ಬೆಳಗಾವಿ: ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ (Smart City) ಕಾಮಗಾರಿ ಅವ್ಯವಹಾರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಕಾರಣ, ಎಸ್ಟಿಮೇಟ್ ಹೆಚ್ಚಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.
ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ಮುಂಚೆ ಇದ್ದ ಮಾಹಿತಿಯನ್ನೇ ನೀಡಿದ್ದಾರೆ. ಇದರಲ್ಲಿ ಸಂಶಯ ವ್ಯಕ್ತವಾಗುವಂತಹ ಅಂಶಗಳು ಬಹಳಷ್ಟಿವೆ. ಮೇಲ್ನೋಟಕ್ಕೆ ಓವರ್ ಎಸ್ಟಿಮೇಟ್ ಆಗಿರುವುದನ್ನು ನೋಡಿ ಆಶ್ಚರ್ಯ ಆಗಿದೆ. ಅದಕ್ಕೆ ಅಧಿಕಾರಿಗಳು ತಮ್ಮದೇ ಆದ ಉತ್ತರವನ್ನು ಕೊಡುತ್ತಿದ್ದಾರೆ. ಬೆಳಗಾವಿ ಅಷ್ಟೇ ಅಲ್ಲ ಎಲ್ಲ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಎಸ್ಟಿಮೇಟ್ ಹೆಚ್ಚಾಗಿದೆ. ಮೊನ್ನೆ ಕ್ಯಾಬಿನೆಟ್‌ನಲ್ಲಿಯೂ ಸಹ ಈ ಬಗ್ಗೆ ಚರ್ಚೆ ಆಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅಲ್ಲದೆ, ಈಗಾಗಲೇ ಸ್ಮಾರ್ಟ್ ಸಿಟಿ ಅಡಿ ನಡೆದ ಕಾಮಗಾರಿಯೂ ಗುಣಮಟ್ಟದ್ದಾಗಿಲ್ಲ. ಕಳಪೆ ಕಾಮಗಾರಿ ಆಗಿದೆ. ಎಲೆಕ್ಟ್ರಿಕ್ ಪೋಲ್ ಮಾರುಕಟ್ಟೆಯಲ್ಲಿ 20 ಸಾವಿರ ಇದ್ದರೆ 60ರಿಂದ 70 ಸಾವಿರ ಎಂದು ಇದೆ. ಅದಕ್ಕೆ ದಾಖಲೆ ಬೇಕು ನಾವು ಸಹ ತಜ್ಞರ ಬಳಿ ಮಾಹಿತಿ ಪಡೆಯುತ್ತೇವೆ. ಬಳಿಕ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಪಾರ್ಕ್ ಡೆವೆಲಪ್ಮೆಂಟ್ ಮಾಡಲು ಅನುಮತಿ ನೀಡಲಾಗಿತ್ತು. ಕಟ್ಟಡ ಕಟ್ಟಲು ಕ್ಲಬ್ ಮಾಡಲು ಅನುಮತಿಯನ್ನೇ ಕೊಟ್ಟಿಲ್ಲ. ಹೆರಿಟೇಜ್ ಪಾರ್ಕ್ ಎಂದು ನಮೂದಿಸಿದ್ದಾರೆ. ಏನೇನೋ ಕಟ್ಟಿದರೆ ನಿರ್ವಹಣೆ ಮಾಡುವವರು ಯಾರು? ಎಂದು ಪ್ರಶ್ನೆ ಮಾಡಿದರು.
ಅಕ್ರಮಗಳ ಬಗ್ಗೆ ರಾಜ್ಯ ಮಟ್ಟದಲ್ಲಿಯೇ ತನಿಖೆ ಮಾಡುವ ಬಗ್ಗೆ ನಿರ್ಣಯ ಆಗಿದೆ. ಮೇಲ್ನೋಟಕ್ಕೆ ಬಹಳಷ್ಟು ವ್ಯತ್ಯಾಸ ಆಗಿದೆ. ದುಬೈಗಿಂತಲೂ ಹೆಚ್ಚು ದುಬಾರಿ ಅನ್ನಿಸುತ್ತಿದೆ. ಮೊದಲಿನ ಪ್ಲ್ಯಾನ್‌ಗೂ ಈಗಿಂದಕ್ಕೂ ಬಹಳ ವ್ಯತ್ಯಾಸ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಆನೆ ಬಾಲಕ್ಕೆ ನಾನು, ಲಕ್ಷ್ಮಿ ಹೆಬ್ಬಾಳ್ಕರ್ ಜಗಳವಾಡಬೇಕಿದೆ
ಸ್ಮಾರ್ಟ್‌ಸಿಟಿಯಲ್ಲಿ ಎಷ್ಟು ಹಣವನ್ನು ಉಳಿಸಲಾಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, “ಜೀರೋ ಜೀರೋ”, ಸಾವಿರ ಕೋಟಿ ರೂಪಾಯಿ ಹೋಗಿದೆ. ಮೇಡಂ (ಲಕ್ಷ್ಮೀ ಹೆಬ್ಬಾಳ್ಕರ್) ಮತ್ತು ನಾವು 20 ಕೋಟಿ ರೂಪಾಯಿಗಾಗಿ ಈಗ ಜಗಳ ಮಾಡಬೇಕಾಗಿದೆ. ಆನೆ ಹೋಗಿದೆ, ಬಾಲಕ್ಕೆ ಜಗಳವಾಡಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: kodi mutt swamiji : ರಾಜ್ಯದಲ್ಲಿ ಕಾದಿದೆ ಜಲಪ್ರಳಯ, ಕೆಲ ಆಪತ್ತು; ಜಾಗತಿಕವಾಗಿ 3 ಗಂಡಾಂತರ: ಕೋಡಿಹಳ್ಳಿ ಶ್ರೀ
ಖಾಸ್‌ಬಾಗ್‌ನಲ್ಲಿ ತರಕಾರಿ ಮಳಿಗೆ ನಿರ್ಮಿಸಿ ಇನ್ನೂ ಹಂಚಿಕೆ ಮಾಡಿಲ್ಲ. ಈ ರೀತಿ ಬಹಳಷ್ಟು ಆಗಿದ್ದು ಸ್ಮಾರ್ಟ್‌ಸಿಟಿ ಎಂಡಿಗೆ ಮಾಹಿತಿ ನೀಡಲು ಹೇಳಿದ್ದೇವೆ. ಇನ್ನು ಹದಿನೈದು ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.