Site icon Vistara News

Karnataka Election 2023: ಯಮಕನಮರಡಿಯಲ್ಲಿ ಈ ಬಾರಿ ಸತೀಶ್‌ ಜಾರಕಿಹೊಳಿಗೆ ಬಿಜೆಪಿ ಶಾಕ್‌?

Satish Jarkiholi to face BJP shock this time in Yamakanamaradi Karnataka Election 2023 updates

ಯಮಕನಮರಡಿ: ಕಾಂಗ್ರೆಸ್‌ ಹಿರಿಯ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ (Satish Jarkiholi) ಅವರ ಬಿಗಿ ಹಿಡಿತ ಇದ್ದ ಯಮಕನಮರಡಿ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಪ್ರಬಲ ಪ್ರತಿರೋಧ ಕಂಡು ಬರುತ್ತಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ (Basavaraj Hundri) ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ.

ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿರುವ ಇವರಿಗೆ ಈ ಬಾರಿ ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹಿರಿಯ ನಾಯಕರು ಬಸವರಾಜ ಹುಂದ್ರಿ ಪರ ಸಕ್ರಿಯರಾಗಿ ಪ್ರಚಾರ ಮಾಡುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಸಂಪರ್ಕದಲ್ಲಿರುವುದು, ಎಲ್ಲರೊಂದಿಗೆ ಬೆರೆಯುವ ಸ್ವಭಾವ ಬಿಜೆಪಿ ಅಭ್ಯರ್ಥಿಯ ಪ್ಲಸ್‌ ಪಾಯಿಂಟ್‌ ಆಗಿದೆ. ಶತಾಯಗತಾಯ ಈ ಬಾರಿ ಸತೀಶ್‌ ಜಾರಕಿಹೊಳಿ ಅವರನ್ನು ಸೋಲಿಸಲೇಬೇಕು ಎಂಬ ಉದ್ದೇಶದಿಂದ ಬಿಜೆಪಿಯ ಎಲ್ಲ ನಾಯಕರು ಒಟ್ಟಾಗಿ ನಿಂತು ಬಸವರಾಜ್‌ ಹುಂದ್ರಿ ಪರ ಪ್ರಚಾರ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Karnataka Election : ಕೇರಳ ಸ್ಟೋರಿ ನಿಷೇಧ ಆಗ್ರಹಿಸುವ ಕಾಂಗ್ರೆಸ್‌ ಬಿಬಿಸಿ ಸ್ಟೋರಿ ಬ್ಯಾನ್‌ ಮಾಡಿ ಅನ್ನಲ್ಲ ಯಾಕೆ?: ಹಿಮಂತ ಬಿಸ್ವಾ

ಬಸವರಾಜ್‌ ಹುಂದ್ರಿಗೆ ಏನು ಪ್ಲಸ್?

ಸತೀಶ್‌ ಜಾರಕಿಹೊಳಿ ಅವರು ಹಿಂದುತ್ವದ ಬಗ್ಗೆ ಹಗುರವಾಗಿ ಮಾತನಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿಯು ಈ ವಿಚಾರವನ್ನು ಚುನಾವಣೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ರೋಡ್‌ ಶೋ, ಬಜರಂಗದಳವನ್ನು ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್‌ನ ವಿವಾದಾತ್ಮಕ ಘೋಷಣೆ ಇತ್ಯಾದಿ ಸಂಗತಿಗಳು ಬಿಜೆಪಿ ಅಭ್ಯರ್ಥಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಕೆಳ ವರ್ಗದ ಜನ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಪರ ಒಲವು ತೋರುತ್ತಿರುವುದೂ ಕಮಲದ ಅಭ್ಯರ್ಥಿ ಬಸವರಾಜ ಹುಂದ್ರಿ ಅವರಿಗೆ ಅನುಕೂಲಕರವಾಗಿದೆ.‌

ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಅವರು ಈ ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಆದರೆ, ಹಿಂದೆಲ್ಲ ನಿರಾಯಾಸವಾಗಿ ಗೆಲುವು ಸಾಧಿಸುತ್ತಿದ್ದ ಸತೀಶ ಜಾರಕಿಹೊಳಿಗೆ ಈ ಬಾರಿ ಚುನಾವಣಾ ಪ್ರಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತಾಗಿದೆ. ಸ್ವತಃ ಅಖಾಡಕ್ಕೆ ಇಳಿದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿ ಟಿಕೆಟ್‌ಗೆ ಪ್ರಯತ್ನಪಡುತ್ತಿದ್ದ ಮಾರುತಿ ಅಷ್ಟಗಿ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರ ಸೇರ್ಪಡೆಯಿಂದ ಜೆಡಿಎಸ್‌ಗೆ ಬಲ ಬಂದಂತಾಗಿದೆ.

ಒಟ್ಟಾರೆ, ಕಾಂಗ್ರೆಸ್‌ನ ಭದ್ರಕೋಟೆ ಎನ್ನಲಾಗುತ್ತಿದ್ದ ಯಮಕನಮರಡಿ ಕ್ಷೇತ್ರದಲ್ಲಿ ಈ ಬಾರಿ ಸತೀಶ್‌ ಜಾರಕಿಹೊಳಿ ಅವರಿಗೆ ಸೋಲುಣಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ.

ಈರಣ್ಣ ಕಡಾಡಿ ಪ್ರಚಾರ

ಯಮಕನಮರಡಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಹ ಅಖಾಡಕ್ಕೆ ಇಳಿದಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ್‌ ಹುಂದ್ರಿ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಈರಣ್ಣ ಕಡಾಡಿ, ಕಳೆದ ಎರಡುಮೂರು ಅವಧಿಯಲ್ಲಿ ನೀವು ಆಯ್ಕೆ ಮಾಡಿದ ಅಭ್ಯರ್ಥಿಯಿಂದ ಅಭಿವೃದ್ಧಿ ಆಗಿಲ್ಲ. ಜನಸಾಮಾನ್ಯರ ಕೈಗೆ ಅವರು ಸಿಗುತ್ತಿಲ್ಲ. ಅವರ ಪಿಎಗಳು ದರ್ಬಾರ್‌ ನಡೆಸುತ್ತಿದ್ದಾರೆ. ಅಂತಹ ಅಭ್ಯರ್ಥಿಯನ್ನು ಸೋಲಿಸುವಂತಹ ತಾಕತ್ತು ಇರುವುದು ಬಿಜೆಪಿಗೆ ಮಾತ್ರ. ಡಬಲ್ ಎಂಜಿನ್‌ ಸರ್ಕಾರದ ಲಾಭ ಇಲ್ಲಿಯವರೆಗೂ ಯಮಕನಮರಡಿಗೆ ಸಿಕ್ಕಿಲ್ಲ. ಈ ಲಾಭವನ್ನು ಜನರು ಪಡೆಯಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Karnataka Election 2023: ಮೇ 10ಕ್ಕೆ ಹಾಕಿ ಮತ; ಬೆಣ್ಣೆ ದೋಸೆ, ಮೈಸೂರ್ ಪಾಕ್ ಪೂರ್ತಿ ಉಚಿತ, ಸಿನಿಮಾ ಟಿಕೆಟ್ಟೂ ಖಚಿತ

ಬಿಜೆಪಿಯಿಂದ ಸಾಮಾನ್ಯ ಅಭ್ಯರ್ಥಿ ಆಯ್ಕೆ

ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಘೋಷಣೆ‌ ಮಾಡಿದ ಅಭ್ಯರ್ಥಿ ಎದುರು ಬಿಜೆಪಿಯಿಂದ ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಈ ಅಂಶ ಜನರನ್ನು ಸೆಳೆಯುತ್ತಿದೆ. ನಮ್ಮ ಅಭ್ಯರ್ಥಿ ಬಸವರಾಜ್ ಹುಂದ್ರಿ ವಿನಯವಂತರು. ಅವರು ಉದಾತ್ತ ಭಾವವನ್ನು ಹೊಂದಿದ್ದು, ಅವರನ್ನು ಆಯ್ಕೆ ಮಾಡಬೇಕು. ಹತಾಶರಾಗಿರುವ ವಿರೋಧಿಗಳು ಜನರಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಲಿಂಗಾಯತ ಸಮುದಾಯ ಸೇರಿ ಎಲ್ಲ ಸಮುದಾಯದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಒಕ್ಕಲಿಗ, ಲಿಂಗಾಯತ, ಎಸ್ಸಿ, ಎಸ್ಟಿ ಮೀಸಲಾತಿ ನೀಡಿದ್ದೇವೆ. ಹೀಗಾಗಿ ಬಿಜೆಪಿಗೆ ಮತ ಹಾಕಿ ಎಂದು ಈರಣ್ಣ ಕಡಾಡಿ ಮನವಿ ಮಾಡಿದರು.

Exit mobile version