ಬೆಳಗಾವಿ: ರಾಹುಕಾಲ, ಹೊಸ ಕಾರ್ಯಗಳಿಗೆ ಸ್ಮಶಾನದಲ್ಲಿ ಚಾಲನೆ ಸೇರಿದಂತೆ ಹಿಂದು ಧರ್ಮದ ಕೆಲವು ಆಚರಣೆಗಳನ್ನು ಮಾಡುತ್ತಾ ಬಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಚುನಾವಣೆ ಪ್ರಚಾರಕ್ಕೆ ತಂದಿರುವ ಹೊಸ ವಾಹನವನ್ನು ಸ್ಮಶಾನದಲ್ಲಿ ಪೂಜೆ ಮಾಡಲಾಗುವುದು. ಬಳಿಕ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗುವುದು ಎಂದೂ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 11ರಿಂದ 20ರವರೆಗೆ ನಾಮಪತ್ರ ಸಲ್ಲಿಕೆ ದಿನವಾಗಿದೆ. ದಿನವೂ ರಾಹುಕಾಲ ಇರುತ್ತದೆ. ಆ ಸಮಯದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಇನ್ನು ಚುನಾವಣೆ ಪ್ರಚಾರಕ್ಕೆ ಎಂದೇ ಹೊಸ ವಾಹನವನ್ನು ತಂದಿದ್ದೇವೆ. ಸ್ಮಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುತ್ತೇವೆ. ಎರಡ್ಮೂರು ದಿನಗಳಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ನಾವು ಮಾಡೋದು ಸಂಪ್ರದಾಯದ ವಿರೋಧಿತನ ಆಗುವುದಿಲ್ಲ. ನಮ್ಮ ವಿಚಾರ ಅದು. ಈ ಕೆಲಸವನ್ನು ನಾವು ಇವತ್ತು ಮಾಡುತ್ತಿಲ್ಲ. ಮೂವತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ನಾವು ಹೋಗುತ್ತಿರುವ ದಾರಿಯನ್ನು ತೋರಿಸಿದ್ದು ಬುದ್ಧ, ಬಸವಣ್ಣ, ಅಂಬೇಡ್ಕರ್ ಆಗಿದ್ದಾರೆ. ನಮ್ಮ ಆಯ್ಕೆಯನ್ನು ನಮಗೆ ಬಿಡಿ, ಹೀಗೆ ಮಾಡಿ ಅಂದರೆ ಆಗೋದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Lokayukta Raid: ಮಾಡಾಳ್ ವಿರೂಪಾಕ್ಷಪ್ಪ ಈಗ ವಿಚಾರಣಾಧೀನ ಕೈದಿ ನಂಬರ್ 3411
ಈ ಸಲ ಕ್ಷೇತ್ರದಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಇಲ್ಲವಾದರೆ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ. ಅತಿ ಹೆಚ್ಚು ಅಂತರದಿಂದ ಗೆಲ್ಲಿಸಬೇಕೆಂಬುದು ನಮ್ಮ ಸ್ಲೋಗನ್ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ ಪಾಳೆಯದಲ್ಲಿ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ಪಾಲಿಟಿಕ್ಸ್
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಎರಡನೇ ಪಟ್ಟಿ ಬಿಡುಗಡೆಗೆ ದಿನಗಣನೆ ಆರಂಭವಾಗುತ್ತಿರುವಂತೆ ಅನೇಕ ಕ್ಷೇತ್ರಗಳಲ್ಲಿ ಸಾಮೂಹಿಕ ರಾಜೀನಾಮೆ, ಎಚ್ಚರಿಕೆ ಪಾಲಿಟಿಕ್ಸ್ ಆರಂಭವಾಗಿದೆ. ಅನ್ಯ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಡಬೇಡಿ. ಟಿಕೆಟ್ ಕೊಟ್ರೆ ನಾವು ಸಾಮೂಹಿಕ ರಾಜೀನಾಮೆ ಕೊಡ್ತೇವೆ ಎಂದು ಎಚ್ಚರಿಕೆ ಅನೇಕ ಕಡೆಗಳಿಂದ ಕೇಳಿಬರುತ್ತಿದೆ. ಪಕ್ಷದಲ್ಲಿ ದುಡಿದ ಹಾಗೂ ಸ್ಥಳೀಯರಿಗೆ ಟಿಕೆಟ್ ಕೊಡಬೇಕು. ಇಲ್ಲವಾದಲ್ಲಿ ಸಾಮೂಹಿಕ ರಾಜೀನಾಮೆ ಕೊಡ್ತೇವೆ ಎಂಬ ಖಡಕ್ ಎಚ್ಚರಿಕೆ ನೀಡಲಾಗುತ್ತಿದೆ.
ದಾಸರಹಳ್ಳಿ ಹಾಗೂ ಶಿವಮೊಗ್ಗ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಎಚ್ಚರಿಕೆ ಪಾಲಿಟಿಕ್ಸ್ ನಡೆಯುತ್ತಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್. ಎಂ. ರೇವಣ್ಣ ಹಾಗೂ ಧನಂಜಯ ಹೆಸರು ಮುನ್ನೆಲೆಗೆ ಬಂದಿದೆ. ಸ್ಥಳೀಯರಿಗೆ ಟಿಕೆಟ್ ಕೊಡಿ. ಧನಂಜಯ ಬಿಜೆಪಿಯಿಂದ ಬಂದವರುಮ ರೇವಣ್ಣನವರು ಕ್ಷೇತ್ರದವರೇ ಅಲ್ಲ, ಆದ್ದರಿಂದ ಅಲ್ಲಿ ಅವರಿಗೆ ಟಿಕೆಟ್ ಬೇಡ.
ಶಿವಮೊಗ್ಗದಲ್ಲಿ ಎಂಎಲ್‌ಸಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸೇರ್ಪಡೆಗೆ ಡಿಕೆಶಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅವರು ಬಂದರೆ ಅವರಿಗೆ ಟಿಕೆಟ್ ನೀಡಿಬಾರದು ಎಂದು ಮೂಲ ಕಾಂಗ್ರೆಸಿಗರಿಂದ ಎಚ್ಚರಿಕೆ ನೀಡಲಾಗುತ್ತಿದೆ. ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಲಿ. ನೀಡದಿದ್ದರೆ ನಾವು ಸಾಮೂಹಿಕ ರಾಜೀನಾಮೆ ಕೊಡ್ತೇವೆ ಎಂದಿದ್ದಾರೆ.
ಇದನ್ನೂ ಓದಿ: JDS Hassan: ಭಾನುವಾರವೇ ಹಾಸನ ಜೆಡಿಎಸ್ ಟಿಕೆಟ್ ನಿರ್ಧಾರ: ಸಭೆಗೆ ಆಹ್ವಾನಿಸಿದ ಎಚ್.ಡಿ. ದೇವೇಗೌಡ
ಟಿಕೆಟ್ ಕೈತಪ್ಪುವ ಆತಂಕ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ ಅಖಂಡ ಶ್ರೀನಿವಾಸ್ ಮೂರ್ತಿ ಮಾತುಕತೆ ನಡೆಸಿದರು. ಪುಲಕೇಶಿನಗರ ಕಾಂಗ್ರೆಸ್ ಶಾಸಕ ಶ್ರೀನಿವಾಸ ಮೂರ್ತಿ ಜತೆಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಸೇರಿ ಅನೇಕರು ಆಗಮಿಸಿದರು. ಕ್ಷೇತ್ರಿದಲ್ಲಿ ಶ್ರೀನಿವಾಸಮೂರ್ತಿ ಅವರಿಗೇ ಟಿಕೆಟ್ ನೀಡಬೇಕು ಎಂದು ನಿಯೋಗವು ಮನವಿ ಮಾಡಿತು.