Site icon Vistara News

ʼಹಿಂದು ಪದಕ್ಕೆ ಕೀಳು ಅರ್ಥವಿದೆʼ: ಬೇಕಿದ್ದರೆ ವಾಟ್ಸ್‌ಆ್ಯಪ್‌, ಯೂಟ್ಯೂಬ್‌ ನೋಡಿ ಎಂದ ಸತೀಶ್‌ ಜಾರಕಿಹೊಳಿ

ಸತೀಶ್‌ ಜಾರಕಿಹೊಳಿ ಕನ್ನಡ ಬಾವುಟ ಗಲಾಟೆ

ಚಿಕ್ಕೋಡಿ: ಹಿಂದು ಶಬ್ದ ಪರ್ಷಿಯಾದಿಂದ ಬಂದಿರುವುದು ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಇದಕ್ಕೆ ಅತ್ಯಂತ ಕೀಳು ಅರ್ಥವಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಹಿಂದಿಯಲ್ಲಿ ಈ ಕುರಿತು ಮಾತನಾಡಿರುವ ಜಾರಕಿಹೊಳಿ, ಇತಿಹಾಸದ ಕುರಿತು ಮಾತನಾಡಲು ಸಿನಿಮಾ ಉದಾಹರಣೆ ನೀಡಿದರು. ಸಿನಿಮಾದಲ್ಲಿ ಒಬ್ಬೊಬ್ಬರು ಒಂದೊಂದು ಕಡೆ ಬಂದಿರುತ್ತಾರೆ. ಒಬ್ಬರು ಪ್ರಾರಂಭದಲ್ಲಿ ಬಂದಿರುತ್ತಾರೆ, ಕೆಲವರು ಮಧ್ಯದಲ್ಲಿ ಬಂದಿರುತ್ತಾರೆ. ಅದಕ್ಕೇ ಸಿನಿಮಾವನ್ನು ಮೊದಲಿನಿಂದ ನೋಡಬೇಕು. ಆಗ, ಮೂಲನಿವಾಸಿ ಯಾರು, ನಂತರ ಬಂದವರು ಯಾರು? ಎಂದು ತಿಳಿಯುತ್ತದೆ ಎಂದರು.

ಹಿಂದು ಧರ್ಮ, ಆ ಧರ್ಮ ಈ ಧರ್ಮ ಎನ್ನುತ್ತಾರೆ. ಹಿಂದು ಶಬ್ದ ಎಲ್ಲಿಂದ ಬಂತು? ಪರ್ಷಿಯನ್‌ನಿಂದ ಬಂತು. ಅಂದರೆ ಇರಾನ್‌, ಇರಾಕ್‌, ಕಜಖ್‌ಸ್ತಾನದಿಂದ ಬಂದಿದ್ದು. ಭಾರತದ ಜತೆಗೆ ಇದಕ್ಕೆ ಏನು ಸಂಬಂಧ? ಇದರ ಬಗ್ಗೆ ಚರ್ಚೆ ಆಗಬೇಕು. ಈ ಶಬ್ದ ಎಲ್ಲಿಂದ ಬಂತು ಎಂಬುದರ ಕುರಿತು ವಾಟ್ಸ್‌ಆ್ಯಪ್‌, ಯೂಟ್ಯೂಬ್‌ನಲ್ಲಿ ನೋಡಿ.

ಹಿಂದು ಶಬ್ದವನ್ನು ಇಷ್ಟು ಮೇಲೆ ಏಕೆ ಮೆರೆಸುತ್ತೀರಿ? ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತದೆ. ಅದರ ಅರ್ಥ ಬಹಳ ಕೀಳು ಅರ್ಥವಿದೆ. ಈ ಮಾಹಿತಿಯೂ ವೆಬ್‌ಸೈಟ್‌ನಲ್ಲಿದೆ, ಬೇಕಿದ್ದರೆ ನೋಡಬಹುದು. ಎಲ್ಲಿಯದೋ ಶಬ್ದ ತಂದು ಹೇರುತ್ತಿದ್ದೀರ. ಇದರ ಬಗ್ಗೆ ಚರ್ಚೆ ಆಗಬೇಕು. ಇತಿಹಾಸ ತಿಳಿದವರು ಮಾತ್ರ ಇತಿಹಾಸವನ್ನು ರಚಿಸಬಹುದು. ಇತಿಹಾಸವನ್ನು ಮೊದಲು ತಿಳಿಯಿರಿ ಎಂದು ನೆರೆದಿದ್ದ ಜನರಿಗೆ ತಿಳಿಸಿದರು.

ಪ್ರಮೋದ್‌ ಮುತಾಲಿಕ್‌ ಖಂಡನೆ

ಸತೀಶ್‌ ಜಾರಿಹೊಳಿ ಹೇಳಿಕೆಯನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಖಂಡಿಸಿದ್ದಾರೆ. ಹಿಂದು ಶಬ್ದ ಪುರಾತನವಾದದ್ದು, ಆ ಪದಕ್ಕೆ ಅಪಮಾನ ಮಾಡುವುದು ಅಪರಾಧ. ಕಾಂಗ್ರೆಸ್ ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಹಿಂದುತ್ವ, ಹಿಂದುಗಳಿಗೆ ಅವಹೇಳನ ಮಾಡುವುದು ಸರಿಯಲ್ಲ. ಕವಿ ಕುವೆಂಪು, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಸಾವರ್ಕರ್ ಸೇರಿದಂತೆ ಅನೇಕರು ಹಿಂದು ಅಂತ ಬಳಸಿದ್ದಾರೆ.

ಹಿಂದು ಎನ್ನುವುದು ಒಳ್ಳೆಯ ಜೀವನದ ಪದ್ದತಿ ಎಂದು ಸುಪ್ರೀಂ ಕೋರ್ಟ್ 25 ವರ್ಷದ ಹಿಂದೆಯೇ ಹೇಳಿದೆ. ಹಿಂದು ಪದ ಜಾತಿ, ಮತ ಸೂಚಕವಲ್ಲದ ಪದಕ್ಕೆ ಅಪಮಾನ ಸರಿಯಲ್ಲ. ನಾಸ್ತಿಕವಾದಿಗಳಿಗೆ ಹಿಂದು ಪದದ ಬಗ್ಗೆ ಮಾತನಾಡು ಹಕ್ಕಿಲ್ಲ. ಸತೀಶ್ ಜಾರಕಿಹೊಳಿ ಅವರು ಈ ಹೇಳಿಕೆ ಹಿಂಪಡೆದು ಕ್ಷಮೆ ಕೇಳುವಂತೆ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಹಿಂದು ಜನಜಾಗೃತಿ ಸಮಿತಿ ಖಂಡನೆ

ಸತೀಶ್ ಜಾರಕಿಹೊಳಿ ಹಿಂದು ಪದದ ಬಗ್ಗೆ ಕೆಟ್ಟ ರೀತಿಯಾಗಿ ಮಾತನಾಡಿರುವುದನ್ನು ಖಂಡನೆ ಮಾಡುತ್ತೇವೆ ಎಂದು ಹಿಂದು ಜನಜಾಗೃತಿ ಸಮಿತಿಯ ಮೋಹನ್‌ ಗೌಡ ಹೇಳಿದ್ದಾರೆ. ಹಿಂದು ಶಬ್ದದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರೇ, ಮೊದಲು ಸೋನಿಯಾ ಗಾಂಧಿಯ ಮೂಲ ಹೇಳಿ. ಅವರು ಎಲ್ಲಿಂದ ಬಂದಿದ್ದಾರೆ ಎಂದು ತಿಳಿಸಿ. ಸತೀಶ್‌ ಜಾರಕಿಹೊಳಿ, ಎಲ್ಲ ಹಿಂದು ಬಾಂಧವರಲ್ಲಿ ಕ್ಷಮೆ ಕೇಳಬೇಕು. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇವರು ಕ್ಷಮೆ ಕೇಳಬೇಕು. ಇಲ್ಲವೆಂದರೆ ನಾವು ಉಗ್ರ ಹೋರಾಟ ಮಾಡುತ್ತೇವೆ. ಈ ವಿಚಾರವನ್ನು ಡಿ.ಕೆ. ಶಿವಕುಮಾರ್ ಹಾಗೂ ಖರ್ಗೆ ಅವರ ಗಮನಕ್ಕೂ ತರುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ | Belagavi Politics | ಜಾರಕಿಹೊಳಿ ಸಹೋದರರನ್ನು ಒಟ್ಟುಗೂಡಿಸಿದ ಲಕ್ಷ್ಮೀ!

Exit mobile version