಇಲಾಖೆಯ ಬಗ್ಗೆ ಕೂಲಂಕುಷವಾಗಿ ಅರ್ಥ ಮಾಡಿಕೊಳ್ಳುತ್ತೇನೆ. ಸುಮಾರು ಅಂಗನವಾಡಿಗಳಿಗೆ ಸ್ವಂತ ಕಟ್ಟಡವೂ ಇಲ್ಲ. ಈ ಎಲ್ಲವನ್ನೂ ಸಹ ಅಧ್ಯಯನ ಮಾಡುತ್ತೇನೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಿಂದೆ ಭ್ರಷ್ಟಾಚಾರ ನಡೆದಿದ್ದರೆ ಅದರ ಬಗ್ಗೆ ತನಿಖೆ ಮಾಡಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ನಾನು ಪ್ರಮಾಣವಚನ ಸ್ವೀಕಾರ ಮಾಡಿ ಇನ್ನೂ 24 ಗಂಟೆ ಕಳೆದಿಲ್ಲ. ಆದರೆ, ಖಂಡಿತವಾಗಿಯೂ ಜನರು ಮೆಚ್ಚುವ ಹಾಗೆ ಎಲ್ಲರಿಗೂ ಒಳ್ಳೇ ಹೆಸರು ಬರುವ ಹಾಗೆ ಇಲಾಖೆಯನ್ನು ನಡೆಸುತ್ತೇವೆ ಎಂದು ಉತ್ತರಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ: ಸತೀಶ್‌ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಇಬ್ಬರು ಸಚಿವರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಜಿಲ್ಲೆಯಲ್ಲಿ ಅಸಮಾಧಾನ ಇದೆ. ಆದರೆ ಬೇರೆ ಬೇರೆ ಹುದ್ದೆ ಕೊಟ್ಟು ಅವರೆಲ್ಲರನ್ನೂ ಸಮಾಧಾನ ಮಾಡುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಬಂದ್ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಸ್ವಾಭಾವಿಕ ಮತ್ತು ಸಹಜ ಕೂಡಾ. ಹೊಸ ಸರ್ಕಾರ ಬಂದ ಮೇಲೆ ಹೀಗೆ ಮಾಡುವ ವಾಡಿಕೆ ಇದೆ. ಸಂಬಂಧಪಟ್ಟ ಮಂತ್ರಿಗಳು ಬಂದು ಗಮನಹರಿಸುತ್ತಾರೆ. ಜನಪರವಾಗಿರುವ ಯೋಜನೆಗಳನ್ನು ಮುಂದುವರಿಸುತ್ತೇವೆ. ಅನಾವಶ್ಯಕ ಇರುವ ಕೆಲಸಗಳನ್ನು ಬಂದ್ ಮಾಡುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಬಜರಂಗದಳ ಹಾಗೂ ಆರ್‌ಎಸ್ಎಸ್ ಬ್ಯಾನ್ ವಿಚಾರದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರಶ್ನಿಸಿದಾಗ, ಅಂತಹ ತರಾತುರಿ ಏನಿಲ್ಲ, ಉದಾಹರಣೆ ಕೊಟ್ಟಿದ್ದೇವೆ ಎಂದು ಸತೀಶ್‌ ಜಾರಕಿಹೊಳಿ ಹೇಳುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ಪ್ರಣಾಳಿಕೆಯಲ್ಲಿ ಬ್ಯಾನ್ ‌ಮಾಡುತ್ತೇವೆ ಎಂದು ಹೇಳಿಲ್ಲ. ಗದ್ದಲ ಮಾಡಿದರೆ ಮಾತ್ರ ಬ್ಯಾನ್‌ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ನಡೆಸುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸತೀಶ್‌ ಜಾರಕಿಹೊಳಿ, ಯಾರೇ ಇದ್ದರೂ ಕಾಂಗ್ರೆಸ್‌ನವರೇ ಇರುತ್ತಾರೆ. ಈ ಬಗ್ಗೆ ಫಾರ್ಮುಲಾ ಏನಾಗಿದೆಯೋ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Bandipur National Park: ಬಂಡೀಪುರವೀಗ ಫುಲ್‌ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್‌!

ಭವಿಷ್ಯದಲ್ಲಿ ಮತ್ತೊಂದು ಸಚಿವ ಸ್ಥಾನ ಜಿಲ್ಲೆಗೆ ಸಿಗುವ ಬಗ್ಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ, ಈಗಂತೂ ಎಲ್ಲವೂ ಭರ್ತಿಯಾಗಿದೆ. ನೀವು ನಮಗೆ ಟೇಕಾಫ್ ಆಗಿಲ್ಲ ಅಂತಿದ್ದಿರಿ. ಹೀಗಾಗಿ ನಾವು ಫುಲ್ ಟೇಕಾಫ್ ಆಗಿದ್ದೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಬಿಜೆಪಿಯವರು ನಮಗೆ ಟೈಂ ಕೊಡಬೇಕು. ಈಗಾಗಲೇ ಎಲ್ಲ ರೀತಿಯ ಕೆಲಸ ಪ್ರಾರಂಭ ಆಗಿದೆ. ಎಲ್ಲ ಭರವಸೆ ಈಡೇರಿಸಲು ನಮಗೆ ಟೈಂ ಕೊಡಬೇಕು ಎಂದು ಹೇಳಿದರು.

Exit mobile version