Site icon Vistara News

Next CM: ಮತ್ತೆ ಕೇಳಿಬಂದ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಕೂಗು; ಕಾಂಗ್ರೆಸ್‌ನಲ್ಲಿ ತಲ್ಲಣ

Satish jarkiholi

ಬೆಳಗಾವಿ: ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಕೈ ನಾಯಕರಿಗೆ ಹೈಕಮಾಂಡ್‌ ಸೂಚಿಸಿರುವ ಬೆನ್ನಲ್ಲೇ “ಸತೀಶ್ ಜಾರಕಿಹೊಳಿ ಮುಂದಿನ ಸಿಎಂ” (Next CM) ಎಂಬ ಕೂಗು ಕಾಂಗ್ರೆಸ್‌ ವಲಯದಲ್ಲಿ ಮತ್ತೆ ಕೇಳಿಬಂದಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿಶ್ವಾಸ್‌ ವೈದ್ಯ ಅವರು ಕಾರ್ಯಕ್ರಮವೊಂದರಲ್ಲಿ “ಮುಂದಿನ ಸಿಎಂ ಸತೀಶ್ ಜಾರಕಿಹೊಳಿ”‌ (Satish Jarkiholi to be next CM) ಹೇಳಿಕೆ ನೀಡಿದ್ದು, ಇದರಿಂದ ಕಾಂಗ್ರೆಸ್‌ನಲ್ಲಿ ತಲ್ಲಣ ಶುರುವಾಗಿದೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ದೀಪಾವಳಿ ಹಾಗೂ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಸವದತ್ತಿ ಶಾಸಕ ವಿಶ್ವಾಸ್‌ ವೈದ್ಯ ಅವರು, ಸತೀಶ್‌ ಜಾರಕಿಹೊಳಿ ಮುಂದಿನ ಸಿಎಂ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸವದತ್ತಿ ಶಾಸಕ ವಿಶ್ವಾಸ್‌ ವೈದ್ಯ

2028ಕ್ಕೆ ನಾನು ಸಿಎಂ ರೇಸ್‌ನಲ್ಲಿ ಇರುತ್ತೇನೆ. ಈ ಬಾರಿ ನಾನು ಸಿಎಂ ರೇಸ್‌ನಲ್ಲಿ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಈಗ ಅವರ ಆಪ್ತರಿಂದ ಸಿಎಂ ರೇಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಅವರ ಆಪ್ತ ಶಾಸಕ ವಿಶ್ವಾಸ್‌ ವೈದ್ಯ ಹೇಳಿರುವುದರಿಂದ ಪಕ್ಷದ ವಲಯದಲ್ಲಿ ಮುಂದಿನ ಸಿಎಂ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ | CT Ravi : ಎಚ್‌ಡಿಕೆ ಜತೆ ಸಿದ್ದರಾಮಯ್ಯ ಕೂಡಾ ದತ್ತಪೀಠಕ್ಕೆ ಬರಲಿ ಎಂದ ಸಿ.ಟಿ ರವಿ

ದಲಿತ ನಾಯಕರೂ ಕಾಂಗ್ರೆಸ್‌ನಲ್ಲಿ ಸಿಎಂ ಆಗಬಹುದು: ಎಂ. ಲಕ್ಷ್ಮಣ್

ಮಡಿಕೇರಿ: ಪ್ರತಿಯೊಬ್ಬರೂ ಮಂತ್ರಿ, ಮುಖ್ಯ ಮಂತ್ರಿಗಳಾಗುವ ಅವಕಾಶ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಸತೀಶ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗಬಹುದು. ದಲಿತ ನಾಯಕರೂ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳಾಗಬಹುದು ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಇಲ್ಲಿಯವರೆಗೆ ದೇಶದಲ್ಲಿ ಎಷ್ಟು ಜನರನ್ನು ಮುಖ್ಯಮಂತ್ರಿಗಳಾಗಿ ಮಾಡಿದ್ದಾರೆ. ಯಾವುದೇ ಉತ್ತಮ ಸ್ಥಾನಮಾನ ಕೊಡದೆ ಈ ಕಮ್ಯುನಿಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಎಲ್ಲಾ ಸಮುದಾಯಗಳನ್ನು ಗುರುತಿಸುತ್ತದೆ. ಸತೀಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಸೇರಿ ಎಲ್ಲರೂ ಕೂಡ ಸಿಎಂ ಆಗುತ್ತಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅವಕಾಶ ಮಾಡಿಕೊಡಲಿದೆ. ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವಾಗ ಉಳಿದ ಸಮುದಾಯದವರು ಬಿಜೆಪಿಗರಿಗೆ ಕಾಣಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Karnataka Electricity : ಜನವರಿವರೆಗೂ ವಿದ್ಯುತ್ ಸಮಸ್ಯೆ ಇಲ್ಲ ಎಂದ ಜಾರ್ಜ್! ಆನಂತರ..?

ಪಕ್ಷ ನಿರ್ಧಾರ ಮಾಡುತ್ತೆ ಎಂದ ಕೃಷ್ಣಬೈರೇಗೌಡ

ಬಳ್ಳಾರಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಯಾವ ಸಮಯಕ್ಕೆ ಯಾರು ಸಿಎಂ ಆಗುತ್ತಾರೆ ಎಂಬುವುದನ್ನು ಪಕ್ಷ ನಿರ್ಧಾರ ಮಾಡುತ್ತೆ. ಒಳ್ಳೆ ಆಡಳಿತ ನಡೆಸಲು ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಆ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕು. ಪಕ್ಷ, ಶಾಸಕರು ಸೇರಿ ಸಿಎಂ ಆಗಿ ಅಯ್ಕೆ ಮಾಡಲಾಗಿದೆ. ಮುಂದೆ ಯಾರನ್ನು ಸಿಎಂ ಮಾಡಬೇಕು ಎಂಬುವುದನ್ನು ಪಕ್ಷ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version