ಬೆಳಗಾವಿ: ಎಲ್ಲ ಕ್ಷೇತ್ರಗಳಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳು ಇದ್ದಾರೆ. ಅಶೋಕ್ ಪೂಜಾರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದೆವು. ನಾನೊಬ್ಬನೇ ಅಲ್ಲ, ಎಲ್ಲರೂ ಹೇಳಿದ್ದೆವು. ಆದರೆ, ಅವರಿಗೆ ಸಿಕ್ಕಿಲ್ಲ. ನಾವು ಹೇಳಿದ ಕೆಲವರಿಗೆ ಟಿಕೆಟ್ ಸಿಕ್ಕಿದೆ, ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಅಂತಿಮವಾಗಿ ಪಕ್ಷದ (Karnataka Election) ನಿರ್ಧಾರವನ್ನು ಸ್ವಾಗತ ಮಾಡಲೇಬೇಕಾಗುತ್ತೆ, ಮಾಡುತ್ತೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನವನ್ನು ಹೊರಹಾಕಿದ್ದಾರೆ.
ಗೋಕಾಕ್ ಕ್ಷೇತ್ರದಲ್ಲಿ ಅಶೋಕ್ ಪೂಜಾರಿಗೆ ಕಾಂಗ್ರೆಸ್ ಟಿಕಿಟ್ ಕೈ ತಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಹಾಂತೇಶ್ ಕಡಾಡಿಗೆ ಯಾವ ಆಧಾರದ ಮೇಲೆ ಟಿಕೆಟ್ ಸಿಕ್ಕಿದೆ ಎಂಬುವುದು ನನಗೆ ಗೊತ್ತಿಲ್ಲ. ಅಶೋಕ್ ಪೂಜಾರಿಗೆ ಟಿಕೆಟ್ ಕೊಡುತ್ತೇವೆ ಎಂದು ಎಲ್ಲರೂ ಹೇಳಿದ್ದು ನಿಜ. ಆದರೆ ಅಂತಿಮವಾಗಿ ಅದು ಬದಲಾವಣೆ ಆಗಿದೆ. ಅಶೋಕ್ ಪೂಜಾರಿ ಜತೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಸೇರಿ ಸಂಧಾನ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಕೆಲವರು ಸಭೆ ಮಾಡಿಕೊಂಡು ಬರುತ್ತೇವೆ ಎಂದಿದ್ದಾರೆ. ಇನ್ನೆರಡು ದಿವಸಗಳಲ್ಲಿ ಎಲ್ಲವೂ ಸರಿಯಾಗಬಹುದು ಎಂದು ಹೇಳಿದರು.
ಗೋಕಾಕ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಜನರಿಗೆ ಚಿರಪರಿಚಿತ ಇಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಯಲ್ಲಿ ಅವರ ಹೆಸರು ಅಂತಿಮವಾಗಿದೆ. ಅದಕ್ಕೆ ಆಧಾರ, ಮೂಲ ಏನು ಎಂಬುವುದನ್ನು ದೆಹಲಿಯವರನ್ನೂ ಕೇಳುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಟಿಕೆಟ್ ಹಂಚಿಕೆಯಲ್ಲಿ ಸ್ಥಳೀಯ ನಾಯಕರ ಕಡೆಗಣನೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಕಡೆ ಸಮಸ್ಯೆಯಾಗಿಲ್ಲ. ಒಂದೆರಡು ಕಡೆ ಆಗಿದೆ ಅಷ್ಟೇ ಎಂದು ಹೇಳಿದರು. ಇದೇ ವೇಳೆ ಗೋಕಾಕ್ ಟಿಕೆಟ್ ವಿಚಾರದಲ್ಲಿ ಅಸಮಾಧಾನ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಸುಮಾರು ಕಡೆ ಕೇಳಿದ್ದೆವು, ಕೇಳಿದವರಿಗೆ ಕೊಡಬೇಕು ಅಂತೇನಿಲ್ಲ. ಜಿಲ್ಲೆಯಲ್ಲಿಯೂ ಕೇಳಿದ್ದೆವು, ಹೊರಗಡೆಯೂ ಕೇಳಿದ್ದೆವು. ಒಂದೊಂದು ಬಾರಿ ಬೇರೆಯವರಿಗೆ ಸಿಕ್ಕರೆ ಏನೂ ಮಾಡಕ್ಕಾಗಲ್ಲ. ಮಹಾಂತೇಶ ಕಡಾಡಿ ಕಾಂಗ್ರೆಸ್ ಸದಸ್ಯರಾಗಿದ್ದಾರೋ ಇಲ್ಲವೋ ಗೊತ್ತಿಲ್ಲ, ಟಿಕೆಟ್‌ಗೆ ಅರ್ಜಿಯಂತೂ ಸಲ್ಲಿಸಿದ್ದಾರೆ. ಸರ್ವೆ ಮಾಡಿ ಅವರನ್ನು ಪರಿಗಣಿಸಿರಬಹುದು ಎಂದು ಹೇಳಿದರು.
ಇದನ್ನೂ ಓದಿ | Inside Story: AICC ಅಧ್ಯಕ್ಷರಾದರೂ ಬದಲಾಗಲಿಲ್ಲ ಸೀನಿಯರ್ ಖರ್ಗೆ ʼಎಡ-ಬಲʼ ರಾಜಕಾರಣ
ಮಹಾಂತೇಶ ಕಡಾಡಿ ಪರ ಪ್ರಚಾರ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತ ಮಾಡುತ್ತೇನೆ. ನಾವು ಹೇಳದೇ ಇರುವವರಿಗೆ ಟಿಕೆಟ್ ಕೊಟ್ಟರೂ ಪ್ರಚಾರ ಮಾಡಲೇಬೇಕಾಗುತ್ತದೆ. ಇಲ್ಲಿ ಅಷ್ಟೇ ಅಲ್ಲ ಬೇರೆ ಕಡೆ ಕೂಡ ನಮ್ಮವರಿಗೆ ಸಿಕ್ಕಿಲ್ಲ, ಬೇರೆಯವರಿಗೆ ಸಿಕ್ಕಿದೆ. ಅವರೂ ನಮ್ಮವರೇ ಆಗಿದ್ದಾರೆ. ಹೀಗಾಗಿ ಅವರ ಪರ ಪ್ರಚಾರ ಮಾಡುತ್ತೇವೆ. ಏಪ್ರಿಲ್ 10ರ ಬಳಿಕ ಬಹುಶಃ ಉಳಿದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದು ಹೇಳಿದರು.
ಗೋಕಾಕ್ ಕ್ಷೇತ್ರದಲ್ಲಿ ಅಚ್ಚರಿಯ ಆಯ್ಕೆ
ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಈ ಬಾರಿ ಅಚ್ಚರಿ ಎಂಬಂತೆ ಮಹಾಂತೇಶ್ ಕಡಾಡಿ ಅವರಿಗೆ ಕೈ ಟಿಕೆಟ್ ನೀಡಲಾಗಿದೆ. ಇವರು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಹೋದರ ಸಂಬಂಧಿಯಾಗಿದ್ದಾರೆ. ಕ್ಷೇತ್ರದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಶೋಕ್ ಪೂಜಾರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎಲ್ಲ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಗೋಕಾಕ್ ಕ್ಷೇತ್ರದಿಂದ ಮಹಾಂತೇಶ್ ಕಡಾಡಿಗೆ ಟಿಕೆಟ್ ನೀಡಲಾಗಿದೆ.