ಬಾಗಲಕೋಟೆ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಬದಲಾವಣೆ ಚರ್ಚೆ ತಾರಕಕ್ಕೇರಿರುವ ಹೊತ್ತಿನಲ್ಲಿಯೇ ದಲಿತ ಸಿಎಂ ಕೂಗೊಂದು ಮತ್ತೆ ಎದ್ದಿದೆ. ಬಾಗಲಕೋಟೆಯ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ರಾಜನಹಳ್ಳಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ (Prasannaananda Swamiji) ಈ ಪ್ರಶ್ನೆಯನ್ನು ಮಾಡಿದ್ದು, ದಲಿತ ಸಿಎಂ (Dalit CM) ಯಾಕಾಗಾಬಾರದು ಎಂದು ಕೇಳಿದ್ದಾರೆ. ಅಲ್ಲದೆ, ಸಚಿವ ಸತೀಶ್ ಜಾರಕಿಹೊಳಿ (Minister Satish Jarkiholi) ಪರವಾಗಿ ಬ್ಯಾಟ್ ಬೀಸಿದ್ದಾರೆ.
ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ರಾಜನಹಳ್ಳಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಸತೀಶ ಜಾರಕಿಹೊಳಿ ಅವರಿಗೆ ಎಲ್ಲ ರೀತಿಯಲ್ಲಿ ನಾಡಿನ ಸಿಎಂ ಆಗಲು ಅರ್ಹತೆಗಳಿವೆ. ಅವರ ಬೆನ್ನಿಗೆ ನಾವೆಲ್ಲ ನಿಲ್ಲಬೇಕಿದೆ. ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು? ದಲಿತರು ಮತ ಬ್ಯಾಂಕ್ ಮಾತ್ರ ಆಗಿರಬೇಕಾ? ಸಿಎಂ ಹುದ್ದೆ ಕೆಲವರ ಸ್ವತ್ತಾ? ಯಾರಾದರೂ ಗುತ್ತಿಗೆ ಪಡೆದುಕೊಂಡಿದ್ದಾರಾ? ದಲಿತರು ಸಿಎಂ ಆಗಲಿ ಎನ್ನುವ ಔದಾರ್ಯ ಹೊಂದಿರದಿದ್ದರೆ ಹೇಗೆ? ಎಂದು ಗುಡುಗಿದ್ದಾರೆ. ಈ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿ ಎನ್ನುವ ಆಶಯವನ್ನು ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲೇ ಪ್ರಸನ್ನಾನಂದ ಸ್ವಾಮೀಜಿ ದಲಿತ ಸಿಎಂ ಪ್ರಸ್ತಾಪವನ್ನು ಮಾಡಿದ್ದಾರೆ.
ಎಲ್ಲವೂ ಕೂಡಿಬಂದಾಗ ಅವಕಾಶ: ಸತೀಶ್ ಜಾರಕಿಹೊಳಿ
ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ವಾಲ್ಮೀಕಿ ಸ್ಚಾಮೀಜಿ ಹಾಗೆ ಹೇಳಿದ್ದಾರೆ. ಅದರ ಜತೆಗೆ ಸಮಯ ಕಾಯಬೇಕೂ ಅಂತಾನೂ ಹೇಳಿದ್ದಾರೆ. ಅದಕ್ಕೆ ಪಕ್ಷ ಇದೆ, ಶಾಸಕರಿದ್ದಾರೆ ಎಲ್ಲವೂ ಕೂಡಿ ಬಂದಾಗ ಮಾತ್ರ ಅವಕಾಶ ಸಿಗುತ್ತದೆ. ನಮ್ಮ ಆಸೆ, ಸಮುದಾಯದ ಆಸೆ ಇರಬಹದು. ಅದು ಬೇರೆ ವಿಷಯ. ಇಲ್ಲಿ ಪಕ್ಷ ಬಹಳ ಮುಖ್ಯವಾಗುತ್ತದೆ. ಅದು ಬಹಳ ದೊಡ್ಡದು. ಪಕ್ಷದ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಅಸಮಾಧಾನ ಇಲ್ಲ
ಪಕ್ಷದಲ್ಲಿನ ಅಸಮಾಧಾನ ಶಮನಗೊಂಡಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ನಮ್ಮ ಪಕ್ಷದಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ. ಆಗುವಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾವುದೇ ಸಮಸ್ಯೆ ಬಂದರೂ ಮಾತುಕತೆ ಮೂಲಕ ಪರಿಹಾರ ಮಾಡಿಕೊಳ್ಳುತ್ತೇವೆ. ಆ ರೀತಿಯ ಘಟನೆ ಯಾವುದೂ ಆಗಿಲ್ಲ, ಹೈಕಮಾಂಡ್ ಮಾತನಾಡುವ ಮಾತೇ ಇಲ್ಲ. ಒಂದು ವೇಳೆ ಅಂಥದ್ದು ಏನಾದರೂ ಇದ್ದರೆ ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮಲ್ಲಿ ಮುಂಚೆಯೂ ಸರಿ ಇದೆ, ಈಗಲೂ ಸರಿಯಿದೆ ಎಂದು ಹೇಳಿದರು.
ಪಕ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೇಳಿಬರುತ್ತಿರವ ಚರ್ಚೆ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನೇ ಇರುತ್ತೇನೆ ಎಂದು ಹೇಳಿದ್ದಾರೆ. ಕಾದು ನೋಡಬೇಕು. ಸಂದರ್ಭ ಉದ್ಭವ ಆದಾಗ ನೋಡೋಣ ಎಂದು ಹೇಳಿದರು.
ಇದನ್ನೂ ಓದಿ: Congress Karnataka : ಡಿಕೆಶಿ ಸಿಎಂ ಆಗೋದರಲ್ಲಿ ಅನುಮಾನವೇ ಇಲ್ಲ ಎಂದ ಮತ್ತೊಬ್ಬ ಶಾಸಕ! ಹೈಕಮಾಂಡ್ ಮಾತಿಗೆ ಇಲ್ಲ ಬೆಲೆ
ನಮ್ಮಲ್ಲಿ ಯಾವುದೇ ಟೂರ್ ಇಲ್ಲ
ಸತೀಶ್ ಜಾರಕಿಹೊಳಿಯನ್ನು ಮಹಾರಾಷ್ಟ್ರದ ಅಜಿತ್ ಪವಾರ್‌ಗೆ ಹೋಲಿಸಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಆ ರೀತಿಯಲ್ಲಿ ಇಲ್ಲ, ನಮ್ಮ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಇದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವಿಸಲ್ಲ. ಯಾವುದೇ ಟೂರ್ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.